More

    ಸೋತ ಅವಿಶ್ವಾಸ ಗೆದ್ದ ಮೋದಿ; ಶುಭಶಕುನ ಎಂದ ಪ್ರಧಾನಿ

    ನವದೆಹಲಿ: ನಿರೀಕ್ಷೆಯಂತೆ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣದ ಬಳಿಕ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವಿಶ್ವಾಸ ಪ್ರಸ್ತಾಪವನ್ನು ಮತಕ್ಕೆ ಹಾಕಿದರು. ಧ್ವನಿಮತದ ಮೂಲಕ ನಿರ್ಣಯ ಸೋಲು ಕಂಡಿದೆ. ಪ್ರಧಾನಮಂತ್ರಿ ಭಾಷಣದ ಮಧ್ಯೆಯೇ ವಿಪಕ್ಷದ ಹಲವು ಸಂಸದರು ಸಭಾತ್ಯಾಗ ಮಾಡಿದ್ದರಿಂದ ವಿಪಕ್ಷ ಸಂಸದರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿತ್ತು.

    ಇಂಥ ಅವಿಶ್ವಾಸ ನಿರ್ಣಯಗಳು ನನಗೆ ಶುಭ ಸಂಕೇತ ಎಂದು ವಿಪಕ್ಷಗಳನ್ನೇ ತಿವಿದ ಪಿಎಂ, ವಾಸ್ತವದಲ್ಲಿ ಇದು ಪ್ರತಿಪಕ್ಷಗಳಿಗೇ ಎದುರಾಗಿದ್ದ ಪರೀಕ್ಷೆ. ಅವರ ಬಗ್ಗೆ ಜನರೇ ನಿರ್ಣಯ ತೆಗೆದುಕೊಳ್ಳುತ್ತಾರೆ. ನಂತರದಲ್ಲಿ ದೊಡ್ಡ ಜನಾದೇಶದೊಂದಿಗೆ ಬಿಜೆಪಿಯನ್ನೇ ಅಧಿಕಾರಕ್ಕೆ ತರುತ್ತಾರೆ. 2028ರಲ್ಲೂ ಇಂಥದ್ದೇ ಸನ್ನಿವೇಶಕ್ಕೆ ದೇಶ ಸಾಕ್ಷಿಯಾಗಲಿದೆ. ವಿಪಕ್ಷದವರು ಯಾವುದೇ ಸಂಸ್ಥೆ ವಿರುದ್ಧ ಮಾತನಾಡಲಿ. ಅಲ್ಲಿಗೆ ಸಂಸ್ಥೆಯ ಅದೃಷ್ಟವೇ ಬದಲಾದಂತೆ ಎಂದರು.

    2018ರಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ನೆನಪಿಸಿ ಕೊಂಡ ಮೋದಿ, ಆಗಲೂ ನಾನು ಇದು ನಮ್ಮ ಸರ್ಕಾರಕ್ಕೆ ಎದುರಾದ ಪರೀಕ್ಷೆಯಲ್ಲ ಎಂದಿದ್ದೆ. ಮತದಾನ ನಡೆದಾಗ ಅವರ ಶಕ್ತಿ ಏನೆಂಬುದೇ ಬಯಲಾಯ್ತು. ನಾವು ಜನರ ಮುಂದೆ ಹೋದಾಗ, ಜನರು ವಿಪಕ್ಷ ಗಳ ಮೇಲಿನ ಅವಿಶ್ವಾಸವನ್ನು ಘೊಷಿಸಿ ದರು. ಒಂದು ರೀತಿಯಲ್ಲಿ, ವಿರೋಧ ಪಕ್ಷಗಳ ಅವಿಶ್ವಾಸ ನಿರ್ಣಯವು ನಮಗೆ ಶುಭಶಕುನವಾಗಿದೆ ಎಂದರು.

    ಮಣಿಪುರದಲ್ಲಿ ಶಾಂತಿ ಮರಳಲಿದೆ: ಅವಿಶ್ವಾಸ ನಿರ್ಣಯದ ಮೇಲೆ ಮೂರು ದಿನ ಭರಪೂರ ಚರ್ಚೆಗಳು ನಡೆದಿದ್ದು, ಬುಧವಾರ ಗೃಹ ಸಚಿವ ಅಮಿತ್ ಶಾ ಮಣಿಪುರ ಹಿಂಸಾಚಾರದ ಬಗ್ಗೆ ಸುದೀರ್ಘ ಉತ್ತರ ನೀಡಿದ್ದರು. ಹೀಗಾಗಿ, ಮಣಿಪುರದ ಬಗ್ಗೆ ನಾನು ಹೆಚ್ಚು ಹೇಳುವಂಥದ್ದಿಲ್ಲ. ವಿಪಕ್ಷಗಳ ಪ್ರಶ್ನೆಗೆ ಗೃಹ ಸಚಿವರೇ ಉತ್ತರ ನೀಡಿದ್ದಾರೆ. ವಿಪಕ್ಷಗಳು ಕೇವಲ ರಾಜಕೀಯ ಮಾಡುತ್ತಿವೆ ಎಂದರು. ಮಣಿಪುರ ಸಹಜ ಸ್ಥಿತಿಗೆ ಮರಳಿ ಶಾಂತಿ ಮತ್ತೆ ನೆಲೆಸಲಿದೆ ಎಂದು ಭರವಸೆ ನೀಡಿದ ಮೋದಿ, ಇಡೀ ದೇಶ ಮತ್ತು ಸಂಸತ್ತು ಮಣಿಪುರದೊಂದಿಗಿದೆ ಎಂದು ಅಲ್ಲಿನ ಎಲ್ಲ ಸೋದರಿ, ತಾಯಂದಿರಿಗೆ ಹೇಳಬಯಸುತ್ತೇನೆ.

    ಮಣಿಪುರದ ಅಭಿವೃದ್ಧಿಗಾಗಿ ನಾವು ಶ್ರಮಿಸಲಿದ್ದೇವೆ. ಅಲ್ಲಿನ ಘಟನಾವಳಿಗಳಿಗೆ ವಿಪಕ್ಷಗಳ ರಾಜಕಾರಣವೇ ಕಾರಣ ಎಂದು ದೂರಿದರು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದ ಕ್ರಮಗಳ ಬಗ್ಗೆ ವಿವರಣೆ ನೀಡಿದ ಮೋದಿ, ಅಲ್ಲಿಗೆ ನಾನೇ 50ಕ್ಕಿಂತ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ ಮತ್ತು ನಮ್ಮ ಸಚಿವರು 400 ಬಾರಿ ಭೇಟಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು. 1966ರಲ್ಲಿ ಮಿಜೋರಾಂನಲ್ಲಿ ನಾಗರಿಕರ ಮೇಲೆ ದಾಳಿ ಮಾಡಲು ವಾಯುಸೇನೆ ಬಳಸಿಕೊಂಡಿದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ ಮತ್ತು 80ರ ದಶಕದಲ್ಲಿ ಅಕಾಲ್ ತಖ್ತ್ ವಿರುದ್ಧವೂ ಮಿಲಿಟರಿ ದಾಳಿ ನಡೆಸಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

    ವಿಪಕ್ಷಗಳ ವರದಾನ…! : ಮೋದಿ ತೇರಿ ಕಬ್ರ್ ಖುದೇಗಿ (ಮೋದಿ ನಿಮ್ಮ ಸಮಾಧಿಯನ್ನು ಅಗೆಯಲಾಗುತ್ತಿದೆ) ಎಂಬುದು ಅವರ ನೆಚ್ಚಿನ ಘೊಷಣೆ. ಆದರೆ, ನನಗೆ ಅವರ ನಿಂದನೆಗಳು ಮತ್ತು ಅಸಂಸದೀಯ ಮಾತುಗಳೇ ಟಾನಿಕ್​ನಂತಿವೆ. ಬಹುಶಃ ವಿರೋಧ ಪಕ್ಷಗಳಿಗೆ ರಹಸ್ಯ ವರವೊಂದು ಪ್ರಾಪ್ತಿಯಾಗಿದೆ. ಅವರು ಯಾರ ವಿರುದ್ಧ ಮಾತನಾಡುತ್ತಾರೋ ಅಂಥವರು ಸಮಗ್ರವಾಗಿ ಬೆಳೆಯುತ್ತಾರೆ. ಇದಕ್ಕೆ ನನಗಿಂಥ ಉತ್ತಮ ಉದಾಹರಣೆ ಇಲ್ಲ ಎಂದು ಚುಚ್ಚಿದ ಮೋದಿ, ಬ್ಯಾಂಕಿಂಗ್ ವಲಯ, ಎಚ್​ಎಎಲ್, ಎಲ್​ಐಸಿಯಂತಹ ಸಂಸ್ಥೆಗಳ ವಿರುದ್ಧ ಋಣಾತ್ಮಕ ಟೀಕೆಗಳ ಹೊರತಾಗಿಯೂ ಈ ಸಂಸ್ಥೆಗಳು ಉತ್ತುಂಗ ಸ್ಥಿತಿ ತಲುಪಿವೆ ಎಂದು ಉದಾಹರಣೆ ನೀಡಿದರು.

    ವಿಪಕ್ಷಗಳ ವೈಫಲ್ಯ, ಕೇಂದ್ರದ ಮೇಲುಗೈ

    ಮುಂಗಾರು ಅಧಿವೇಶನ ಆರಂಭದ ಒಂದು ದಿನಕ್ಕೆ ಮುನ್ನ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರದ ವಿಡಿಯೋ ವೈರಲ್ ಆಗಿದ್ದರಿಂದ ಮಣಿಪುರ ವಿಷಯವನ್ನಿಟ್ಟುಕೊಂಡೇ ವಿಪಕ್ಷಗಳು ಕೇಂದ್ರವನ್ನು ಗುರಿ ಮಾಡಲು ನಿರ್ಧರಿಸಿದವು. ವಿಪಕ್ಷಗಳ ಗದ್ದಲದಿಂದಾಗಿ ಹಲವು ದಿನ ಸದನವೇ ನಡೆಯಲಿಲ್ಲ. ಪ್ರಧಾನಿ ಮೋದಿ ಮಾತನಾಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ನೇತೃತ್ವದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಈ ನಿರ್ಣಯದ ಮೇಲಿನ ಚರ್ಚೆಯಲ್ಲಿ ವಿಪಕ್ಷಗಳಲ್ಲೇ ವೈಚಾರಿಕ ಸ್ಪಷ್ಟತೆ ಕಂಡುಬರಲಿಲ್ಲ. ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ ಎಂದು ದೂರಿದ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ವಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಹಿಂಸಾಚಾರ, ಹತ್ಯೆ, ಸಂಘರ್ಷಗಳ ಬಗ್ಗೆ ಏನೂ ಮಾತನಾಡಲಿಲ್ಲ. ರಾಹುಲ್ ಭಾಷಣ ಕೇವಲ ಮೋದಿಯವರನ್ನೇ ಗುರಿ ಮಾಡಿದಂತಿತ್ತು. ಆರಂಭದ 19 ನಿಮಿಷಗಳನ್ನು ಆತ್ಮಾವಲೋಕನಕ್ಕೆ ಮೀಸಲಿಟ್ಟರು. ಮಣಿಪುರ ವಿಷಯದಲ್ಲಿ ಗೌರವ್ ಗೊಗೊಯ್ ಭಾಷಣ ತಕ್ಕಮಟ್ಟಿಗೆ ಪರಿಣಾಮಕಾರಿ ಎನಿಸಿದರೂ, ಗೃಹ ಸಚಿವ ಅಮಿತ್ ಷಾ ಈ ಸಂಘರ್ಷಕ್ಕೆ ಐತಿಹಾಸಿಕ ಕಾರಣಗಳನ್ನೂ ವಿವರಿಸುತ್ತ, ಈ ವಿಷಯದಲ್ಲಿ ನಾವೇಕೆ ರಾಜಕೀಯ ಮಾಡಬಾರದು ಎಂಬುದನ್ನೂ ವಿವರಿಸಿದರು. ಅಕ್ರಮ ಒಳನುಸುಳುವಿಕೆ ಹೆಚ್ಚಾಗಿ, ಸಮುದಾಯಗಳಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗುತ್ತಿರುವುದೂ ಕಾರಣ ಎಂದು, ಕೇಂದ್ರ ಕೈಗೊಂಡ ಕ್ರಮಗಳನ್ನೆಲ್ಲ ವಿವರಿಸಿದರು. ಕೇಂದ್ರದ ವಿರುದ್ಧ ಅವಿಶ್ವಾಸವಿರುವುದು ಯಾವ ಕಾರಣಕ್ಕಾಗಿ ಎಂಬುದನ್ನು ದಾಖಲೆ ಸಮೇತ ವಿವರಿಸುವ ಬದಲು, ಗಾಳಿಯಲ್ಲಿ ಗುಂಡು ಹೊಡೆವ ಕೆಲಸ ಆಗಿದೆ ಎಂದು ಕೆಲ ಕಾಂಗ್ರೆಸ್ ಸಂಸದರೇ ಮಾತನಾಡಿಕೊಂಡಿದ್ದಾರೆ. ಮೋದಿ ಮಾತನಾಡಬೇಕು ಎಂದು ಹಠ ಹಿಡಿದ ಸಂಸದರು, ಅವರ ಭಾಷಣ ಮುಗಿಯುವ ಮುನ್ನವೇ ಸಭಾತ್ಯಾಗ ಮಾಡಿದರು. ಹಾಗಾದರೆ ವಿಪಕ್ಷಗಳು ಇಷ್ಟು ದಿನ ಗದ್ದಲ ಎಬ್ಬಿಸಿದ್ದಾದರೂ ಏತಕ್ಕೆ ಎಂಬುದು ಬಿಜೆಪಿ ಸಂಸದರ ಪ್ರಶ್ನೆಯಾಗಿತ್ತು.

    ನೋಬಾಲ್​ಗೆ ಬಿಜೆಪಿ ಸಿಕ್ಸರ್

    ಅಧಿವೇಶನದುದ್ದಕ್ಕೂ ಗದ್ದಲ, ಗಲಾಟೆ ಎಬ್ಬಿಸಿದ ವಿಪಕ್ಷಗಳ ನಡೆ ವಿರುದ್ಧ ತಮ್ಮ ವಾಗ್ಬಾಣಗಳ ಮೂಲಕ ಕಿಡಿಕಾರಿದ ಪ್ರಧಾನಿ, ಪ್ರಮುಖ ವಿಧೇಯಕಗಳ ಮೇಲೆ ಚರ್ಚೆ ನಡೆಸಲು ಬಿಡದೆ ಜನರಿಗೇ ಮೋಸ ಮಾಡಿದ್ದಾರೆ. ದೇಶಕ್ಕಿಂತ ಪಕ್ಷಗಳೇ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೇಲಿಂದ ಮೇಲೆ ವಿಪಕ್ಷಗಳು ನೋಬಾಲ್ ಹಾಕುತ್ತಿದ್ದರೆ, ಸರ್ಕಾರ ಆ ಎಸೆತಗಳಲ್ಲಿ ಸಿಕ್ಸರ್​ಗಳನ್ನು ಬಾರಿಸುತ್ತಿದೆ ಎಂದಾಗ ಎನ್​ಡಿಎ ಸಂಸದರು ನಗೆಗಡಲಲ್ಲಿ ತೇಲಿದರು.

    ಮೋದಿ ಭಾಷಣದ ಮುಖ್ಯಾಂಶಗಳು

    • ಮಣಿಪುರ ಹೊಸ ಆತ್ಮವಿಶ್ವಾಸ ದೊಂದಿಗೆ ಮುನ್ನಡೆಯಲಿದೆ
    • ಮಣಿಪುರ, ಈಶಾನ್ಯ ರಾಜ್ಯ ಗಳನ್ನು ನಿರ್ಲಕ್ಷ್ಯ ಮಾಡಿದ್ದೇ ಕಾಂಗ್ರೆಸ್
    • ಕಾಂಗ್ರೆಸ್ ಇತಿಹಾಸವೇ ಭಾರತ ಮಾತೆಯನ್ನು ಕತ್ತರಿಸುವುದಾಗಿದೆ
    • ದೇಶಕ್ಕೆ ಕಾಂಗ್ರೆಸ್ ಪಕ್ಷದ ಮೇಲೆಯೇ ವಿಶ್ವಾಸವಿಲ್ಲ
    • 2028ಕ್ಕೆ ಕಾಂಗ್ರೆಸ್ ಮತ್ತೆ ಅವಿ ಶ್ವಾಸಗೊತ್ತುವಳಿ ಮಂಡಿಸಲಿದೆ
    • ಆಗ ಭಾರತ ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆಯಾಗಿರಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts