Sleep : ನಿದ್ರೆ ಅನ್ನೋದು ಮಾನವ ದೇಹಕ್ಕೆ ತುಂಬಾನೇ ಅವಶ್ಯಕ. ಏಕೆಂದರೆ, ದೇಹವು ನಿದ್ರೆಯಲ್ಲಿ ಅಗತ್ಯವಿರುವಷ್ಟು ವಿಶ್ರಾಂತಿಯನ್ನು ಪಡೆಯುತ್ತದೆ. ನೀವು ಚೆನ್ನಾಗಿ ನಿದ್ರಿಸಿದಷ್ಟೂ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ಅನೇಕ ಜನರು ನಿದ್ರೆಯಿಂದ ದೂರವಿರುತ್ತಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಕೆಲಸದಂತಹ ಹಲವು ರೀತಿಯ ಒತ್ತಡಗಳಿಂದಾಗಿ ನಿದ್ರೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮೊಬೈಲ್ ದಾಸರಾಗಿ ತಡರಾತ್ರಿ ನಿದ್ರೆಗೆ ಜಾರುವ ಮಂದಿ ಹೆಚ್ಚಾಗುತ್ತಿದ್ದಾರೆ. ಅನೇಕ ಮಂದಿ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದು, ಅಂತಹ ಜನರಿಗೆ ಈ ಸುದ್ದಿ ಸ್ವಲ್ಪ ಸಮಾಧಾನಕರವಾಗಿರಲಿದೆ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ನಿದ್ರೆಯ ಅಭ್ಯಾಸವಿದೆ. ಆದರೆ, ವಿಶೇಷ ಸ್ಥಾನದಲ್ಲಿ ನಿದ್ರಿಸುವುದು ನಮಗೆ ತುಂಬಾ ಶಾಂತಿಯುತ ನಿದ್ರೆಯನ್ನು ನೀಡುತ್ತದೆ. ಅಷ್ಟೇ ಅಲ್ಲ, ಆ ಒಂದು ಸ್ಥಾನದಲ್ಲಿ ನಿದ್ರಿಸುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆಯಂತೆ. ಹಾಗಾದರೆ, ಆ ಮಲಗುವ ಭಂಗಿ ಯಾವುದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ, ಬಹುತೇಕ ಜನರು ತಮ್ಮ ಪಾದಗಳನ್ನು ಕಂಬಳಿಯಿಂದ ಮುಚ್ಚಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ರೀತಿ ಮಲಗಿರುವಾಗ ಕೆಲವೊಮ್ಮೆ ಎರಡೂ ಕಾಲುಗಳು ಗೊತ್ತಿಲ್ಲದೇ ಕಂಬಳಿಯಿಂದ ಹೊರಬರುತ್ತವೆ. ಈ ವೇಳೆ ಆ ಕಾಲುಗಳನ್ನು ಮತ್ತೆ ಕಂಬಳಿ ಒಳಗೆ ಎಳೆದುಕೊಳ್ಳುತ್ತೇವೆ. ಕೆಲವೇ ಕೆಲವು ಮಂದಿ ಉದ್ದೇಶಪೂರ್ವಕವಾಗಿ ಎರಡೂ ಕಾಲುಗಳನ್ನು ಹೊರಗೆ ಹಾಕಿ ಮಲಗುತ್ತಾರೆ.
ವಾಸ್ತವವಾಗಿ, ಎರಡೂ ಕಾಲುಗಳನ್ನು ಕಂಬಳಿಯಿಂದ ಹೊರಗೆ ಹಾಕಿ ಮಲಗುವುದರಿಂದ ನಿಮಗೆ ಹೆಚ್ಚು ಶಾಂತಿಯುತವಾಗಿ ನಿದ್ರೆ ಬರುತ್ತದೆಯಂತೆ. ಇದು ಕೇಳಲು ವಿಚಿತ್ರ ಎನಿಸಿದರೂ ಇದೇ ಸರಿಯಾದ ವಿಧಾನ ಎನ್ನುತ್ತಾರೆ ತಜ್ಞರು. ಅದಕ್ಕೆ ಒಂದು ಕಾರಣವಿದೆ. 2023 ರಲ್ಲಿ ಜರ್ನಲ್ ಆಫ್ ಫಿಸಿಯೋಲಾಜಿಕಲ್ ಆಂಥ್ರೊಪೊಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಎರಡೂ ಕಾಲುಗಳನ್ನು ಕಂಬಳಿಯಿಂದ ಹೊರಗೆ ಹಾಕಿ ಮಲಗುವುದು ದೇಹವು ಶಾಖವನ್ನು ವೇಗವಾಗಿ ತೊಡೆದುಹಾಕಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ರಾತ್ರಿಯ ಸಮಯದಲ್ಲಿ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಕಡಿಮೆಯಾಗುತ್ತದೆ ಮತ್ತು ಬೆಳಗಿನ ಜಾವದಲ್ಲಿ ಕನಿಷ್ಠ ಮಟ್ಟವನ್ನು ತಲುಪುತ್ತದೆ. ಒಂದು ಕಾಲನ್ನು ಹೊರಗೆ ಚಾಚುವುದರಿಂದ ನೀವು ಶಾಖವನ್ನು ಹೊರಹಾಕಲು ಮತ್ತು ತಂಪಾದ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಇದು ಆಳವಾದ, ಹೆಚ್ಚು ವಿಶ್ರಾಂತಿಯ ನಿದ್ರೆಯನ್ನು ಉತ್ತೇಜಿಸುತ್ತದೆ.
ನಮ್ಮ ಪಾದಗಳು ನಮ್ಮ ದೇಹದ ಕೊನೆಯ ತುದಿಯಲ್ಲಿವೆ ಮತ್ತು ಅವು ಅಪಧಮನಿಗಳು ಮತ್ತು ರಕ್ತನಾಳಗಳನ್ನು ಸಂಪರ್ಕಿಸುವ ಅಪಧಮನಿಯ ಅನಾಸ್ಟೊಮೋಸಸ್ ಎಂಬ ವಿಶೇಷ ಸಂಪರ್ಕಗಳನ್ನು ಹೊಂದಿವೆ. ಬಿಸಿಲಿನಲ್ಲಿ, ಈ ಸಂಪರ್ಕಗಳು ತೆರೆದುಕೊಳ್ಳುತ್ತವೆ ಮತ್ತು ಚರ್ಮಕ್ಕೆ ಹೆಚ್ಚಿನ ರಕ್ತ ಹರಿಯಲು ಅನುವು ಮಾಡಿಕೊಡುತ್ತವೆ. ಇದರಿಂದ ನಮ್ಮ ದೇಹ ತಂಪಾಗಿರುತ್ತದೆ. ನಿದ್ರೆ ಮತ್ತು ತಾಪಮಾನದ ನಡುವೆ ನಿಕಟ ಸಂಬಂಧವಿದೆ. ನಾವು ನಿದ್ರಿಸುವ ಮೊದಲೇ ನಮ್ಮ ದೇಹವು ಸ್ವಾಭಾವಿಕವಾಗಿ ತಂಪಾಗುತ್ತದೆ. ನಮ್ಮ ಆಳವಾದ ನಿದ್ರೆಯ ಹಂತದಲ್ಲಿ ಈ ತಂಪಾಗಿಸುವಿಕೆಯು ಅದರ ಕನಿಷ್ಠ ಹಂತವನ್ನು ತಲುಪುತ್ತದೆ. ಇದಕ್ಕಾಗಿಯೇ ನಿದ್ರೆಯ ತಜ್ಞರು ಮಲಗುವ ಮುನ್ನ ಬೆಚ್ಚಗಿನ ಸ್ನಾನ ಮಾಡಲು ಶಿಫಾರಸು ಮಾಡುತ್ತಾರೆ. ನೀವು ಸ್ನಾನದಿಂದ ಹೊರಬಂದಾಗ, ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ನಿದ್ರೆಗೆ ಮುನ್ನ ಸಂಭವಿಸುವ ನೈಸರ್ಗಿಕ ತಂಪಾಗಿಸುವಿಕೆಯನ್ನು ಅನುಕರಿಸುತ್ತದೆ ಮತ್ತು ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ.
ಇನ್ನು ಪಾದಗಳ ಮೇಲಿನ ತಂಪಾದ ಗಾಳಿಯು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ವಿಶ್ರಾಂತಿ ನಿದ್ರೆಗೆ ಅವಶ್ಯಕವಾಗಿದೆ. ಇದು ನಿಮಗೆ ಹೆಚ್ಚು ವೇಗವಾಗಿ ಆಳವಾದ ನಿದ್ರೆಗೆ ಬೀಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ನಿಮ್ಮ ದೇಹವನ್ನು ತಂಪಾಗಿಸುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಹಾಗಾದರೆ ವಿಳಂಬ ಏಕೆ? ನೀವು ಸಹ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಒಮ್ಮೆ ಈ ಮೇಲಿನ ವಿಧಾನವನ್ನು ಪ್ರಯತ್ನಿಸಿ ನೋಡಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.