ಬೇಕಾಗುವ ಪದಾರ್ಥಗಳು
ಪನ್ನೀರು - 200 ಗ್ರಾಂ
ಮೊಸರು - 1/2 ಕಪ್
ಶುಂಠಿಬೆಳುಳ್ಳಿ ಪೇಸ್ಟ್ - 1ಚಮಚ
ಅಚ್ಚಖಾರದ ಪುಡಿ - 2 ಚಮಚ
ಅರಿಶಿನ - 1/2 ಚಮಚ
ಗರಂ ಮಸಾಲ - 1/2 ಚಮಚ
ಜೀರಿಗೆ ಪುಡಿ -1/2 ಚಮಚ
ಚಾಟ್ ಮಸಾಲ - 1/2 ಚಮಚ
ಪೆಪ್ಪರ್ - 1/2 ಚಮಚ
ನಿಂಬೆಹಣ್ಣಿನ ರಸ - 1 ಚಮಚ
ಕಸ್ತೂರಿ ಮೆಂತ್ಯೆ - 1/2 ಚಮಚ
ಕಡ್ಲೆಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಮೊದಲಿಗೆ ಒಂದು ಸಣ್ಣ ತಪ್ಪಲೆಗೆ ಅರ್ಧ ಕಪ್ ಮೊಸರು, ಶುಂಠಿ ಬೆಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ, ಗರಂ ಮಸಾಲ, ಜೀರಿಗೆ ಪುಡಿ, ಚಾಟ್ ಮಸಾಲ, ಪೆಪ್ಪರ್, ನಿಂಬೆಹಣ್ಣಿನ ರಸ, ಕಸ್ತೂರಿ ಮೆಂತ್ಯೆ, ಕಡ್ಲೆಹಿಟ್ಟು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮತ್ತೊಂದೆಡೆ ಪನ್ನಿರನ್ನು ತುಂಡು ತುಂಡಾಗಿ ಚೌಕಾಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ತದನಂತರ ಈ ಮೇಲಿನ ಮಸಾಲೆ ಮಿಶ್ರಣಕ್ಕೆ ತುಂಡು ಮಾಡಿಟ್ಟುಕೊಂಡಿರುವ ಪನ್ನೀರನ್ನು ಹಾಕಿ ಸರಿಯಾಗಿ ಕಲಸಿ. ಪನ್ನೀರ್ ಮಸಾಲೆಯೊಂದಿಗೆ ಸರಿಯಾಗಿ ಮಿಕ್ಸ್ ಆಗಬೇಕು. ಹೀಗೆ ಮಾಡಿದ ನಂತರ ಆ ತಪ್ಪಲೆಯನ್ನು ಒಂದು ಮುಚ್ಚಳ ಅಥವಾ ತಟ್ಟೆಯಿಂದ ಮುಚ್ಚಿಡಿ. ಹೀಗೆ 10 ರಿಂದ 15 ನಿಮಿಷಗಳ ಕಾಲ ಮುಚ್ಚಿಡಬೇಕು. ತದನಂತರ ಗ್ಯಾಸಿನ ಮೇಲೆ ದೋಸೆ ಕಾವಲಿಯನ್ನು ಇಟ್ಟು ಬಿಸಿ ಮಾಡಿಕೊಳ್ಳಿ. ಅದಕ್ಕೆ ಎಣ್ಣೆ ಸವರಿ ಈ ಪನ್ನೀರ್ ತುಂಡುಗಳನ್ನು ಒಂದೊದಾಗಿ ಇಡಿ. ಪನ್ನೀರನ್ನು ಎರಡೂ ಬದಿಗಳಲ್ಲಿ ಬೇಯುವ ಹಾಗೆ ದೋಸೆಯಂತೆ ಒಮ್ಮೆ ಮಗಚಿ ಹಾಕಿ. ಹೀಗೆ ಮಾಡುವುದರಿಂದ ಪನ್ನೀರ್ ಚೆನ್ನಾಗಿ ಫ್ರೈ ಆಗಿ ಟಿಕ್ಕಾ ರೆಡಿಯಾಗುತ್ತೆ. ಫ್ರೈ ಆದ ಪನ್ನೀರ್ ಟಿಕ್ಕಾವನ್ನು ಟೊಮ್ಯಾಟೋ ಕೆಚಪ್ ಅಥವಾ ಮಯೋನಿಸ್ ಜತೆ ಬೆರೆಸಿ ತಿನ್ನುತ್ತಾ ಇದ್ರೆ ಖಂಡಿತಾ ನೀವು ಒನ್ ಮೋರ್ ಒನ್ ಮೋರ್ ಅಂತಿರಾ…
ಸರಳ ಟಿಪ್ಸ್: ಈ ಟಿಕ್ಕಾ ಮಾಡುವಾಗ ನಿಮ್ಮ ಬಳಿ ಈ ಮೇಲೆ ಹೇಳಿರುವ ಕಸ್ತೂರಿ ಮೆಂತ್ಯೆ, ಚಾಟ್ ಮಸಾಲ, ಕಡ್ಲೆಹಿಟ್ಟು ಇಲ್ಲದಿದ್ದರೂ ಕೇವಲ ಉಳಿದ ಪದಾರ್ಥಗಳನ್ನೇ ಬಳಸಿ ಮಾಡಬಹುದು. ಒಂದು ವೇಳೆ ದೋಸೆ ಕಾವಲಿಯಲ್ಲಿ ಮಾಡಲು ಇಷ್ಟವಿಲ್ಲವಾದಲ್ಲಿ ಸ್ಟಿಕ್ಗೆ ಪನ್ನೀರ್ ತುಂಡುಗಳನ್ನು ಹಾಕಿ ಗ್ರಿಲ್ ಮಾಡಿಕೊಳ್ಳಬಹುದು. ಪನ್ನೀರ್ ಜತೆ ಸ್ವಲ್ಪ ಈರುಳ್ಳಿ ಹಾಗೂ ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಬೆರೆಸಿದರೆ ಬಹಳ ರುಚಿಯಾಗಿರುತ್ತದೆ.