ವೃದ್ಧಾಪ್ಯಲ್ಲೂ ಆಕೆ ಭಿಕ್ಷೆ ಬೇಡದೆ ದುಡಿದು ತಿನ್ನುವ ಆಸಕ್ತಿ ತೋರಿರುವುದು ಯುವಕನಿಗೆ ವಿಶೇಷ ಎನಿಸಿತು. ಆಕೆ ಕೇಳಿದ ನಿಗದಿತ ಹಣ ನೀಡಿ ತನ್ನ ತೂಕ ನೋಡದೆ ಹೊರಟನು. ಆಕೆ ಪುನಃ ಆ ಯುವಕನನ್ನು ಕರೆದು, ಹಣ ವಾಪಾಸ್ ಕೊಟ್ಟು, ತೂಕ ನೋಡಿದರೆ ಮಾತ್ರ ಹಣ ಪಡೆಯುವುದಾಗಿ ಹೇಳಿದಳು. ಅಂತೂ ಆಕೆಯ ಅಪೇಕ್ಷೆಯಂತೆ ಯುವಕ ನಡೆದುಕೊಂಡ. ವೃದ್ಧೆಯ ಮುಖ ಅರಳಿತು.
ಪ್ರವಾಸಿಸ್ಥಳಗಳಲ್ಲಿ ಎಲ್ಲೆಲ್ಲೂ ಕಾಣಸಿಗುವ ಭಿಕ್ಷೆಗಾಗಿ ಕೈಯೊಡ್ಡುವ ಜನರ ಹಾಗೆ, ನಮ್ಮ ನಡುವೆ ಅನೀತಿಯಿಂದ ಹಣ ಸಂಪಾದನೆ ಮಾಡುವವರೂ, ಸೋಮಾರಿಗಳೂ ಇದ್ದಾರೆ. ಅವರಂತೆ ನಾವೂ ಬದುಕುವುದರಲ್ಲಿ ಅರ್ಥ ಇರುವುದಿಲ್ಲ. ಆತ್ಮಗೌರವದಿಂದ ದುಡಿದು ತಿನ್ನುವ ಪ್ರವಾಸಿಸ್ಥಳದ ಮುದುಕಿಯ ಹಾಗೆ ನಮ್ಮಲ್ಲಿನ ಅಂತಃಶಕ್ತಿ ಹಾಗೂ ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸನ್ಮಾರ್ಗದ ದುಡಿಮೆಯನ್ನು ಕಂಡುಕೊಳ್ಳಬೇಕು. ನಮ್ಮದೇ ಶ್ರಮದಿಂದ ನಾವು ಗಳಿಸಿದ ಹಣಕ್ಕೆ ಬಹಳ ಮೌಲ್ಯ ಬರುತ್ತದೆ. ವಯಸ್ಸಿಗೆ ಬಂದ ಮಕ್ಕಳು ತಂದೆ-ತಾಯಿಗಳ ಮುಂದೆ ಕೈಚಾಚುವುದು ಕೂಡ ಸೋಮಾರಿತನದ ಸಂಕೇತವೇ ಆಗಿದೆ. ಜೀವನದ ಪ್ರತಿ ಹಂತದಲ್ಲಿಯೂ ನಮ್ಮ ನಮ್ಮ ಅರ್ಹತೆ ಮತ್ತು ಸಾಮರ್ಥ್ಯವನ್ನು ಧನಾತ್ಮಕವಾಗಿ ಬಳಸಿಕೊಳ್ಳುವುದರಿಂದ ಆತ್ಮತೃಪ್ತಿ ದೊರೆಯುತ್ತದೆ. ಜೀವನದಲ್ಲಿ ವಯಸ್ಸು ಮಾಗಿದ ಮೇಲೂ ಪರರಿಗೆ ಕೈಚಾಚದೇ ದುಡಿದು ತಿನ್ನಬೇಕು ಎಂಬ ಮೌಲ್ಯ ದೊಡ್ಡದು. ದುಡಿಯುವ ವಯಸ್ಸಿನಲ್ಲಿ ಸೋಮಾರಿಯಂತೆ ಕುಳಿತು ತಿನ್ನುವ ಬದಲು ಕೈಲಾದ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಮನಸ್ಥಿತಿ ನಮ್ಮಲ್ಲಿ ಬಂದಾಗ ಶ್ರಮದ ಮೌಲ್ಯ ಹೆಚ್ಚುತ್ತದೆ. ಮೋಸ, ಕಳ್ಳತನ, ಸುಲಿಗೆಯನ್ನೇ ಬದುಕಿನ ಭಾಗವಾಗಿ ಬಾಳುವವರೂ ನಮ್ಮ ನಡುವೆಯೇ ಇದ್ದಾರೆ. ಅಂತಹ ಬಾಳಿಗಿಂತ ನಿಯತ್ತಿನ ದುಡಿಮೆ ನಮಗೆ ಹೆಚ್ಚು ಗೌರವವನ್ನು ತಂದುಕೊಡುತ್ತದೆ. ಕೈಯೊಡ್ಡಿ ಪಡೆದ ವಸ್ತುಗಳನ್ನಾಗಲೀ, ಹಣವನ್ನಾಗಲೀ ಬಳಸುವಾಗ ಮನದಲ್ಲಿ ಏನೋ ಒಂದು ರೀತಿಯ ಮುಜುಗರ ಮತ್ತು ಕೀಳರಿಮೆ ಮೂಡುತ್ತದೆ. ‘ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ ಮಾತಿನಂತೆ, ಸೋಮಾರಿತನದ ಬದುಕು ನಮ್ಮನ್ನು ಮುಂದೊಂದು ದಿನ ಕಠಿಣ ಪರಿಸ್ಥಿತಿಗೆ ನೂಕುತ್ತದೆ. ನೀತಿಯುತ ದುಡಿಮೆಯೇ ಬದುಕಿನ ಸೂತ್ರವಾದಾಗ ಬದುಕು ಭರವಸೆಯ ಬೆಳಕಿನೆಡೆಗೆ ಸಾಗುತ್ತದೆ.
ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು/ ಭಂಗಬಟ್ಟುಂಬ ಬಿಸಿ-ಅನ್ನಕಿಂತಲು/ ತಂಗುಳವೆ ಲೇಸು ಸರ್ವಜ್ಞ ಎಂಬ ಸರ್ವಜ್ಞನ ವಚನದ ಸಾಲುಗಳಂತೆ ಇತರರ ಮುಂದೆ ಕೈಚಾಚಿ ಬೇಡಿ ಬೇಕಾದುದನ್ನು ಪಡೆದು ನಲಿಯುವುದಕ್ಕಿಂತ, ತನ್ನತನವನ್ನು ಉಳಿಸಿಕೊಂಡು ಇದ್ದುದರಲ್ಲಿ ನೆಮ್ಮದಿಯಿಂದ ಬಾಳುವುದರಲ್ಲೇ ಬದುಕಿನ ಸಾರ್ಥಕತೆ ಅಡಗಿದೆ.
(ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)