Blood Group : ವ್ಯಕ್ತಿಯ ರಕ್ತದ ಗುಂಪಿಗೂ ಮತ್ತು ಕಾಯಿಲೆಗಳ ನಡುವೆ ಏನಾದರೂ ಸಂಬಂಧವಿದೆಯೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆ ಪ್ರಶ್ನೆಗೆ ಸಂಶೋಧನೆಯ ಮೂಲಕ ಸಂಶೋಧಕರು ಉತ್ತರ ಕಂಡುಕೊಂಡಿದ್ದಾರೆ.
ನಿರ್ದಿಷ್ಟ ರಕ್ತದ ಗುಂಪನ್ನು ಹೊಂದಿರುವ ಜನರು ಪಾರ್ಶ್ವವಾಯು ಅಥವಾ ಸ್ಟ್ರೋಕ್ಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನಗಳು ಸೂಚಿಸುತ್ತವೆ. ಅಂದರೆ, ರಕ್ತದ ಗುಂಪು A ಆಗಿದ್ದರೆ, ಸ್ಟ್ರೋಕ್ ಸಂಭವಿಸುವ ಅಪಾಯ ಹೆಚ್ಚು ಎಂದು ಸಂಶೋಧಕರು ಕಂಡು ಕೊಂಡಿದ್ದಾರೆ.
60 ವರ್ಷಕ್ಕಿಂತ ಕಡಿಮೆ ವಯಸ್ಸಿನ 17,000 ಮಾದರಿಗಳ ಮೇಲೆ ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ. ಇನ್ನೊಂದು ವಿಷಯವೆಂದರೆ ಈ ರೋಗಿಗಳಿಂದ ಪಡೆದ 48 ಆನುವಂಶಿಕ ಅಧ್ಯಯನಗಳ ಡೇಟಾವನ್ನು ವಿಶ್ಲೇಷಿಸುವ ಮೂಲಕ ಈ ಸಂಶೋಧನೆಗಳನ್ನು ಮಾಡಲಾಗಿದೆ.
ಸಂಶೋಧಕರು ಹೇಳುವಂತೆ A ರಕ್ತದ ಗುಂಪಿನ ಜನರು 60 ವರ್ಷಕ್ಕಿಂತ ಮೊದಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಶೇ. 16 ರಷ್ಟು ಹೆಚ್ಚು. ಅದೇ ಸಮಯದಲ್ಲಿ O ರಕ್ತದ ಗುಂಪಿನ ಜನರು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಶೇ. 12 ರಷ್ಟು ಕಡಿಮೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸಿವೆ.
ಅಧಿಕ ರಕ್ತದೊತ್ತಡ, ಧೂಮಪಾನ, ಅಧಿಕ ಕೊಲೆಸ್ಟ್ರಾಲ್, ಅಧಿಕ ಮಧುಮೇಹ, ಬೊಜ್ಜು, ಜಡ ಜೀವನಶೈಲಿ ಮತ್ತು ಕುಟುಂಬದಲ್ಲಿ ಹೃದಯ ಕಾಯಿಲೆ ಅಥವಾ ಪಾರ್ಶ್ವವಾಯುವಿನ ಇತಿಹಾಸ ಹೊಂದಿರುವ ಜನರು ಪಾರ್ಶ್ವವಾಯು ಸಾಧ್ಯತೆಯ ಬಗ್ಗೆ ತಿಳಿದಿರಬೇಕು ಮತ್ತು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ನಿಯಮಿತ ವ್ಯಾಯಾಮ, ಮಧುಮೇಹ, ಕೊಲೆಸ್ಟ್ರಾಲ್ ಮತ್ತು ತೂಕವನ್ನು ನಿಯಂತ್ರಿಸುವುದು, ಕಡಿಮೆ ಕೊಬ್ಬಿನ ಪ್ರೋಟೀನ್, ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು, ಧೂಮಪಾನವನ್ನು ತ್ಯಜಿಸುವುದು ಮತ್ತು ರಕ್ತದೊತ್ತಡ ತಪಾಸಣೆ ಸೇರಿದಂತೆ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಪಾರ್ಶ್ವವಾಯುವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್)