ಆಲೂ ದಹಿ ಭಾರತೀಯ ಆಹಾರಪದ್ಧತಿಯಲ್ಲಿ ರುಚಿಕರ ಕರಿಯಾಗಿದೆ. ಇದನ್ನು ರೋಟಿ, ಪರಾಠ, ಪೂರಿ ಇತ್ಯಾದಿಗಳೊಂದಿಗೆ ಸೇವಿಸಬಹುದು. ಚಿಕ್ಕವರಿಂದ ಹಿರಿಯರೆಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ. ಯಾವುದೇ ಸಮಾರಂಭದ ಮೆನುವಿನಲ್ಲಿ ಇದನ್ನು ಸೇರಿಸಬಹುದು. ಇಂತಹ ರುಚಿಕರ ಆಲೂ ದಹಿ ಕರಿಯನ್ನು 15 ನಿಮಿಷದಲ್ಲಿ ತಯಾರಿಸಬಹುದು. ಆಲೂ ದಹಿ ಕರಿ ಮಾಡುವ ರೆಸಿಪಿಯನ್ನು ಇಲ್ಲಿ ತಿಳಿಸಲಾಗಿದೆ.
ಆಲೂ ದಹಿ ಕರಿ ಮಾಡಲು ಬೇಕಾಗುವ ಪದಾರ್ಥಗಳು
- 6ರಿಂದ 8 ಸಣ್ಣ ಗಾತ್ರದ ಆಲೂಗೆಡ್ಡೆ
- 2 ಚಮಚ ಅಡುಗೆ ಎಣ್ಣೆ
- ಮೊಸರು
- ಅರಿಶಿನ
- ಚಿಲ್ಲಿ ಪೌಡರ್
- ಧನಿಯಾ ಪುಡಿ
- ಜೀರಿಗೆ ಪುಡಿ
- ಬೆಳ್ಳುಳ್ಳಿ
- ಶುಂಠಿ
- ಟೊಮೆಟೊ
- ಹಸಿರು ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಉಪ್ಪು
- ಕಸೂರಿ ಮೇತಿ
ಮಾಡುವ ವಿಧಾನ
- ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಳಿಕ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಆಲೂಗೆಡ್ಡೆಯನ್ನು ಕೆಂಪು ಬಣ್ಣಕ್ಕೆ ತಿರುಗುವವರೆಗೆ ಬಾಣಲೆಯಲ್ಲಿ ಫ್ರೈ ಮಾಡಿ.
- ನಂತರ ಮತ್ತೊಂದು ಪ್ಯಾನ್ ತೆಗೆದುಕೊಂಡು ಎಣ್ಣೆ ಹಾಕಿ ಬಿಸಿಯಾದ ನಂತರ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹಸಿವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ಸಣ್ಣದಾಗಿ ಕತ್ತರಿಸಿರುವ ಟೊಮೆಟೊಗಳನ್ನು ಅದೇ ಬಾಣಲೆಗೆ ಸೇರಿಸಿ. ಹುರಿದ ನಂತರ ಇದನೆಲ್ಲಾ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ.
- ಒಂದು ಬಟ್ಟಲಿನಲ್ಲಿ ಮೊಸರು, ಚಿಲ್ಲಿಪೌಡರ್, ಧನಿಯಾ ಪುಡಿ, ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಮಾಡಿದ ಬಳಿಕ ಇಂಗು ಮತ್ತು ಜೀರಿಗೆ ಸೇರಿಸಿ. ಬಳಿಕ ಹಾಕಿ ಈರುಳ್ಳಿಯನ್ನು ತಿಳಿ ಗುಲಾಬಿ ಬಣ್ಣ ಬರುವವರೆಗೆ ಹುರಿಯಿರಿ, ಬಳಿಕ ಕಸೂರಿ ಮೇತಿ ಸೇರಿಸಿ. ಈಗ ಮಾಡಿಟ್ಟಿರುವ ಮೊಸರು ಮಿಶ್ರಣವನ್ನು ಸೇರಿಸಿ ಮತ್ತು ತಳಹಿಡಿಯದಂತೆ ನೋಡಿಕೊಳ್ಳುತ್ತಾ ಕುದಿಯಲು ಬಿಡಿ. ನಂತರ ಅದಕ್ಕೆ ಹುರಿದ ಆಲೂಗಡ್ಡೆ ಸೇರಿಸಿ ಮತ್ತೆ ಸ್ವಲ್ಪ ಸಮಯ ಕುದಿಸಿ. ಬಳಿಕ ಹಸಿರು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಆಲೂ ದಹಿ ಕರಿ ಸವಿಯಲು ಸಿದ್ಧವಾಗಿದೆ.