ಲೈಫ್‌ಸ್ಟೈಲ್

ಅನ್ನದ ಗುಣ: ಮನೋಲ್ಲಾಸ

Webdesk - Ravikanth
| ಗುರುನಾಥ ಸುತಾರ ಹುಲ್ಯಾಳ 
ನಾವು ಸೇವಿಸಿದ ಅನ್ನವು ಯಾವ ಮೂಲದಿಂದ ಬಂದಿದೆ ಎಂಬುದರ ಮೇಲೆ ನಮ್ಮಗುಣಾವಗುಣಗಳು ರೂಪುಗೊಳ್ಳಬಲ್ಲವು ಎಂಬುದು ಮಹಾಭಾರತ ಯುದ್ಧದ ಒಂದು ಸನ್ನಿವೇಶದಲ್ಲಿ ವೇದ್ಯವಾಗುತ್ತದೆ. ತನ್ನ ಸಚ್ಚಾರಿತ್ರ್ಯ ಹಾಗೂ ನಿಷ್ಠೆಯಿಂದಾಗಿ ಬಹುಶಃ ಶ್ರೀಕೃಷ್ಣನ ನಂತರ ಮಹಾಭಾರತದಲ್ಲಿ ಭೀಷ್ಮಾಚಾರ್ಯರು ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿ ಗಮನ ಸೆಳೆಯುತ್ತಾರೆ. ಅಂದಾಜು 58 ದಿನಗಳ ಕಾಲ ಮರಣಶಯ್ಶೆಯಲ್ಲಿ ಇಚ್ಛಾಮರಣಿಗಳಾಗಿ ಮಲಗಿ ಕುರುಕ್ಷೇತ್ರ ಯುದ್ಧದ ಚಿಂತನೆ ಮಾಡುತ್ತಿದ್ದ ಅವರು, ಯುದ್ಧ ಪರಿಸಮಾಪ್ತಿ ಮಾಡಲು ದ್ರೌಪದಿಗೆ ತಿಳಿವಳಿಕೆ ನೀಡಲು ಬರಮಾಡಿಕೊಳ್ಳುತ್ತಾರೆ.

ಅಜ್ಜನ ಬಳಿಗೆ ಬಂದು ಕಾಲಿಗೆ ನಮಸ್ಕರಿಸಿದ ದ್ರೌಪದಿಯು, ‘ಅಜ್ಜಾ, ನನ್ನನ್ನು ಬರಮಾಡಿದ ಕಾರಣವೇನು?’ ಎಂದು ವಿನಮ್ರಳಾಗಿ ಕೇಳುತ್ತಾಳೆ. ಆಗ ಭೀಷ್ಮರು ಮೆಲು ದನಿಯಲ್ಲಿ, ‘ಅಮ್ಮ ದ್ರೌಪದಿ, ನಿನ್ನ ಕಠಿಣ ನಿಲುವಿನಿಂದ ಈಗ ಯುದ್ಧ ನಡೆದು, ಅಪಾರ ಸಾವು- ನೋವು ಸಂಭವಿಸಿದೆ. ಈ ಯುದ್ಧವು ಯಾರಿಗೂ ಒಳ್ಳೆಯದಲ್ಲ, ಶಾಂತಿಯನ್ನಂತೂ ಉಂಟು ಮಾಡದು. ದಯವಿಟ್ಟು ಈ ಕುರುಕ್ಷೇತ್ರ ಯುದ್ಧ ನಿಲ್ಲಿಸಲು ನೀನು ಮನಸ್ಸು ಮಾಡಮ್ಮಾ, ಶಾಂತಿಯ ಸಂದೇಶ ಹೊತ್ತು ಉಸಿರು ಬಿಡುತ್ತೇನೆ’ ಎನ್ನುತ್ತಾರೆ.

ಆಗ ಕುಪಿತಳಾದ ದ್ರೌಪದಿಯು, ‘ತಾತಾ ಅಂದು ದುಶ್ಶಾಸನನು ನನ್ನನ್ನು ಅಂತಃಪುರದಿಂದ ಅರಮನೆಗೆ ಎಳೆತಂದು ವಿವಸ್ತ್ರಳನ್ನಾಗಿ ಮಾಡಲು ಮುಂದಾದ ಸಂದರ್ಭದಲ್ಲಿ ತುಟಿ ಪಿಟಕ್ ಎನ್ನದ ನೀವು, ಇಂದು ಶಾಂತಿ ಸ್ಥಾಪಿಸುವ ಪರವಾಗಿ ಧ್ವನಿ ಎತ್ತುವ ಕಾರಣವಾದರೂ ಏನು?’ ಎನ್ನುತ್ತಾಳೆ. ‘ಅದು ರಾಗ, ದ್ವೇಷ, ಅಸೂಯೆಗಳನ್ನೇ ಮೈಗೂಡಿಸಿಕೊಂಡಿದ್ದ ಕೌರವರ ಅನ್ನ ಉಂಡ ಪರಿತಾಪವಮ್ಮಾ. ಈಗ ಅಂಥ ವಿಷದ ರಕ್ತವೆಲ್ಲ ಅರ್ಜುನನ ಬಾಣಗಳ ಹೊಡೆತದಿಂದ ಖಾಲಿಯಾಗಿದೆ. ಮನಸ್ಸು, ಹೃದಯ ಪ್ರಫುಲ್ಲವಾಗಿದೆ’ ಎಂದು ಭೀಷ್ಮ ಹೇಳುತ್ತಾರೆ. ಆಗ ದ್ರೌಪದಿಯು ‘ತಾತಾ ಈಗ ನನ್ನ ಮೈಯಲ್ಲಿ ಹರಿಯುತ್ತಿರುವ ರಕ್ತವು ಪಾಂಡವರ ನಿಯತ್ತಿನ ಧರ್ಮದ ಉಸಿರು, ಆ ಅನ್ನದ ಗುಣದಂತೆ ನಾನು ದುಷ್ಟಶಕ್ತಿಗಳು ನಿರ್ನಾಮ ಆಗುವವರೆಗೆ ವಿಶ್ರಮಿಸುವುದಿಲ್ಲ’ ಎನ್ನುತ್ತಾಳೆ. ಬೀಜದಂತೆ ಫಲ, ನೂಲಿನಂತೆ ದಾರ ಎಂಬ ಮಾತು ಒಂದು ಗಿಡ ಮರ ಪ್ರಫುಲ್ಲವಾಗಿ ಬೆಳೆಯಲು ಬೀಜದ ಸ್ವರೂಪ ಎಷ್ಟು ಮುಖ್ಯವೋ ಅಷ್ಟೇ ನಾವು ತೆಗೆದುಕೊಳ್ಳುವ ಅನ್ನ ಕೂಡ ಅಷ್ಟೇ ಮಹತ್ವದ್ದು. ಅನ್ನಂ ಬ್ರಹ್ಮ ಎಂದು ವೇದಗಳು ಸಾರಿರುವಂತೆ ನಮ್ಮೆಲ್ಲರ ಗುಣಗಳು ರೂಪುಗೊಳ್ಳಲು ಅನ್ನ ಹಾಗೂ ಅದರ ಹಿಂದಿನ ಮನಸ್ಸುಗಳ ಗುಣ, ಅವಗುಣಗಳು ಸಾಕಷ್ಟು ಪರಿಣಾಮ ಬೀರುತ್ತವೆ ಎಂಬುದು ಸಾರ್ವಕಾಲಿಕ ಸತ್ಯ.

(ಲೇಖಕರು ಹವ್ಯಾಸಿ ಬರಹಗಾರರು)