Red Ants Chutney: ನಮಗೆಲ್ಲ ಸಾಮಾನ್ಯವಾಗಿ ಚಟ್ನಿ ಅಂದಾಕ್ಷಣ ತೆಂಗಿನಕಾಯಿ, ಶೇಂಗಾ, ಟೊಮೆಟೊ ನೆನಪಾಗುವುದು ಸಹಜ. ಆದರೆ, ಇಲ್ಲೊಂದು ವರ್ಗದ ಜನರು ಮರದಲ್ಲಿ ಗೂಡು ಕಟ್ಟುವ ಕೆಂಪು ಇರುವೆಗಳು ಅಥವಾ ಕೆಂಜಿಗ (ಮಲೆನಾಡಿಗರ ಪದ) ಸಂಗ್ರಹಿಸಿ, ಅದನ್ನೇ ಖಾರ-ಹುಳಿಯಿರುವ ರುಚಿಕರವಾದ ಚಟ್ನಿಯಾಗಿ ಮಾಡಿ, ಚಪ್ಪರಿಸಿಕೊಂಡು ತಿನ್ನುತ್ತಾರೆ ಎಂದರೆ ನಂಬುತ್ತೀರಾ? ಖಂಡಿತ ನಂಬುವಂತ ವಿಷಯವೇ.
ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ವಿಶಿಷ್ಟ ಆಹಾರ ಪದ್ಧತಿ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಅಸಲಿಗೆ, ಇದು ಒಡಿಶಾಗೆ ಮಾತ್ರ ಸೀಮಿತವೇನಲ್ಲ. ಬದಲಿಗೆ ಈ ಅಭ್ಯಾಸ ನಮ್ಮ ಮಲೆನಾಡಿನ ಕೆಲವು ಭಾಗಗಳಲ್ಲಿ ಇಂದಿಗೂ ಇದೆ ಎಂಬುದು ಗಮನಾರ್ಹ. ಭಾರತೀಯ ಆಹಾರ ಪದ್ಧತಿಯಲ್ಲಿ ಚಟ್ನಿಗಳಿಗೆ ವಿಶೇಷ ಸ್ಥಾನವಿದೆ. ಇವುಗಳನ್ನು ತಯಾರಿಸುವುದು ಸುಲಭ. ಅಲ್ಲದೇ, ಇವು ದೈನಂದಿನ ಊಟದ ರುಚಿಯನ್ನು ಹೆಚ್ಚಿಸುತ್ತವೆ. ದೋಸೆ, ಇಡ್ಲಿ, ಚಪಾತಿಗೆ ಹೇಳಿ ಮಾಡಿಸಿದ ಕಾಂಬಿನೇಷನ್ ಎಂದೇ ಹೇಳಬಹುದು.
ಒಡಿಶಾದ ಮಯೂರ್ಭಂಜ್ನಲ್ಲಿ ಸ್ಥಳೀಯವಾಗಿ ‘ಕೈ’ ಎಂದು ಕರೆಯಲಾಗುವ ಕೆಂಪು ನೇಯ್ಗೆ ಇರುವೆಗಳು ಮರಗಳ ಎಲೆಗಳನ್ನು ಜೋಡಿಸಿ ಗೂಡು ಕಟ್ಟುತ್ತವೆ. ಈ ಇರುವೆಗಳನ್ನೇ ಸಂಗ್ರಹಿಸಿ, ಅವುಗಳೊಂದಿಗೆ ವಿವಿಧ ಪದಾರ್ಥಗಳನ್ನು ಸೇರಿಸಿ ಖಾರ-ಹುಳಿ ರುಚಿಯ ಚಟ್ನಿ ತಯಾರಿಸುತ್ತಾರೆ ಇಲ್ಲಿನ ಮಂದಿ. ಈ ಆಹಾರ ಪದ್ಧತಿ ಒಡಿಶಾದ ಮಯೂರ್ಭಂಜ್‌ನ ಬುಡಕಟ್ಟು ಸಮುದಾಯಗಳಲ್ಲಿ ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.
ಕೆಂಪು ನೇಯ್ಗೆ ಇರುವೆಗಳು ಮರದ ಎಲೆಗಳನ್ನು ಒಟ್ಟಿಗೆ ಜೋಡಿಸಿ ಗೂಡು ನಿರ್ಮಿಸುತ್ತವೆ. ಗೂಡಿಗೆ ತೊಂದರೆ ನೀಡಿದಾಗ ಇರುವೆಗಳು ಕಚ್ಚುವುದರಿಂದ ಅವುಗಳನ್ನು ಸಂಗ್ರಹಿಸುವುದು ಸುಲಭದ ಕೆಲಸವಲ್ಲ. ಸ್ಥಳೀಯರು ಸಾಮಾನ್ಯವಾಗಿ ಮುಂಜಾನೆ ಕಾಡು ಪ್ರದೇಶಗಳಿಗೆ ಹೋಗಿ ಇರುವೆಗಳ ಗೂಡುಗಳನ್ನು ಸಂಗ್ರಹಿಸುತ್ತಾರೆ. ನಂತರ ಇರುವೆಗಳು ಮತ್ತು ಗೂಡಿನ ಭಾಗಗಳನ್ನು ಸ್ವಚ್ಛಗೊಳಿಸಿ ತೊಳೆದು ಒಣಗಿಸುತ್ತಾರೆ. ಕೆಲವರು ಈ ಇರುವೆಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನೂ ಗಳಿಸುತ್ತಾರೆ.
ಮೊದಲು ಇರುವೆಗಳನ್ನು ಸಂಗ್ರಹಿಸಿ ಅವುಗಳನ್ನು ಸ್ವಚ್ಛಗೊಳಿಸಿದ ನಂತರ, ಇರುವೆಗಳಿಗೆ ಉಪ್ಪು, ಬೆಳ್ಳುಳ್ಳಿ, ಶುಂಠಿ ಮತ್ತು ಮೆಣಸಿನಕಾಯಿಯೊಂದಿಗೆ ಸೇರಿಸಿ ರುಬ್ಬಲಾಗುತ್ತದೆ. ಕೆಲವು ಕಡೆ ಪುದೀನವನ್ನೂ ಬಳಸುತ್ತಾರೆ. ಈ ಎಲ್ಲ ಪದಾರ್ಥಗಳನ್ನು ಸಾಂಪ್ರದಾಯಿಕ ಕಲ್ಲಿನ ರುಬ್ಬುವ ಸಾಧನವಾದ ಅರೆಯುವ ಕಲ್ಲಿನಲ್ಲಿ ಚೆನ್ನಾಗಿ ರುಬ್ಬಿ ಚಟ್ನಿ ಮಾಡಲಾಗುತ್ತದೆ. ಮಯೂರ್ಭಂಜ್‌ನ ವಾರದ ಗ್ರಾಮೀಣ ಸಂತೆಯಲ್ಲಿ ಈ ಚಟ್ನಿಯನ್ನು ಮಾರಾಟ ಕೂಡ ಮಾಡಲಾಗುತ್ತದೆ.
ಇರುವೆಗಳ ಚಟ್ನಿಯು ತನ್ನ ವಿಶಿಷ್ಟ ರುಚಿಗೆ ಮಾತ್ರವಲ್ಲದೆ, ತನ್ನ ಜನಪ್ರಿಯತೆಗೂ ಹೆಸರುವಾಸಿಯಾಗಿದೆ. ಒಡಿಶಾದ 'ಸಿಮಿಲಿಪಾಲ್ ಕೈ ಚಟ್ನಿ'ಯು ನೋಂದಾಯಿತ ಭೌಗೋಳಿಕ ಸೂಚ್ಯಂಕ (GI) ಮಾನ್ಯತೆಯನ್ನು ಕೂಡ ಪಡೆದಿದೆ ಎಂಬುದು ಹಲವರ ಹುಬ್ಬೇರಿಸಿದೆ. ಇದರ ನೋಂದಣಿ ಪ್ರಮಾಣಪತ್ರವನ್ನು 2024ರ ಜನವರಿ 2ರಂದು ಹಸ್ತಾಂತರಿಸಲಾಗಿದೆ. ಒಡಿಶಾ ಮಾತ್ರವಲ್ಲದೆ ಛತ್ತೀಸ್‌ಗಢ ಸೇರಿದಂತೆ ಭಾರತದ ಕೆಲವು ಇತರ ಪ್ರದೇಶಗಳಲ್ಲಿಯೂ ಕೆಂಪು ಇರುವೆ ಚಟ್ನಿಯನ್ನು ತಿನ್ನುತ್ತಾರೆ. ಆದರೆ, ಅಲ್ಲಿನ ತಯಾರಿಕೆಯ ವಿಧಾನ ಮತ್ತು ಬಳಸುವ ಪದಾರ್ಥಗಳಲ್ಲಿ ವ್ಯತ್ಯಾಸವಿದೆ ಎನ್ನಲಾಗಿದೆ,(ಏಜೆನ್ಸೀಸ್).