ಪುಸ್ತಕದ ಮೇಲೆ ಅಪಾರ ಪ್ರೀತಿ..ಆದರೆ ಓದೋದಿಲ್ಲ ಈ ಸ್ವಭಾವದ ಜನರನ್ನು ಜಪಾನ್ನಲ್ಲಿ ಹೀಗೆಂದು ಕರೆಯುತ್ತಾರೆ.
ಪುಸ್ತಕ ಕೊಂಡುಕೊಂಡು ಓದಲಾಗದ ಸ್ವಭಾವದವರನ್ನು ಜಪಾನಿ ಭಾಷೆಯಲ್ಲಿ 'ಸುಂದೋಕು' ಎನ್ನುತ್ತಾರೆ.
ಸುಂದೋಕು ಮತ್ತು ಮನೋವಿಜ್ಞಾನಕ್ಕೂ ನಂಟಿದೆ, ಪುಸ್ತಕ ಕೊಂಡುಕೊಳ್ಳುವುದು ಯಾರಾಗಲು ಬಯಸುತ್ತೇವೆಯೋ ಆ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ.
Buying Books You Never Read: ಕೆಲವರು ಹೀಗೆ..ಸಾಕಷ್ಟು ಪುಸ್ತಕಗಳನ್ನು ಕೊಂಡು ಕೊಂಡು ಕಪಾಟಿನಲ್ಲಿ ಶೇಖರಿಸಿಡುತ್ತಾರೆ. ಇನ್ನೂ ಕೆಲವರು ಕಂಡಲೆಲ್ಲ ಉತ್ಸಾಹದಿಂದ ಪುಸ್ತಕ ಕೊಳ್ಳುತ್ತಾರೆ. ಆದರೆ, ಓದಲು ಸಮಯ ಇಲ್ಲದೇ ಹಾಗೆಯೇ ಇಡುತ್ತಾರೆ. ಇಂತಹ ಸ್ವಭಾವದವರಿಗೆ ಜಪಾನಿ ಭಾಷೆಯಲ್ಲಿ 'ಸುಂದೋಕು' (Tsundoku) ಎಂದು ಕರೆಯುತ್ತಾರೆ.
ಪುಸ್ತಕಗಳನ್ನು ಖರೀದಿಸಿ, ಅವುಗಳನ್ನು ಓದಲು ಸಮಯವಿಲ್ಲದೆ ಕಪಾಟು, ಡೆಸ್ಕ್ ಹಾಗೂ ಬೆಡ್ ಬಳಿ ಇಡುವವರಿಗೆಸುಂದೋಕು' ಎನ್ನಲಾಗುತ್ತದೆ. ಓದಲು ವಿಫಲರಾದೆವು ಎಂಬ ಅಪರಾಧ ಪ್ರಜ್ಞೆಯನ್ನು ಹೊತ್ತುಕೊಳ್ಳುವ ಅಗತ್ಯವಿಲ್ಲದೆ, ಇದು ಪುಸ್ತಕಗಳ ಮೇಲಿನ ಒಲವನ್ನು ಸೂಚಿಸುತ್ತದೆ.
ಜಪಾನಿನಲ್ಲಿ ಸುಂದೋಕು ಎಂದರೆ ತ್ಸುಮು' (ರಾಶಿ ಹಾಕುವುದು) ಮತ್ತು 'ದೋಕು' (ಓದುವುದು) ಎಂದು ಅರ್ಥ. ಇದು 19ನೇ ಶತಮಾನದ ಕೊನೆಯಲ್ಲಿ ಬಳಕೆಗೆ ಬಂತು. ಸಾಹಿತ್ಯ ವಿದ್ವಾಂಸ ಆಂಡ್ರ್ಯೂ ಗೆರ್ಸ್ಲೆ ಬಿಬಿಸಿಗೆ ತಿಳಿಸಿದ ಪ್ರಕಾರ, ಈ ಪದದ ರೂಪವು ಮೊದಲು 1879ರಲ್ಲಿ ಮುದ್ರಣದಲ್ಲಿ ಕಂಡುಬಂದಿತು. ಓದುವ ಹವ್ಯಾಸದಿಂದ ಪುಸ್ತಕ ಖರೀದಿ ಮಾಡಿದರೂ ಸಹ ಸಮಯದ ಅಭಾವದಿಂದ ಓದಲು ಆಗದೆ..ರಾಶಿ ಇಡುವ ಜನರನ್ನು ವ್ಯಂಗ್ಯವಾಗಿ ಈ ಹೆಸರಲ್ಲಿನಲ್ಲಿ ಕರೆಯುತ್ತಿದ್ದರು. ಆದರೆ, ಇದು ನಕರಾತ್ಮಕ ಸೂಚನೆ ಕೊಡೋದಿಲ್ಲ.
ಇಂದಿನ ಆಧುನಿಕ ಜಗತ್ತಿನಲ್ಲಿ ಹಾಗೆಯೇ ಇದೆ. ಪುಸ್ತಕ ಓದುವ ಹಂಬಲದಿಂದ ಹಲವು ಪ್ರಸಿದ್ಧ ರಚನೆಕಾರರ ಪುಸ್ತಕವನ್ನು ಖರೀದಿ ಮಾಡುತ್ತಾರೆ. ಆದರೆ, ಕೆಲಸದೊತ್ತಡ, ಸಿಕ್ಕ ಸಮಯದಲ್ಲಿ ಸಿನಿಮಾ ನೋಡುವ ಅಭ್ಯಾಸ, ಕುಟಂಬಸ್ಥರ ಜೊತೆ ಮಾತುಕತೆಯಲ್ಲೇ ಕಾಲ ಕಳೆಯುವ ಹಿನ್ನೆಲೆ ಓದಬೇಕಾದ ಪುಸ್ತಕವನ್ನು ದೂರವಿಟ್ಟು ಬಿಡುತ್ತೇವೆ.
ಕೆಲವೊಬ್ಬರಿಗೆ ಬಟ್ಟೆ, ಚಪ್ಪಲಿ, ದಿನ ಬಳಕೆ ವಸ್ತುಗಳನ್ನು ಖರೀದಿ ಮಾಡುವುದು ಏನೋ ತೃಪ್ತಿ. ಒತ್ತಡ ಬದುಕಿಗೆ ಸಣ್ಣದೊಂದು ಪಾಸಿಟಿವ್ ಕಿಕ್ ಕೊಟ್ಟಂತೆ. ಅದರಂತೆ ಪುಸ್ತಕ ಖರೀದಿಸು ಅಭ್ಯಾಸವೂ ಸಹ ಕೆಲವರಿಗೆ ಬೇರೆಯದ್ದೇ ಒಂದು ಸಮಾಧಾನವನ್ನು ನೀಡುತ್ತದೆ. ಪುಸ್ತಕದ ಖರೀದಿಯು ಭವಿಷ್ಯದಲ್ಲಿ ನಮಗೆ ಸಿಗಲಿರುವ ಜ್ಞಾನ, ಕಥೆ ಅಥವಾ ಹೊಸ ಕೌಶಲ್ಯದ ಭರವಸೆಯನ್ನು ನೀಡುತ್ತದೆ.
2026ರಲ್ಲಿ ‘ದಿ ಕನ್ವರ್ಸೇಷನ್’ ಲೇಖನದಲ್ಲಿ ಬ್ರಿಸ್ಟಲ್ ವಿಶ್ವವಿದ್ಯಾಲಯದ ಅಂಗರಚನಾಶಾಸ್ತ್ರಜ್ಞೆ ಮಿಚೆಲ್ ಸ್ಪಿಯರ್ ಈ ಅನುಭವವನ್ನು ನಿರೀಕ್ಷೆಯ ಮನೋವಿಜ್ಞಾನದೊಂದಿಗೆ ತಳಕುಹಾಕಿದ್ದಾರೆ. ನಮ್ಮ ಮೆದುಳಿನ ಆನಂದ-ಸಂಬಂಧಿತ ಪ್ರಕ್ರಿಯೆಗಳು ಕೇವಲ ಅನುಭವದಿಂದ ಮಾತ್ರವಲ್ಲದೆ, ನಿರೀಕ್ಷಿತ ಆನಂದದಿಂದಲೂ ಉತ್ತೇಜಿಸಲ್ಪಡುತ್ತವೆ. ಇದೇ ಕಾರಣಕ್ಕೆ ಪುಸ್ತಕದ ಪುಟಗಳು ತೆರೆಯದಿದ್ದರೂ, ಅದನ್ನು ಖರೀದಿಸುವುದು ಮನಸ್ಸಿಗೆ ತೃಪ್ತಿ ನೀಡುತ್ತದೆ ಎನ್ನಲಾಗಿದೆ.
ಲೇಖಕ ನಸೀಮ್ ನಿಕೋಲಸ್ ತಾಲೆಬ್ ಅವರ ಪ್ರಕಾರ, ಓದದ ಪುಸ್ತಕಗಳ ಸಂಗ್ರಹವು ನಮಗೆ ನಾವು ಇನ್ನೂ ತಿಳಿಯಬೇಕಾದ ವಿಷಯಗಳು ಎಷ್ಟು ಅಪಾರವಾಗಿವೆ ಎಂಬುವದನ್ನು ಇದು ಪದೇ ಪದೆ ನೆನಪಿಸುತ್ತದೆ. ಇದು ಮನುಷ್ಯನಲ್ಲಿ ವಿನಮ್ರತೆಯನ್ನು ಮತ್ತು ನಿರಂತರ ಕಲಿಯುವ ಉತ್ಸಾಹವನ್ನು ಜಾಗೃತವಾಗಿಡುತ್ತದೆ.
ಅಂತ್ಯವಿಲ್ಲದೆ ಪುಸ್ತಕಗಳನ್ನು ಖರೀದಿಸುವುದು ದುಬಾರಿಯಾಗಬಹುದು ಅಥವಾ ಗೊಂದಲ ಉಂಟುಮಾಡಬಹುದು. ಕುತೂಹಲ ಒಳ್ಳೆಯದೇ, ಆದರೆ ನಿಮ್ಮ ಹಣ ಮತ್ತು ಗಮನಕ್ಕೆ ಯಾವುದು ಅರ್ಹ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ.ಮುಂದಿನ ಬಾರಿ ನಿಮ್ಮ ಓದದ ಪುಸ್ತಕಗಳ ರಾಶಿ ಕಣ್ಣಿಗೆ ಬಿದ್ದರೆ, ಎಷ್ಟು ಪುಸ್ತಕಗಳನ್ನು ನಿರ್ಲಕ್ಷಿಸಿದ್ದೇನೆ ಎಂದು ಯೋಚಿಸುವ ಬದಲು, ನಿಮ್ಮ ಮೂಡ್ಗೆ ತಕ್ಕಂತೆ ಒಂದೇ ಒಂದು ಪುಸ್ತಕವನ್ನು ಆಯ್ಕೆ ಮಾಡಿ ಓದಿ, (ಏಜೆನ್ಸೀಸ್).