ಮಳೆಗಾಲ ಮುಗಿಯುತ್ತ ಬಂದಿದೆ. ಪ್ರತಿ ಮಳೆಗಾಲದಲ್ಲೂ ಪ್ರಕೃತಿಯು ಮನುಷ್ಯನ ತಪ್ಪನ್ನು ಒಮ್ಮೆ ತೋರಿಸಿ ಹೋಗುತ್ತದೆ. ಹಾಗೆಯೇ ನಮ್ಮ ದೇಹದ ವಿಷಯದಲ್ಲೂ ಮಳೆಗಾಲದಲ್ಲಿ ಹಲವು ಸಮಸ್ಯೆಗಳ ಪ್ರವಾಹವುಂಟಾಗುತ್ತದೆ. ಏಕೆಂದರೆ ಈ ಕಾಲದಲ್ಲಿ ಮನುಷ್ಯನಲ್ಲಿ ರೋಗಗಳನ್ನು ತಡೆಯುವ ಬಲ ಕಡಿಮೆ ಇರುತ್ತದೆ ಎಂದು ಆಯುರ್ವೆದ ಹೇಳುತ್ತದೆ. ‘ಈ ಮಳೆಗಾಲದಲ್ಲಿ ಯಾವ ಸಮಸ್ಯೆಯೂ ಆಗಿಲ್ಲ, ಹಾಗಾಗಿ ನನ್ನ ರೋಗನಿರೋಧಕ ಶಕ್ತಿ ತುಂಬ ಚೆನ್ನಾಗಿದೆ’ ಎಂದುಕೊಳ್ಳುವಂತಿಲ್ಲ ಏಕೆಂದರೆ ಈ ಕಾಲದಲ್ಲೇ ದೋಷಸಂಚಯ ಹೆಚ್ಚಿದ್ದು ಮುಂದೊಂದು ದಿನ ಅದು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ‘ಮಳೆಗಾಲದ ಒಂದು ದಿನ’ವನ್ನು ನಾವು ಹೇಗೆ ಕಳೆಯಬೇಕು ಎಂಬುದನ್ನು ತಿಳಿದುಕೊಳ್ಳೋಣ. ಮಳೆಗಾಲದ ಪ್ರತಿದಿನವನ್ನೂ ಹೀಗೆ ನಿಯಮಬದ್ಧವಾಗಿ ಕಳೆದರೆ ಅಜೀರ್ಣ, ಅಲರ್ಜಿ, ಅಸ್ತಮಾ, ಚರ್ಮರೋಗಗಳು, ರೋಗನಿರೋಧಕ ಶಕ್ತಿಯ ಕೊರತೆ, ಆಮವಾತ, ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿರಬಹುದು.
ಬ್ರಾಹ್ಮೀಮುಹೂರ್ತದಲ್ಲಿ ಏಳಬೇಕು ಎಂದು ಎಲ್ಲ ಶಾಸ್ತ್ರಗಳೂ ಹೇಳುತ್ತವೆ. ಸಾಮಾನ್ಯವಾಗಿ 4.30ರಿಂದ 5.15ರವರೆಗೆ ಬ್ರಾಹ್ಮಿ ಮುಹೂರ್ತವಿರುತ್ತದೆ. ಆ ಸಮಯದಲ್ಲಿ ಏಳಲೇಬೇಕು. ಚೆನ್ನಾಗಿ ಮಳೆ ಬರುತ್ತಿದೆ ಎಂದು ಹೊದ್ದು ಮಲಗುವಂತಿಲ್ಲ. ಹಾಗೆ ಮಾಡಿದರೆ ನೀರಿನಲ್ಲಿ ಮುಳುಗುತ್ತಿರುವವನು ಆಸರೆಗೆ ಮೊಸಳೆಯನ್ನು ಹಿಡಿದುಕೊಂಡಂತಾಗುತ್ತದೆ. ದೇಹದಲ್ಲಿ ದೋಷಗಳು ಸುಲಭವಾಗಿ ಹೆಚ್ಚಾಗಿ ರೋಗದ ಉತ್ಪತ್ತಿಗೆ ಕಾರಣವಾಗುತ್ತವೆ. ಎದ್ದ ನಂತರ ಬೆಚ್ಚಗಿನ ನೀರು ಕುಡಿಯಬಹುದು. ಮಲಮೂತ್ರ ವಿಸರ್ಜನೆಗಳ ನಂತರ ಮಧ್ಯಮ ಪ್ರಮಾಣದಲ್ಲಿ ದೈಹಿಕ ವ್ಯಾಯಾಮಗಳನ್ನು ಮಾಡಬೇಕು. ಮಳೆಗಾಲದಲ್ಲಿ ದೈಹಿಕ ವ್ಯಾಯಾಮ ಇಲ್ಲದಿರುವುದು ಮತ್ತು ಅತಿಯಾಗಿ ಮಾಡುವುದು ಎರಡೂ ತಪ್ಪು. ಈ ಕಾಲದಲ್ಲಿ ಪ್ರಾಣಾಯಾಮಗಳಿಗೆ ಹೆಚ್ಚು ಒತ್ತು ಕೊಡಲೇಬೇಕು.
ಶುಂಠಿ, ಕೊತ್ತಂಬರಿ, ಕಾಳುಮೆಣಸು, ದಾಲ್ಚಿನ್ನಿ (ಚಕ್ಕೆ), ಒಂದೆರಡು ತುಳಸಿ ಎಲೆಗಳು, ಅರಿಶಿಣ, ಸ್ವಲ್ಪ ಜ್ಯೇಷ್ಠಮಧು ಇವುಗಳ ಕಷಾಯ ಕುಡಿಯುವುದರಿಂದ ಮಳೆಗಾಲದಲ್ಲಿ ಪ್ರಾರಂಭವಾಗುವ ಅಥವಾ ಹೆಚ್ಚಾಗುವ ಹಲವಾರು ಸಮಸ್ಯೆಗಳನ್ನು ತಪ್ಪಿಸಬಹುದು. ಮಳೆಗಾಲದಲ್ಲಿ ಸಹಜವಾಗಿಯೇ ಕಡಿಮೆಯಾಗುವ ಜೀರ್ಣಶಕ್ತಿಯನ್ನು ಹೆಚ್ಚಿಸಬಹುದು. ಮಳೆಗಾಲದಲ್ಲಿ ತಲೆಗೆ ಉಗುರುಬೆಚ್ಚಗಿನ ಮತ್ತು ಮೈಗೆ ಬಿಸಿನೀರಿನ ಸ್ನಾನ ಒಳ್ಳೆಯದು. ಅಂಟವಾಳಕಾಯಿ, ಅರಿಶಿಣ, ತ್ರಿಫಲಾ, ಕಹಿಬೇವು, ಲಾವಂಚ, ಮಂಜಿಷ್ಟ ಇವುಗಳ ಪುಡಿಯನ್ನು ಗ್ರಂಥಿಗೆ ಅಂಗಡಿಗಳಿಂದ ತಂದಿಟ್ಟುಕೊಂಡು ನೂರರಲ್ಲಿ ಐವತ್ತು ಭಾಗ ಅಂಟವಾಳದ ಪುಡಿ ಮತ್ತು ಉಳಿದವು ತಲಾ ಹತ್ತು ಭಾಗ ಹಾಕಿ ಚೂರ್ಣ ಮಾಡಿಟ್ಟುಕೊಂಡು ಅದನ್ನು ಸ್ನಾನಕ್ಕೆ ಬಳಸಬೇಕು. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಫಂಗಸ್ ನಿರೋಧಿಸುವ ಶಕ್ತಿ ಇವೆಲ್ಲವಕ್ಕೂ ಇದೆ. ಇವು ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸುತ್ತವೆ. ಯಾವುದೇ ಅಡ್ಡಪರಿಣಾಮಗಳಿಲ್ಲ. ಸೋಪ್ಗಳಿಂದ ಇಷ್ಟು ಪ್ರಯೋಜನ ಸಿಗಲು ಸಾಧ್ಯವಿಲ್ಲ.
ಬೆಳಗಿನ ಉಪಾಹಾರಕ್ಕೆ ಎಣ್ಣೆಯಲ್ಲಿ ಕರಿಯದ, ಅತಿಯಾಗಿ ಎಣ್ಣೆ ಬಳಸದ ತಿಂಡಿಗಳನ್ನು ತಿನ್ನಬೇಕು. ಅವಶ್ಯವಿದ್ದಲ್ಲಿ ಜತೆಗೆ ಸ್ವಲ್ಪ ಬಿಸಿನೀರು ಕುಡಿಯಬಹುದು. ಸ್ವಲ್ಪ ಪ್ರಮಾಣದಲ್ಲಿ ತುಪ್ಪ ಅಥವಾ ಗಾಣದಲ್ಲಿ ತೆಗೆದ ಶುದ್ಧ ಎಣ್ಣೆಗಳನ್ನು ತಿಂಡಿಯ ಜತೆ (ಉದಾ: ಚಟ್ನಿಪುಡಿಗೆ ಹಾಕಿಕೊಂಡು) ಬಳಸಬಹುದು ಮಳೆಯಲ್ಲಿ ನೆನೆದಾಗ ಮನೆಗೆ ಬಂದ ತಕ್ಷಣ ಸ್ವಲ್ಪವೂ ನೀರು ಇಲ್ಲದಂತೆ ಮೈ ಒರೆಸಿಕೊಂಡು ಕಂಕುಳು, ತೊಡೆಯ ಸಂದುಗಳಲ್ಲಿ ಭಸ್ಮವನ್ನು ಹಚ್ಚಿಕೊಂಡು ಒಣ ಬಟ್ಟೆಗಳನ್ನು ಧರಿಸಿಕೊಳ್ಳಬೇಕು. ಇಲ್ಲವಾದರೆ ಫಂಗಸ್ ಸೋಂಕಾಗಿ ಎಷ್ಟೋ ವರ್ಷಗಳ ಕಾಲ ಕಾಡಬಹುದು. ಮಧ್ಯಾಹ್ನದ ಊಟವನ್ನು ಸಾಧ್ಯವಾದಷ್ಟು ಬೇಗ ಮಾಡಬೇಕು. ಊಟದಲ್ಲಿ ಹೆಚ್ಚು ಹುಳಿ ಪದಾರ್ಥಗಳು, ಸಾಂಬಾರ ಪದಾರ್ಥಗಳು, ಸೊಪ್ಪುಗಳು, ಹೆಸರುಬೇಳೆಯಂತಹ ಸುಲಭವಾಗಿ ಜೀರ್ಣವಾಗುವ ದ್ರವ್ಯಗಳನ್ನು ಬಳಸಬೇಕು. ಊಟದ ನಂತರ ಚಾಕಲೇಟ್, ಐಸ್ಕ್ರೀಮ್ ತಣ್ಣೀರು ಸರ್ವಥಾ ನಿಷಿದ್ಧ. ಶುಂಠಿ, ಕೊತ್ತಂಬರಿ ಸೊಪ್ಪು, ಸೈಂಧವ ಲವಣ ಹಾಕಿದ, ಬೆಣ್ಣೆ ತೆಗೆದ ಮಸಾಲೆ ಮಜ್ಜಿಗೆ ಶ್ರೇಷ್ಠವಾದದ್ದು. ಹಗಲು ನಿದ್ದೆ ಬೇಡವೇ ಬೇಡ. ರಾತ್ರಿಯ ಊಟವನ್ನು ಸಾಧ್ಯವಾದಷ್ಟು ಬೇಗ ಮತ್ತು ಲಘುವಾಗಿರುವಂತೆ ನೋಡಿಕೊಳ್ಳಬೇಕು. ಊಟದ ನಂತರ ಕನಿಷ್ಠ ಒಂದು ತಾಸು ಬಿಟ್ಟು ಮಲಗಬೇಕು. ಮಧ್ಯದಲ್ಲಿ ಏನನ್ನೂ ತಿನ್ನುವುದು ಹಾಗೂ ಕುಡಿಯುವುದು ಸರಿಯಲ್ಲ. ಗಾಳಿ ಬೀಸದ ಬೆಚ್ಚಗಿನ ಸ್ಥಳದಲ್ಲಿ ಮಲಗಬೇಕು