Morning Alarm: ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ಹೋಗುವ ಬಹುತೇಕರು ಅಲಾರಂ ಇಟ್ಟುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಇದಿಲ್ಲದೇ ಎದ್ದೇಳಲು ತೀರ ಕಷ್ಟಪಡುತ್ತಾರೆ. ಒಂದು ಯಾರಾದರೂ ಬೆಳಗ್ಗೆ ಹೊತ್ತು ತಮ್ಮನ್ನು ಗಾಢವಾದ ನಿದ್ರೆಯಿಂದ ಎಬ್ಬಿಸಬೇಕು. ಇಲ್ಲವೇ, ಅಲಾರಂನಿಂದ ಎಚ್ಚರಗೊಳ್ಳಬೇಕು. ಅಸಲಿಗೆ, ಇದರ ಶಬ್ದಗಳು ನಮ್ಮನ್ನು ದಿಢೀರ್ ಎಬ್ಬಿಸುವುದರಿಂದ ಏನಾದರೂ ಸಮಸ್ಯೆಗೆ ಕಾರಣವಾಗುತ್ತದೆಯೇ? ಈ ಬಗ್ಗೆ ಸಂಶೋಧನೆ ಹೇಳುವುದೇನು? ಎಂಬುದನ್ನು ಇಲ್ಲಿ ತಿಳಿಯೋಣ ಬನ್ನಿ.
ಅಲಾರಂ ಗಂಟೆಗಳು ಸಾಮಾನ್ಯ ಗಂಟೆಗಳಲ್ಲ. ವಿಜ್ಞಾನಿಗಳು ಸೂಚಿಸುವ ಪ್ರಕಾರ, ಅವು ಅಪಾಯಕಾರಿ ಶಬ್ದಗಳು. ಇತ್ತೀಚೆಗೆ, ವರ್ಜೀನಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ನರ್ಸಿಂಗ್ ಈ ಅಲಾರಂ ಎಚ್ಚರಿಕೆಯ ಬಗ್ಗೆ ಅಧ್ಯಯನ ನಡೆಸಿದ್ದು, ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ.
ಅಧ್ಯಯನದ ಪ್ರಕಾರ, ಅಲಾರಂ ಸದ್ದಿನಿಂದ ಬೆಳಗ್ಗೆ ಬೇಗನೆ ಏಳುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಾಗುವ ಸಾಧ್ಯತೆಯಿದೆ. 32 ಜನರ ಮೇಲೆ ಅಧ್ಯಯನ ನಡೆಸಿರುವ ಯೂನಿವರ್ಸಿಟಿ, ಎರಡು ದಿನಗಳ ಕಾಲ ನಿದ್ರಿಸುವಾಗ ಅವರೆಲ್ಲರೂ ಸ್ಮಾರ್ಟ್ ವಾಚ್ ಮತ್ತು ಬೆರಳಿನ ರಕ್ತದೊತ್ತಡದ ಕಫ್‌ಗಳನ್ನು ಧರಿಸಿದ್ದರು ಎಂದು ಹೇಳಲಾಗಿದೆ. ಮೊದಲ ದಿನ, 32 ಜನರಿಗೆ ಯಾವುದೇ ಅಲಾರಂ ಇಲ್ಲದೆ ನೈಸರ್ಗಿಕವಾಗಿ ಎಚ್ಚರಗೊಳ್ಳಲು ಸೂಚಿಸಲಾಯಿತು. ಎರಡನೇ ದಿನ, ಐದು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಿಸಿದ ಬಳಿಕ ಅಲಾರಂನೊಂದಿಗೆ ಎಚ್ಚರಗೊಳ್ಳಲು ಹೇಳಲಾಯಿತು. ಈ ಎರಡು ಫಲಿತಾಂಶಗಳನ್ನು ಪರೀಕ್ಷಿಸಿದಾಗ, ಇದರಲ್ಲಿ ಆಶ್ಚರ್ಯಕರ ಫಲಿತಾಂಶಗಳು ಲಭಿಸಿವೆ. ಬಲವಂತವಾಗಿ ಎದ್ದೇಳುವುದರಿಂದ ರಕ್ತದೊತ್ತಡದಲ್ಲಿ ಹೆಚ್ಚಳ ಕಂಡುಬಂದಿದೆ.
ಅಲಾರಂ ಶಬ್ದಕ್ಕೆ ಎಚ್ಚರಗೊಳ್ಳುವವರಲ್ಲಿ ರಕ್ತದೊತ್ತಡವು ಶೇ.74ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಅಲಾರಂ ಶಬ್ದವು ದೇಹದಲ್ಲಿ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಆ ಪ್ರತಿಕ್ರಿಯೆಯಿಂದಾಗಿ, ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ರಿಲೀಸ್ ಆಗುತ್ತದೆ. ಈ ಹಾರ್ಮೋನುಗಳು ಹೃದಯದ ಬಡಿತವನ್ನು ಹೆಚ್ಚಿಸುತ್ತವೆ ಮತ್ತು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತವೆ ಎಂದು ಹೇಳಲಾಗಿದೆ. ಸಂಶೋಧನೆಯ ಪ್ರಕಾರ, ನಿದ್ರೆಯ ಕೊರತೆ (7 ಗಂಟೆಗಿಂತ ಕಡಿಮೆ) ಮತ್ತು ಅಲಾರಂ ಶಬ್ದದಿಂದ ಉಂಟಾಗುವ ಎಚ್ಚರಗಳು ಬೆಳಗಿನ ರಕ್ತದೊತ್ತಡದ ಜಿಗಿತ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದೆ,(ಏಜೆನ್ಸೀಸ್).