ಬೆಂಗಳೂರು: ನೂತನ ಮನೆ ನಿರ್ಮಿಸುವಾಗ ಅಗತ್ಯ ಸೌಲಭ್ಯಗಳ ಜೊತೆ, ಅಲಂಕಾರ ಹಾಗೂ ವಾಸ್ತು ವಿನ್ಯಾಸಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಅಲಂಕಾರ ಮತ್ತು ವಾಸ್ತು ಎರಡೂ ಅಂಶವನ್ನೊಳಗೊಂಡಿರುವ ವಸ್ತು ಮನಿಪ್ಲಾಂಟ್.
ಇತ್ತೀಚೆಗೆ ಹೊಸ ಮನೆ ನಿರ್ಮಾಣ ಮಾಡುವವರು ವಾಸ್ತುವಿಜ್ಞಾನಕ್ಕೆ ವಿಶೇಷ ಆದ್ಯತೆ ನೀಡುತ್ತಾರೆ. ಬಾಗಿಲು, ಕಿಟಕಿ, ಅಡುಗೆ ಮನೆ, ದೇವರಮನೆ ಇತ್ಯಾದಿ ಪ್ರಮುಖ ವಿಷಯಗಳಷ್ಟೇ ಅಲ್ಲದೆ, ಪೀಠೋಪಕರಣ, ಬಣ್ಣ, ಅಲಂಕಾರ ಹೀಗೆ ಪ್ರತಿಯೊಂದು ಸೂಕ್ಷ್ಮವಿಷಯವನ್ನು ಕೂಡಾ ವಾಸ್ತು ಪ್ರಕಾರ ಅಳವಡಿಸುವವರಿದ್ದಾರೆ. ಆ ನಿಟ್ಟಿನಲ್ಲಿ ಮನಿಪ್ಲಾಂಟ್ ಅಳವಡಿಕೆ ಬಹಳ ಮಹತ್ವ ಪಡೆದುಕೊಂಡಿದೆ.
ವಾಸ ಮಾಡುವ ಮನೆ ಮಾತ್ರವಲ್ಲದೆ ಕೆಲಸ ಮಾಡುವ ಕಚೇರಿ ವಿನ್ಯಾಸದಲ್ಲೂ ಕೂಡಾ ಮನಿಪ್ಲಾಂಟ್ ಬಳಕೆಯನ್ನು ಕಾಣುತ್ತೇವೆ. ಮನೆಯ ಸಂಪತ್ತನ್ನು ವೃದ್ಧಿಸುವುದರ ಜೊತೆಗೆ ಆರೋಗ್ಯ, ನೆಮ್ಮದಿಯ ಬದುಕಿಗೆ ಮನೆಗಳಲ್ಲಿ ಮನಿಪ್ಲಾಂಟ್ ಬೆಳೆಸುವುದು ಉತ್ತಮ ಎಂಬುದು ವಾಸ್ತುತಜ್ಞರ ಅಭಿಪ್ರಾಯ.
ಮನೆಯ ಅಲಂಕಾರದ ಜೊತೆಗೆ ಅಗತ್ಯಕ್ಕೆ ಬಳಸುವ ಪ್ರತಿವಸ್ತುಗಳನ್ನು ವಾಸ್ತು ಹಿನ್ನೆಲೆಯಲ್ಲಿ ಅಳವಡಿಸುವುದರಿಂದ ಹೆಚ್ಚಿನ ಲ ಪಡೆಯಲು ಸಾಧ್ಯ. ಮನೆಯ ಆಗ್ನೇಯ ದಿಕ್ಕಿನಲ್ಲಿ ಅಳವಡಿಸುವುದು ಸೂಕ್ತ. ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಕಡ್ಡಾಯವಾಗಿ ಮನಿಪ್ಲಾಂಟ್ ಇಡಬಾರದು. ಮಣ್ಣಿನ ಮಡಕೆ ಅಥವಾ ಗಾಜಿನ ವಸ್ತುವಿನಲ್ಲಿ ಮನಿಪ್ಲಾಂಟ್ ಬೆಳೆಸಬೇಕು. ಎಲೆಗಳು ನೆಲಕ್ಕೆ ಸ್ಪರ್ಷವಾಗದಂತೆ ಎಚ್ಚರ ವಹಿಸಬೇಕು. ಹ್ಯಾಂಗಿಂಗ್ ಮನಿಪ್ಲಾಂಟ್, ಟೇಬಲ್ ಅಥವಾ ಟಿಪಾಯಿ ಮೇಲೆ ಇಡುವುದು ಸೂಕ್ತ. ಯಾವುದೇ ಕಾರಣಕ್ಕೂ ಒಣಗಿದ ಮನಿಪ್ಲಾಂಟ್‌ಗಳನ್ನು ಮನೆಯಲ್ಲಿ ಇಡಬಾರದು.
ಮನಿಪ್ಲಾಂಟ್ ಮನೆಯೊಳಗೆ ಇರಿಸುವುದರಿಂದ ಮನೆಯ ಅದೃಷ್ಟ ವೃದ್ಧಿಯಾಗುವುದರ ಜೊತೆಗೆ ಮನೆಯ ಸದಸ್ಯರ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ವಾತಾವರಣವನ್ನು ನಿರ್ಮಿಸುತ್ತದೆ. ದಾಂಪತ್ಯದಲ್ಲಿ ಸಮರಸಭಾವ ಮೂಡಿಸುತ್ತದೆ ಎಂಬ ನಂಬಿಕೆ ಇದೆ. ಚೀನಾದ ತತ್ವಶಾಸದಲ್ಲಿ ಮನಿಪ್ಲಾಂಟ್ ಬಗ್ಗೆ ವಿಶೇಷ ಒತ್ತು ನೀಡಿದ್ದಾರೆ.
ಮನಿಪ್ಲಾಂಟ್‌ಗಳು ವಾಸ್ತುಶಾಸ, ಅಲಂಕಾರದ ಜೊತೆಗೆ ವೈಜ್ಞಾನಿಕವಾಗಿಯೂ ಮಹತ್ವ ಹೊಂದಿವೆ. ಸಾಮಾನ್ಯವಾಗಿ ಪಂಚಭೂತಗಳಿಂದ ಸಸ್ಯಗಳು ಬೆಳಯುತ್ತವೆ. ಆದರೆ ಮನಿಪ್ಲಾಂಟ್‌ಗಳು ದಟ್ಟ ಬಿಸಿಲು ಮತ್ತು ಗಾಳಿ ಇಲ್ಲದ ತಂಪು ವಾತಾವರಣದಲ್ಲಿ ಬೆಳೆಯುತ್ತವೆ. ಮನೆಯೊಳಗೆ ಹಸಿರು ಸಸ್ಯಗಳನ್ನು ಬೆಳೆಸುವುದರಿಂದ ಆಕ್ಸಿಜನ್ ಪೂರೈಕೆ ಹೆಚ್ಚಾಗುತ್ತದೆ. ಇದರಿಂದ ಮನೆಯೊಳಗೆ ಇರುವವರಿಗೆ ಹಲವು ಆರೋಗ್ಯಕರ ಲಾಭಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಎಸಿ ಮತ್ತಿತರ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಯಲ್ಲಿ ಬಳಸುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಮನೆಯೊಳಗಿನ ಮನಿಪ್ಲಾಂಟ್ ಬಳಕೆ ಸಹಕಾರಿಯಾಗಿದೆ. ಜೊತೆಗೆ ಹಸಿರು ಸಸ್ಯಗಳನ್ನು ಮೇಲಿಂದ ಮೇಲೆ ವೀಕ್ಷಿಸುವುದರಿಂದ ಮನುಷ್ಯನ ದೃಷ್ಟಿ ಹಾಗೂ ಚಿಂತನೆ ಎರಡರಲ್ಲೂ ಸುಧಾರಣೆಯಾಗುತ್ತದೆ.
ಮನಿಪ್ಲಾಂಟ್ ವಾಸ್ತು ಜೊತೆಗೆ ಅಲಂಕಾರದ ಪ್ರಮುಖ ವಿಷಯವೂ ಆಗಿರುವುದರಿಂದ ಹಲವು ವಿನ್ಯಾಸದ ಮನಿಪ್ಲಾಂಟ್ ಪಾಟ್‌ಗಳು ದೊರೆಯುತ್ತವೆ. ಹೊಸ ಮನೆಯ ಒಳಾಂಗಣ ಅಲಂಕಾರಕ್ಕೆ ತಕ್ಕಂತೆ ಗೋಡೆಯ ಬಣ್ಣಕ್ಕೆ ಹೊಂದುವ ಪಾಟ್‌ಗಳು ಹಾಗೂ ಸಸ್ಯದ ರಚನೆಗಳು ದೊರೆಯುತ್ತವೆ.
ಮಣ್ಣಿನ ಮಡಕೆ, ಪಿಂಗಾಣಿ, ಪ್ಲಾಸ್ಟಿಕ್, ಬಣ್ಣದ ಗಾಜು ಹಾಗೂ ಪಾರದರ್ಶಕ ಗಾಜಿನ ಮನಿಪ್ಲಾಂಟ್ ಬೇಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯಯಿದ್ದು, ಅವರವರ ಅಭಿರುಚಿಗೆ ತಕ್ಕಂತೆ ಮನೆಯ ಅಲಂಕಾರವನ್ನು ಮನಿಪ್ಲಾಂಟ್ ಮೂಲಕ ಮಾಡಬಹುದು.