ರಾತ್ರಿಯಿಡೀ ಫೋನ್ ಚಾರ್ಜ್‌ಗೆ ಇಟ್ಟರೆ ನಿಜವಾಗಿಯೂ ಬ್ಯಾಟರಿ ಹಾಳಾಗುತ್ತಾ? ಅಸಲಿ ಸತ್ಯ ಇಲ್ಲಿದೆ ನೋಡಿ! Mobile Battery
- ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ
- ದೈನಂದಿನ ಬಹುತೇಕ ಎಲ್ಲಾ ಕೆಲಸಗಳೂ ನಮ್ಮ ಫೋನ್‌ಗಳ ಮೇಲೆಯೇ ಅವಲಂಬಿತವಾಗಿವೆ
- ಕೆಲವರಂತೂ ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವ ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ
- ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿಡುವುದರಿಂದ ಬ್ಯಾಟರಿ ಬೇಗನೆ ಹಾಳಾಗುತ್ತದೆ ನಂಬಿಕೆ ಅನೇಕರಲ್ಲಿದೆ
Mobile Battery : ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮ ಜೀವನದ ಅತ್ಯಂತ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಮಾಡುವ ಬಹುತೇಕ ಎಲ್ಲಾ ಕೆಲಸಗಳೂ ನಮ್ಮ ಫೋನ್‌ಗಳ ಮೇಲೆಯೇ ಅವಲಂಬಿತವಾಗಿವೆ. ಇದೇ ಕಾರಣಕ್ಕಾಗಿ, ರಾತ್ರಿ ಮಲಗುವ ಮುನ್ನ ಫೋನ್ ಅನ್ನು ಚಾರ್ಜ್‌ಗೆ ಇಟ್ಟು, ಬೆಳಗ್ಗೆ ಎದ್ದ ತಕ್ಷಣ ಫೋನ್ ಬಳಸುವ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿದ್ದಾರೆ. ಆದರೆ, ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿಡುವುದರಿಂದ ಬ್ಯಾಟರಿ ಬೇಗನೆ ಹಾಳಾಗುತ್ತದೆ ಎಂಬ ಬಲವಾದ ನಂಬಿಕೆ ದೀರ್ಘಕಾಲದಿಂದ ಜನರಲ್ಲಿದೆ.
ಮತ್ತೊಂದೆಡೆ, ಆಧುನಿಕ ತಂತ್ರಜ್ಞಾನದ ಫೋನ್‌ಗಳಲ್ಲಿ ಇಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದೂ ಹೇಳಲಾಗುತ್ತದೆ. ಈ ಭಿನ್ನ ಅಭಿಪ್ರಾಯಗಳು ಸಾಮಾನ್ಯ ಜನರಲ್ಲಿ ಯಾವುದು ನಿಜ ಮತ್ತು ಯಾವುದು ಸುಳ್ಳು ಎಂಬ ದೊಡ್ಡ ಗೊಂದಲವನ್ನು ಮೂಡಿಸಿವೆ. ಆ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಹಾಗಾಗಿ, ಮುಂದೆ ಓಂದಿ.
ಕೆಲವು ವರ್ಷಗಳ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ಮೊಬೈಲ್ ಫೋನ್‌ಗಳಲ್ಲಿದ್ದ ಬ್ಯಾಟರಿ ತಂತ್ರಜ್ಞಾನವು ಇಂದಿನಷ್ಟು ಮುಂದುವರಿದಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಆದರೆ, ಪ್ರಸ್ತುತ ಬಳಕೆಯಲ್ಲಿರುವ ಲಿಥಿಯಂ-ಐಯಾನ್ (Lithium-ion) ಬ್ಯಾಟರಿಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಬರುತ್ತಿವೆ.
ನೂತನ ತಂತ್ರಜ್ಞಾನದ ಕಾರಣದಿಂದಾಗಿ, ಫೋನ್ ಶೇ. 100 ರಷ್ಟು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದ ನಂತರವೂ ಬ್ಯಾಟರಿ ಅದೇ ವೇಗದಲ್ಲಿ ವಿದ್ಯುತ್ ಅನ್ನು ಹೀರಿಕೊಳ್ಳುವುದನ್ನು ಮುಂದುವರಿಸುವುದಿಲ್ಲ. ಚಾರ್ಜಿಂಗ್ ಪ್ರಕ್ರಿಯೆಯನ್ನು ನಿಯಂತ್ರಿಸುವ ತಂತ್ರಜ್ಞಾನವು ಬ್ಯಾಟರಿ ಪೂರ್ಣ ಸಾಮರ್ಥ್ಯವನ್ನು ತಲುಪಿದ ತಕ್ಷಣವೇ ಕಾರ್ಯಪ್ರವೃತ್ತವಾಗುತ್ತದೆ. ಆದ್ದರಿಂದ, ಕೇವಲ ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿ ಇಡುವುದರಿಂದಲೇ ಬ್ಯಾಟರಿ ತಕ್ಷಣವೇನೂ ಹಾಳಾಗುವುದಿಲ್ಲ.
ಮೊಬೈಲ್ ಬ್ಯಾಟರಿಗಳ ವಿಷಯದಲ್ಲಿ ನಾವು ನೆನಪಿನಲ್ಲಿಡಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ, ಚಾರ್ಜಿಂಗ್ ಮಾಡುವುದು ಬ್ಯಾಟರಿಯ ಶತ್ರುವಲ್ಲ, ಬದಲಿಗೆ ಅತಿಯಾದ ಶಾಖ ಅಥವಾ ಉಷ್ಣಾಂಶವೇ ಅದರ ಅಸಲಿ ಶತ್ರು. ಫೋನ್ ಚಾರ್ಜ್ ಆಗುತ್ತಿರುವಾಗ ಗೇಮ್ ಆಡುವುದು, ವಿಡಿಯೋಗಳನ್ನು ನೋಡುವುದು ಅಥವಾ ದಿಂಬಿನ ಕೆಳಗೆ ಇಟ್ಟು ಚಾರ್ಜ್ ಮಾಡುವುದರಿಂದ ಫೋನ್ ಬೇಗನೆ ಬಿಸಿಯಾಗುತ್ತದೆ. ಇಂತಹ ಹೆಚ್ಚಿನ ಉಷ್ಣಾಂಶವು ಬ್ಯಾಟರಿಯ ಜೀವಿತಾವಧಿಯನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಕಳಪೆ ಗುಣಮಟ್ಟದ ಚಾರ್ಜರ್‌ಗಳು ಮತ್ತು ಡ್ಯೂಪ್ಲಿಕೇಟ್ ಅಡಾಪ್ಟರ್‌ಗಳನ್ನು ಬಳಸುವುದರಿಂದ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಫೋನ್ ತಯಾರಿಕಾ ಕಂಪನಿಗಳು ನೀಡುವ ಅಧಿಕೃತ ಹಾಗೂ ವಿಶ್ವಾಸಾರ್ಹ ಚಾರ್ಜರ್‌ಗಳನ್ನೇ ಬಳಸುವುದು ಉತ್ತಮ.
ಇದರೊಂದಿಗೆ, ಮೊಬೈಲ್ ಬ್ಯಾಟರಿ ಸಂಪೂರ್ಣವಾಗಿ ಶೂನ್ಯ (0%) ತಲುಪುವವರೆಗೆ ಫೋನ್ ಬಳಸುವುದು ಒಳ್ಳೆಯದಲ್ಲ. ಹಾಗೆಯೇ ಪ್ರತಿ ಬಾರಿಯೂ ಅದನ್ನು ನೂರಕ್ಕೆ ನೂರು (100%) ರಷ್ಟು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಬೇಕಾದ ಅಗತ್ಯವೂ ಇಲ್ಲ. ಬ್ಯಾಟರಿ ಮಟ್ಟವನ್ನು ಯಾವಾಗಲೂ ಮಧ್ಯಮ ಮಟ್ಟದಲ್ಲಿ (Moderate level) ಕಾಯ್ದುಕೊಳ್ಳುವುದು ಅತ್ಯುತ್ತಮ ಎಂದು ಹಲವು ತಾಂತ್ರಿಕ ತಜ್ಞರು ಸಲಹೆ ನೀಡುತ್ತಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬ್ಯಾಟರಿ ಆರೋಗ್ಯವನ್ನು ರಕ್ಷಿಸುವ ವಿಶೇಷ ಫೀಚರ್‌ಗಳಿರುವ ಸ್ಮಾರ್ಟ್‌ಫೋನ್‌ಗಳು ಸಹ ಲಭ್ಯವಿದ್ದು, ಇವು ರಾತ್ರಿಯ ಅವಧಿಯಲ್ಲಿ ಚಾರ್ಜ್ ಮಾಡುವಾಗ ಬ್ಯಾಟರಿಯ ಮೇಲಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಹೀಗಾಗಿ, ಕೇವಲ ರಾತ್ರಿಯಿಡೀ ಫೋನ್ ಅನ್ನು ಚಾರ್ಜ್‌ನಲ್ಲಿ ಇಡುವುದರಿಂದಲೇ ಬ್ಯಾಟರಿ ಹಾಳಾಗುತ್ತದೆ ಎನ್ನಲಾಗುವುದಿಲ್ಲ. ಆದರೆ ಅತಿಯಾದ ಶಾಖ, ಕಳಪೆ ಗುಣಮಟ್ಟದ ಚಾರ್ಜರ್‌ಗಳು ಮತ್ತು ತಪ್ಪು ಬಳಕೆಯ ಅಭ್ಯಾಸಗಳು ಬ್ಯಾಟರಿಯ ಆಯಸ್ಸನ್ನು ಖಂಡಿತವಾಗಿಯೂ ಕುಂಠಿತಗೊಳಿಸುತ್ತವೆ. ಸರಿಯಾದ ಚಾರ್ಜಿಂಗ್ ವಿಧಾನಗಳನ್ನು ಮತ್ತು ಉತ್ತಮ ಅಭ್ಯಾಸಗಳನ್ನು ಅನುಸರಿಸುವುದರಿಂದ ನಿಮ್ಮ ಫೋನಿನ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು, (ಏಜೆನ್ಸೀಸ್).