ಲೈಫ್‌ಸ್ಟೈಲ್

ಮನೋಲ್ಲಾಸ: ನಾಳೆಗಳ ಆಪತ್ತನ್ನು ದೂರಮಾಡೋಣ

kumarvrl

ಪದ್ಮಲತಾ ಮೋಹನ

ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಹಲವು ಪ್ರಾಣಿ ಪಕ್ಷಿಗಳು ಜೀವಿಸುತ್ತಿದ್ದವು. ಅಲ್ಲಿದ್ದ ಒಂದು ಮರದಲ್ಲಿ ಜೋಡಿ ಹಕ್ಕಿಗಳು ವಾಸಿಸುತ್ತಿದ್ದವು. ಅಲ್ಲಿ ಹಗಲಿನಲ್ಲಿ ಬೆಚ್ಚಗಿನ ವಾತಾವರಣ ಇದ್ದರೂ ರಾತ್ರಿ ಹೊತ್ತಿನಲ್ಲಿ ಉಷ್ಣತೆ ತುಂಬ ಕಡಿಮೆಯಾಗುತ್ತಿತ್ತು. ದಿನಗಳೆದಂತೆ ರಾತ್ರಿ ಚಳಿ ಹೆಚ್ಚಾಗತೊಡಗಿದಂತೆ ಒಂದು ದಿನ ಹೆಣ್ಣುಹಕ್ಕಿ, ‘ಈ ಚಳಿಗೆ ನಾವು ಸತ್ತುಹೋಗುತ್ತೇವೆ. ಆದಷ್ಟು ಬೇಗ ಗೂಡು ಕಟ್ಟಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು...’ ಎಂದು ಹೇಳಿತು.

‘ನೀನೇನೂ ಚಿಂತೆ ಮಾಡಬೇಡ. ಬೆಳಗ್ಗೆ ಎದ್ದ ಕೂಡಲೆ ನಾವು ಮಾಡುವ ಮೊದಲ ಕೆಲಸ ಗೂಡುಕಟ್ಟುವುದು. ಇದರ ನಂತರ ನಾವು ರಾತ್ರಿ ಆರಾಮವಾಗಿ ನಿದ್ರಿಸಬಹುದು’ ಎಂದು ಗಂಡುಹಕ್ಕಿ ಹೆಣ್ಣುಹಕ್ಕಿಯನ್ನು ಸಂತೈಸಿತು.

ಎಂದಿನಂತೆ ಬೆಳಗಾಯಿತು. ಸೂರ್ಯೋದಯದ ನಂತರ ಬಿಸಿಲಿನಲ್ಲಿ ಬೆಚ್ಚಗೆ ಅನುಭವವಾದೊಡನೆ ಈ ಜೋಡಿ ಹಕ್ಕಿಗಳು ನಲಿದಾಡುತ್ತ ಆಕಾಶದ ಎತ್ತರಕ್ಕೆ ಹಾರಿದವು. ಉಳಿದ ಹಕ್ಕಿಗಳ ಜೊತೆ ಆಟವಾಡುತ್ತ ಗೂಡು ಕಟ್ಟುವ ವಿಚಾರದ ಕಡೆ ಗಮನ ಹರಿಸಲಿಲ್ಲ. ಮತ್ತೆ ರಾತ್ರಿಯಾಯಿತು. ಹೆಣ್ಣುಹಕ್ಕಿ ಚಳಿಯಲ್ಲಿ ನಡುಗುತ್ತ ಮತ್ತೆ ಗೂಡು ಕಟ್ಟುವ ವಿಚಾರ ನೆನಪಿಸಿತು. ‘ನಾಳೆ ಕಟ್ಟೋಣ’ ಎಂದು ಮತ್ತೆ ಗಂಡುಹಕ್ಕಿ ಆಶ್ವಾಸನೆ ನೀಡಿತು. ಬೆಳಗಾದಾಗ ಮತ್ತೆ ಮರೆತು ಆಟ ಆಡುತ್ತ ಕಾಲ ಕಳೆದವು. ಹೀಗೆ ದಿನಗಳು ಉರುಳುತ್ತಿದ್ದವು. ಆ ಪ್ರದೇಶದಲ್ಲಿ ಚಳಿ ಹೆಚ್ಚಾಗುತ್ತಿತ್ತು. ಒಂದು ದಿನವಂತೂ ತಾಪಮಾನ ತೀರಾ ಕಡಿಮೆ ಆಯಿತು. ಆ ಚಳಿಗೆ ಗೂಡಿನ ಆಸರೆ ಇಲ್ಲದೆ ಈ ಜೋಡಿಹಕ್ಕಿಗಳು ಸತ್ತುಹೋದವು.

ಬುದ್ಧ ಹೇಳಿದ್ದ ಈ ಕಥೆಯಲ್ಲಿರುವ ತತ್ತ್ವವೇನು ತಿಳಿಯೋಣ.

ಮುಂದೆ ಬರುವ ವಿಪತ್ತಿನ ಅರಿವಿದ್ದರೂ ಗೂಡು ಕಟ್ಟುವ ಬದಲು ತಮ್ಮ ಸಮಯವನ್ನು ಕ್ಷಣಿಕ ಸುಖದಲ್ಲಿ ತೊಡಗಿಸಿಕೊಂಡಿದ್ದ ಹಕ್ಕಿಗಳು ಸ್ವಯಂಕೃತ ಅಪರಾಧದಿಂದ ಸಾವನ್ನಪ್ಪಿದವು. ಈ ರೀತಿ ಜೀವನದಲ್ಲಿ ಭೌತಿಕ ಸುಖದಲ್ಲಿ ಮೈ ಮರೆಯುವವರ ಎಲ್ಲರ ಪಾಡೂ ಇದೇ. ನಮ್ಮ ಸುತ್ತಮುತ್ತ ಇರುವ ಭೌತಿಕ ಆಕರ್ಷಣೆಗೆ, ಕ್ಷಣಿಕ ಸುಖಗಳಿಗೆ ಮನಸ್ಸನ್ನು ಹರಿಯಬಿಟ್ಟು ಯಾವ ಸಮಯದಲ್ಲಿ ಏನು ಮಾಡಬೇಕೆಂದುಕೊಂಡಿರುತ್ತೇವೋ ಅದನ್ನು ಮಾಡದೆ ಮುಂದೂಡುತ್ತ ಹೋಗುತ್ತೇವೆ. ಮುಂದೆ ಬಂದೊದಗುವ ಆಪತ್ತಿನ ಅರಿವಿದ್ದರೂ, ಅದಕ್ಕೆ ಪರಿಹಾರ ತಿಳಿದಿದ್ದರೂ ಬೇಕಾದ ರಕ್ಷಣೆ ಮಾಡಿಕೊಳ್ಳದೆ ನರಳುವವರಿಗೆ ಯಾರ ಅನುಕಂಪವೂ ಸಿಗುವುದಿಲ್ಲ. ಇದೆಲ್ಲ ಸ್ವಯಂಕೃತ ಅಪರಾಧವಲ್ಲವೇ? ಇದರ ಬದಲಾಗಿ, ವಯಸ್ಸು, ಶಕ್ತಿ ಇದ್ದಾಗ ಚೆನ್ನಾಗಿ ದುಡಿದು ಸಂಪಾದನೆ ಮಾಡಿ ಉಳಿತಾಯ ಮಾಡಿದರೆ ಮುಂದಿನ ಕಷ್ಟಕರ ಸಮಯದಲ್ಲಿ ಅಥವಾ ಮುಪ್ಪಿನ ಕಾಲದಲ್ಲಿ ನೆಮ್ಮದಿಯ ಜೀವನ ನಡೆಸಬಹುದು. ಮುಂಬರುವ ಆಪತ್ತನ್ನು ಆತ್ಮವಿಶ್ವಾಸದಿಂದ ಎದುರಿಸಬಹುದು. ನಮ್ಮ ಭವಿಷ್ಯವೂ ಚೆನ್ನಾಗಿರುತ್ತದೆ. ಹಾಗಾಗಿ, ಮಾಡುವ ಕೆಲಸಗಳನ್ನು ಸಕಾಲದಲ್ಲಿ ಮಾಡೋಣ, ತನ್ಮೂಲಕ ನಾಳೆಗಳ ಆಪತ್ತುಗಳನ್ನು ದೂರ ಮಾಡಿಕೊಳ್ಳಲು ಯತ್ನಿಸೋಣ.

(ಲೇಖಕಿ ಉಪನ್ಯಾಸಕಿ, ಹವ್ಯಾಸಿ ಬರಹಗಾರ್ತಿ)