ಲಾಕ್ಡೌನ್ ಅವಧಿ ಟೈಂಪಾಸ್ ಮಾಡೋದಕ್ಕೆ ಆಗ್ತಾ ಇಲ್ಲ ಅಂತ ಗಂಟೆ ಗಟ್ಟಲೆ ಮೊಬೈಲ್ ಕೈಯಲ್ಲೇ ಹಿಡಿದುಕೊಂಡು ನೋಡ್ತಾ ಇರ್ತೀರಾ? ಧಾರಾವಾಹಿಗಳು, ಸಿನಿಮಾಗಳು ಖುಷಿ ಮತ್ತು ಮನರಂಜನೆಯನ್ನು ಒದಗಿಸಬಹುದು. ಮಕ್ಕಳಿಗೋ ಕಾರ್ಟೂನ್ ಸಿಕ್ಕರೆ ಸಾಕು ಬೇರೇನೂ ಬೇಡ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೀಳು. ಆದರೆ, ಈ ಗೀಳು ಗೋಳಾಗದಂತೆ ನೋಡಿಕೊಳ್ಳಿ ಎಂಬುದು ಪರಿಣತರ ಸಲಹೆ. ಯಾಕೆ ಈ ರೀತಿ ಸಲಹೆ ಕೊಡ್ತಿದ್ದಾರೆ ಅಂದರೆ, ಅತಿಯಾಗಿ ಮೊಬೈಲ್ ವೀಕ್ಷಿಸುವುದರಿಂದ ಬಹುಬೇಗ ಆರೋಗ್ಯ ಕೆಡೋದಂತು ಗ್ಯಾರೆಂಟಿ. ಏನೇನು ಸಮಸ್ಯೆಗಳು ಕಾಣಿಸಿಕೊಳ್ತವೆ ನೋಡಿ..
ಇದು ಬರೀ ಮೊಬೈಲ್ಗಷ್ಟೇ ಸೀಮಿತವಲ್ಲ, ಟಿವಿ ಅಥವಾ ಕಂಪ್ಯೂಟರನ್ನೂ ದೀರ್ಘಾವಧಿ ಅಥವಾ ಗಂಟೆ ಗಟ್ಟಲೆ ಬಳಿಸಿದಾಗಲೂ ಕಾಣಿಸುತ್ತವೆ. ಕಂಗಳು ನಿತ್ರಾಣಕ್ಕೆ ಒಳಗಾಗುತ್ತವೆ. ಮೊಬೈಲ್ ಕೈಯಲ್ಲಿ ಹಿಡಿದುಕೊಂಡೇ ನೋಡ್ತಾ ಇದ್ದೀರಾದರೆ ಕತ್ತು ಮತ್ತು ಕೈಗಳಲ್ಲೂ ನೋವು ಕಾಣಿಸಿಕೊಳ್ಳುತ್ತದೆ. ಇದಲ್ಲದೆ ಪ್ರಮುಖ ಆರೋಗ್ಯ ಸಮಸ್ಯೆಗಳೇನು ಗಮನಿಸಿ..
ಡ್ರೈ ಐ ಸಿಂಡ್ರೋಮ್ ಅಥವಾ ಕಂಗಳು ಒಣಗುವ ಸಮಸ್ಯೆ- ಮೊಬೈಲ್ ಫೋನ್ಗೆ ತಗಲಾಕ್ಕೊಂಡಿರುವ ಜನರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಇದು. ಅವರ ಕಂಗಳಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಕಂಗಳ ಮೇಲ್ಮೈನಲ್ಲಿ ತೇವಾಂಶ ಕಡಿಮೆಯಾಗಿ ಡ್ರೈ ಐ ಸಿಂಡ್ರೋಮ್ ಕಾಣಿಸಿಕೊಳ್ಳುತ್ತದೆ. ಈ ರೀತಿ ಆದಾಗ ನಿಧಾನವಾಗಿ ತಲೆ ನೋವು, ಕಂಗಳು ಕೆಂಪಗಾಗುವುದು, ಬೆಳಕು ನೋಡುವುದಕ್ಕೆ ಆಗದಿರುವ ಸಮಸ್ಯೆಯೂ ಶುರುವಾಗುತ್ತದೆ. ನಿಧಾನವಾಗಿ ಕಣ್ಣೀರು ಗ್ರಂಥಿಗಳು ಕೆಲಸ ಮಾಡುವುದಕ್ಕಾಗದಷ್ಟು ಹಾನಿಗೊಳಗಾಗುತ್ತವೆ.
ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿ ಒಂದು ನಿಮಿಷಕ್ಕೆ 16 ಸಲ ಕಣ್ಣು ಮಿಟುಕಿಸುತ್ತಾನೆ/ತ್ತಾಳೆ. ಆದರೆ ಅತಿಯಾದ ಮೊಬೈಲ್ ಬಳಕೆಯಿಂದಾಗಿ ಕಣ್ಣು ಮಿಟುಕಿಸುವ ಸಂಖ್ಯೆ 8ಕ್ಕಿಂತಲೂ ಕಡಿಮೆಯಾಗಿಬಿಡುತ್ತದೆ. ಇದರಿಂದಾಗಿ ಕಣ್ಣೀರು ಉತ್ಪಾದನೆಯೂ ಕುಂಠಿತವಾಗುತ್ತದೆ. ಹೀಗಾಗಿಯೇ ಎರಡು ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಯಾವುದೇ ಕಾರಣಕ್ಕೂ ಮೊಬೈಲ್, ಟಿವಿ ತೋರಿಸಬೇಡಿ ಎಂದು ಸಲಹೆ ನೀಡುವುದು ಎನ್ನುತ್ತಾರೆ ಪರಿಣತರು.
ಇನ್ನು ಎರಡು ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ದಿನಕ್ಕೆ 2 ಗಂಟೆ ಮೊಬೈಲ್, ಟಿವಿ, ಕಂಪ್ಯೂಟರ್ ಎದುರು ಕುಳಿತರೆ ತೊಂದರೆಯಾಗದು. ಇದೇ ವೇಳೆ, ಎಂಟು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಾದರೆ ಈ ಅವಧಿ 4 ಗಂಟೆಯಷ್ಟೇ ಸೀಮಿತ. ಆದರೆ, ಹೀಗಾಗುತ್ತಿಲ್ಲ. ಬಹುತೇಕ ಮಕ್ಕಳ ಮೊಬೈಲ್, ಕಂಪ್ಯೂಟರ್, ಟಿವಿ ವೀಕ್ಷಣಾ ಸಮಯ ದಿನಕ್ಕೆ 7-10 ಗಂಟೆಗಳಷ್ಟಾಗಿರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು.
ಆನ್ಲೈನ್ ಕಲಿಕಾ ಪ್ಲಾಟ್ಫಾರಂಗಳು: ಕೆಲವು ವಿದ್ಯಾರ್ಥಿಗಳು ಎರಡು ಅಥವಾ ಮೂರು ಗಂಟೆ ಕಾಲ ಇ-ಕಲಿಕೆಗಾಗಿ ಮೊಬೈಲ್ ಫೋನ್ ಬಳಸುತ್ತಾರೆ. ಇದು ಅವರ ನಿಯತ ಕಲಿಕೆಗೆ ಹೊರತಾದುದಾಗಿರುತ್ತದೆ. ಇದು ಕೂಡ ಕಣ್ಣಿನ ಸಮಸ್ಯೆಗೆ ಕಾರಣಬಹುದು. ಮೊಬೈಲ್ ಮತ್ತು ಟಿವಿ ಪರದೆಯ ನೀಲಿ ಬೆಳಕು ಕಂಗಳಿಗೆ ಹಾನಿಕರವಾಗಿದ್ದು, ಅಗತ್ಯವಾಗಿ ಆ್ಯಂಟಿ ಗ್ಲೇರ್ ಗ್ಲಾಸ್ಗಳನ್ನು ಬಳಸಬೇಕು. ತೀರಾ ಅಗತ್ಯವೆನಿಸಿದರೆ ವೈದ್ಯರ ಪ್ರಿಸ್ಕ್ರಿಪ್ಶನ್ ಪಡೆದು ಔಷಧ ಬಳಸಬಹುದು.
ಕತ್ತಲಕೋಣೆಯಲ್ಲಿ ಮೊಬೈಲ್ ಫೋನ್ ಬಳಸಬೇಡಿ: ರಾತ್ರಿ ಹೊತ್ತು ಕತ್ತಲ ಕೋಣೆಯಲ್ಲಿ ಕುಳಿತೋ, ಮಲಗಿಯೋ ನಿತ್ಯವೂ ಮೊಬೈಲ್ ಫೋನ್ ವೀಕ್ಷಣೆ ಮಾಡುವುದು ಕೂಡ ಹಾನಿಕಾರಕ ವಿಚಾರ. ಕಣ್ಣು ಮತ್ತು ಮೊಬೈಲ್ ನಡುವೆ ಕನಿಷ್ಠ ಒಂದು ಪುಸ್ತಕ ಓದುವಾಗ ಹಿಡಿಯುವುದಕ್ಕಿಂತ ಹೆಚ್ಚು ಅಂತರ ಇರಬೇಕು. ಅಂದರೆ, ಪುಸ್ತಕ ಓದುವಾಗ ಕಣ್ಣಿಗೂ ಪುಸ್ತಕಕ್ಕೂ ಇರುವ ಅಂತರ ಕನಿಷ್ಠ 14 ಇಂಚು ಇದ್ದರೆ, ಮೊಬೈಲ್ ನೋಡುವಾಗ ಇದು 16 ಇಂಚು ಇರಬೇಕು.
ಮೂವತ್ತು ದಾಟಿದೆಯೇ ಹಾಗಾದ್ರೆ ಎಚ್ಚರ: ಸಾಮಾನ್ಯವಾಗಿ ಮೂವತ್ತು ವರ್ಷ ದಾಟಿದವರು ಅತಿಯಾಗಿ ಮೊಬೈಲ್, ಟಿವಿ, ಕಂಪ್ಯೂಟರ್ ಬಳಸುತ್ತಿದ್ದರೆ ಎಚ್ಚರದಿಂದ ಇರಲೇಬೇಕು. ಅನೇಕ ಕಡೆಗಳಲ್ಲಿ ಕಣ್ಣಿನ ಡಾಕ್ಟರ್ಗೆ ಕರೆಗಳು ಹೋಗುತ್ತಿದ್ದು, ಕಣ್ಣಿನ ಸಮಸ್ಯೆ, ಕತ್ತು ನೋವು, ಬೆನ್ನು ನೋವು ಇತ್ಯಾದಿ ಸಮಸ್ಯೆಗಳ ಬಗ್ಗೆ ಜನ ಹೇಳತೊಡಗಿದ್ದಾರೆ. ಇದು ಲಾಕ್ಡೌನ್ ಅವಧಿಯಲ್ಲಿ ಅತಿಯಾಗಿ ಮೊಬೈಲ್, ಟಿವಿ, ಕಂಪ್ಯೂಟರ್ ವೀಕ್ಷಿಸಿದ್ದರ ಪರಿಣಾಮ. ಈ ತರ ಇದ್ದಾಗ ಅಗತ್ಯವಾಗಿ ಕಣ್ಣಿನ ವೈದ್ಯರ ಸಲಹೆ ಪಡೆದುಕೊಳ್ಳಿ ಎಂದು ಪರಿಣತರು ಎಚ್ಚರಿಕೆಯ ಸಲಹೆಯನ್ನೂ ನೀಡಿದ್ದಾರೆ. (ಏಜೆನ್ಸೀಸ್)