ಅತ್ಯಂತ ಸರಳ ಉಡುಗೆ ಧರಿಸಿದ್ದ ಒಬ್ಬ ಸಾಮಾನ್ಯ ಕಾರ್ವಿುಕರಾಗಿದ್ದ ಆ ವ್ಯಕ್ತಿ ಸಭೆ ಮುಗಿಯುವುದನ್ನು ತಾಳ್ಮೆಯಿಂದ ಕಾಯುತ್ತಿದ್ದರು. ಸಭೆ ಮುಗಿದ ಕೂಡಲೇ ಎದ್ದು ನಿಂತು, ಈ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಎಲ್ಲ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಣೆ ಮಾಡುವ ಇಚ್ಛೆಯಿಂದ ತಾನು ಬಂದುದಾಗಿಯೂ, ಎಲ್ಲ ಶಾಲೆಗಳ ಮಕ್ಕಳ ಸಂಖ್ಯೆ ತಮ್ಮಿಂದ ಸಿಗಬಹುದು ಎಂದು ಇಲ್ಲಿಗೆ ಬಂದುದಾಗಿ ತಿಳಿಸಿದರು. ಸಭೆಯಲ್ಲಿ ಸೇರಿದ್ದವರೆಲ್ಲರೂ ಮೂಕವಿಸ್ಮಿತರಾದರು. ಇದಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಆತ ತನ್ನ ಫೈಲನ್ನು ಅಧಿಕಾರಿಯೊಬ್ಬರ ಕೈಗಿತ್ತು ಶಾಲೆಗಳ ಮಾಹಿತಿ ಬರೆದುಕೊಡಲು ಮನವಿ ಮಾಡಿದರು. ಪುಟ ತೆರೆದಾಗ ಇನ್ನೂ ಅಚ್ಚರಿ ಕಾದಿತ್ತು. ಅವರು ಸುಮಾರು 15 ವರ್ಷಗಳಿಂದಲೂ ದುಡಿಮೆಯ ಸ್ವಲ್ಪ ಭಾಗ ತೆಗೆದಿಟ್ಟು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವುದು ತಿಳಿಯಿತು. ಆ ವ್ಯಕ್ತಿಯನ್ನು ಮೇಲ್ನೋಟಕ್ಕೆ ನೋಡಿ ನಕಾರಾತ್ಮಕವಾಗಿ ಚಿಂತನೆ ಮಾಡಿದ ಎಲ್ಲರೂ ಈ ವಿಚಾರ ತಿಳಿದು ತಾವೇ ನಾಚಿಕೆ ಪಟ್ಟುಕೊಳ್ಳುವಂತಾಯಿತು. ಧರಿಸುವ ಬಟ್ಟೆ, ಚರ್ಮದ ಬಣ್ಣ, ರೂಪಗಳಿಂದ ಮನುಷ್ಯನ ಆಂತರ್ಯ ಅರ್ಥ ಮಾಡಿಕೊಳ್ಳಲಾಗದು. ಬಹಳ ಸಿರಿತನವಿದ್ದೂ, ಅದ್ದೂರಿ ಜೀವನ, ಅಂದದ ಬಟ್ಟೆ ಹಾಕಿದವರೂ ಒಮ್ಮೊಮ್ಮೆ ಹಂಚಿ ತಿನ್ನುವ ಮನೋಭಾವದಿಂದ ದೂರ ಸರಿಯುತ್ತಾರೆ. ತಾನು ದುಡಿದ ಹಣದಲ್ಲಿ ಕಿಂಚಿತ್ತಾದರೂ ಈ ಸಮಾಜಕ್ಕೆ ಸದ್ವಿನಿಯೋಗ ಆಗಬೇಕೆಂದು ಕಾರ್ವಿುಕರೊಬ್ಬರು ಮಕ್ಕಳಿಗೆ ನೋಟ್ಬುಕ್ ಹಂಚುವ ಚಿಂತನೆ ಮಾಡಿದಂತೆ, ಪ್ರತಿಯೊಬ್ಬರೂ ದುಡಿಮೆಯ ಸಣ್ಣ ಪಾಲನ್ನಾದರೂ ಈ ಸಮಾಜಕ್ಕೆ ನೀಡಿದರೆ ಆತ್ಮತೃಪ್ತಿ ಸಿಗುತ್ತದೆ.
ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು ಛಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ಛಜಗದ ಜೀವಿತದಿ ನಿಜಜೀವಿತದ ಪೂರ್ತಿಯನು | ಬಗೆಯಲರಿತವನೆ ಸುಖಿ ಮಂಕುತಿಮ್ಮ ||
ಎಂಬ ಡಿ.ವಿ.ಜಿ ಯವರ ಕಗ್ಗದ ಸಾಲುಗಳಂತೆ ಜಗತ್ತಿನ ಕಲ್ಯಾಣದಲ್ಲಿ ಆತ್ಮಕಲ್ಯಾಣವನು, ಜಗತ್ತಿನ ಬೀದಿಗಳಲ್ಲಿ ನಿಜ ಆತ್ಮಯಾತ್ರೆಯನ್ನು, ಜಗತ್ತಿನ ಬದುಕಿನಲ್ಲಿ ವೈಯಕ್ತಿಕ ಬದುಕಿನ ಪರಿಪೂರ್ಣತೆಯನ್ನು ಕಾಣಬಲ್ಲವನೇ ಸುಖಿಯಾಗಿರಲು ಸಾಧ್ಯ. ನಾವು ಈ ಜಗತ್ತಿನಿಂದ ಬೇರೆಯಲ್ಲ, ಈ ಜಗತ್ತಿನ ಒಂದು ಭಾಗವೇ ಆಗಿದ್ದೇವೆ. ಈ ಜಗತ್ತು ಉದ್ಧಾರವಾದರೆ ನಮ್ಮ ಉದ್ಧಾರವೂ ಆಗುತ್ತದೆ ಎಂಬುದನ್ನು ಅರಿತು ಬಾಳೋಣ.
(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)