ಡೈಮಂಡ್ ರೈನ್ AI image WEB
ಲೈಫ್‌ಸ್ಟೈಲ್

ಕೇವಲ ಕಲ್ಪನೆಯಲ್ಲ ಪ್ರಯೋಗಾಲಯದಲ್ಲೂ ಸಾಬೀತಾಯ್ತು ಡೈಮಂಡ್ ರೈನ್! ಆ ಗ್ರಹಗಳಲ್ಲಿ ವಜ್ರದ ಮಳೆ ಬೀಳುವುದು ಹೇಗೆ? Diamond Rain

ಮಳೆ ಎಂದರೆ ನೀರು, ಹಿಮ ಎಂದರೆ ಮಂಜುಗಡ್ಡೆ ಎಂಬುದು ನಮಗೆ ಗೊತ್ತು. ಆದರೆ ಬಾಹ್ಯಾಕಾಶದಲ್ಲಿ ಕೆಲವು ಗ್ರಹಗಳಲ್ಲಿ ವಜ್ರಗಳೇ ಮಳೆಯಂತೆ ಬೀಳಬಹುದು ಎಂದರೆ ನಂಬುತ್ತೀರಾ? ಹೌದು, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳ ಒಳಭಾಗದಲ್ಲಿ ವಜ್ರಗಳು ರೂಪುಗೊಳ್ಳಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಾದರೆ ಈ ವಜ್ರದ ಮಳೆ ಸೃಷ್ಟಿಯಾಗುವುದಾದರೂ ಹೇಗೆ? Diamond Rain

diamond rain: ಮಳೆ ಎಂದರೆ ನೀರು, ಹಿಮ ಎಂದರೆ ಮಂಜುಗಡ್ಡೆ ಎಂಬುದು ನಮಗೆ ಗೊತ್ತು. ಆದರೆ ಬಾಹ್ಯಾಕಾಶದಲ್ಲಿ ಕೆಲವು ಗ್ರಹಗಳಲ್ಲಿ ವಜ್ರಗಳೇ ಮಳೆಯಂತೆ ಬೀಳಬಹುದು ಎಂದರೆ ನಂಬುತ್ತೀರಾ? ಹೌದು, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳ ಒಳಭಾಗದಲ್ಲಿ ವಜ್ರಗಳು ರೂಪುಗೊಳ್ಳಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಹಾಗಾದರೆ ಈ ವಜ್ರದ ಮಳೆ ಸೃಷ್ಟಿಯಾಗುವುದಾದರೂ ಹೇಗೆ? ಭೂಮಿಯ ಮೇಲೆ ಮಳೆ ಬಂದರೆ ರಸ್ತೆಗಳು, ಮರಗಳು, ಬೆಟ್ಟಗಳು ತೊಯ್ದು ಹೋಗುತ್ತವೆ. ಕೆಲವೆಡೆ ಹಿಮಪಾತವಾದರೆ ಸುತ್ತಮುತ್ತಲಿನ ಪ್ರದೇಶವೇ ಬಿಳಿ ಹೊದಿಕೆ ಹೊದ್ದಂತೆ ಕಾಣುತ್ತದೆ. ಆದರೆ ನಮ್ಮ ಸೌರವ್ಯೂಹದಲ್ಲಿರುವ ಕೆಲವು ಗ್ರಹಗಳಲ್ಲಿ ಮಳೆಯ ರೂಪವೇ ವಿಭಿನ್ನವಾಗಿರಬಹುದು. ಅಲ್ಲಿ ನೀರಿನ ಹನಿಗಳ ಬದಲು ವಜ್ರದ ಸ್ಫಟಿಕಗಳೇ ರೂಪುಗೊಂಡು ಕೆಳಕ್ಕೆ ಬೀಳಬಹುದು ಎಂಬ ಸಂಗತಿ ವಿಜ್ಞಾನ ಲೋಕದಲ್ಲಿ ಕುತೂಹಲ ಮೂಡಿಸಿದೆ.

ಯಾವ ಗ್ರಹಗಳಲ್ಲಿ ವಜ್ರದ ಮಳೆ ಬೀಳುತ್ತದೆ?

ನಮ್ಮ ಸೌರವ್ಯೂಹದ ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳಲ್ಲಿ ವಜ್ರದ ಮಳೆ ಸಂಭವಿಸುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಅಧ್ಯಯನಗಳ ಮೂಲಕ ಊಹಿಸಿದ್ದಾರೆ. ಈ ಎರಡು ಗ್ರಹಗಳನ್ನು ಹಿಮ ದೈತ್ಯ ಗ್ರಹಗಳು ಎಂದು ಕರೆಯಲಾಗುತ್ತದೆ. ಇವುಗಳ ವಾತಾವರಣ ಮತ್ತು ಒಳಭಾಗದಲ್ಲಿ ಹೈಡ್ರೋಜನ್, ಹೀಲಿಯಂ, ಮೀಥೇನ್ ಸೇರಿದಂತೆ ಹಲವು ರಾಸಾಯನಿಕ ಸಂಯುಕ್ತಗಳಿವೆ. ವಿಶೇಷವಾಗಿ ಮೀಥೇನ್ ಅನಿಲದಲ್ಲಿ ಇಂಗಾಲದ ಅಂಶವಿದೆ. ಗ್ರಹಗಳ ಆಳಕ್ಕೆ ಹೋದಂತೆ ತಾಪಮಾನ ಮತ್ತು ಒತ್ತಡ ಅತ್ಯಂತ ಹೆಚ್ಚಾಗುತ್ತದೆ. ಈ ಪರಿಸ್ಥಿತಿಯಲ್ಲಿ ಮೀಥೇನ್‌ನಲ್ಲಿರುವ ಇಂಗಾಲ ಬೇರ್ಪಟ್ಟು ಘನ ರೂಪಕ್ಕೆ ಬದಲಾಗಬಹುದು. ನಂತರ ಅದು ವಜ್ರದ ರಚನೆಯನ್ನು ಪಡೆದು ಗ್ರಹದ ಒಳಭಾಗದತ್ತ ಕೆಳಕ್ಕೆ ಬೀಳಬಹುದು ಎಂಬುದು ವಿಜ್ಞಾನಿಗಳ ಸಿದ್ಧಾಂತ.

ಇದನ್ನೂ ಓದಿ : ಅಣಬೆ ಪ್ರಿಯರೇ ಹುಷಾರ್​! ನೋಡಲು ಸುಂದರ ಆದರೆ ಒಳಗಡೆ ಅಡಗಿದೆ ವಿಷ... Poisonous mushrooms

ವಜ್ರದ ಮಳೆ ಹೇಗೆ ಸೃಷ್ಟಿಯಾಗುತ್ತದೆ?

ಭೂಮಿಯಲ್ಲಿ ವಜ್ರಗಳು ರೂಪುಗೊಳ್ಳಲು ಕೂಡ ಹೆಚ್ಚಿನ ಒತ್ತಡ ಮತ್ತು ತಾಪಮಾನದಂತಹ ಪರಿಸ್ಥಿತಿಗಳು ಅಗತ್ಯ. ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳ ಒಳಭಾಗದಲ್ಲಿರುವ ಅಪಾರ ಒತ್ತಡವು ಇಂಗಾಲದ ಅಣುಗಳನ್ನು ವಜ್ರದ ರಚನೆಯಾಗಿ ಪರಿವರ್ತಿಸಲು ನೆರವಾಗಬಹುದು. ಈ ಪ್ರಕ್ರಿಯೆಯಲ್ಲಿ ಮೊದಲು ಮೀಥೇನ್‌ನಲ್ಲಿರುವ ಇಂಗಾಲ ಬೇರ್ಪಡುತ್ತದೆ. ನಂತರ ಇಂಗಾಲದ ಅಣುಗಳು ಒಂದಕ್ಕೊಂದು ಸೇರಿ ವಜ್ರದ ಸಣ್ಣ ಸ್ಫಟಿಕಗಳನ್ನು ರೂಪಿಸುತ್ತವೆ. ಈ ಸ್ಫಟಿಕಗಳು ಗ್ರಹದ ಆಳದತ್ತ ಸಾಗುತ್ತವೆ. ಹೀಗೆ ನಡೆಯುವ ಪ್ರಕ್ರಿಯೆಯನ್ನೇ ವಿಜ್ಞಾನಿಗಳು 'ಡೈಮಂಡ್ ರೈನ್' ಎಂದು ಕರೆಯುತ್ತಾರೆ.

ಪ್ರಯೋಗಾಲಯದಲ್ಲೂ ಸೃಷ್ಟಿಯಾಯಿತು ವಜ್ರದ ಮಳೆ!

ಇದು ಕೇವಲ ಕಲ್ಪನೆಯಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿಯೂ ಈ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. 2017ರಲ್ಲಿ ಸಂಶೋಧಕರು ಪ್ಲಾಸ್ಟಿಕ್ ವಸ್ತುವಿನ ಮೇಲೆ ಅತ್ಯಂತ ತೀವ್ರವಾದ ಲೇಸರ್ ಕಿರಣಗಳನ್ನು ಹಾಯಿಸಿ, ನೆಪ್ಚೂನ್ ಮತ್ತು ಯುರೇನಸ್ ಗ್ರಹಗಳ ಒಳಭಾಗದಲ್ಲಿರುವಂತಹ ಒತ್ತಡ ಹಾಗೂ ತಾಪಮಾನದ ಪರಿಸ್ಥಿತಿಯನ್ನು ಸೃಷ್ಟಿಸಿದ್ದರು. ಈ ಪ್ರಯೋಗದಲ್ಲಿ ಸಣ್ಣ ವಜ್ರದ ರಚನೆಗಳು ರೂಪುಗೊಂಡಿರುವುದನ್ನು ಗುರುತಿಸಿದ್ದರು.

2022ರಲ್ಲಿ ಇದೇ ರೀತಿಯ ಸಂಶೋಧನೆಯನ್ನು ಮತ್ತಷ್ಟು ಮುಂದುವರಿಸಲಾಯಿತು. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ನೆಪ್ಚೂನ್ ಗ್ರಹದ ಪರಿಸ್ಥಿತಿಯನ್ನು ಅನುಕರಿಸಿ ನ್ಯಾನೋ ಗಾತ್ರದ ವಜ್ರಗಳ ರಚನೆಯನ್ನು ಗಮನಿಸಿದರು. ಇದರಿಂದ ಈ ಗ್ರಹಗಳಲ್ಲಿ ವಜ್ರದ ಮಳೆ ಸಂಭವಿಸುವ ಸಾಧ್ಯತೆಗೆ ಮತ್ತಷ್ಟು ವೈಜ್ಞಾನಿಕ ಬೆಂಬಲ ದೊರೆಯಿತು.

ನಿಜವಾಗಿಯೂ ಗ್ರಹಗಳಲ್ಲಿ ವಜ್ರದ ಮಳೆ ನೋಡಿದ್ದಾರೆಯೇ?

ಇಲ್ಲಿಯವರೆಗೆ ವಿಜ್ಞಾನಿಗಳು ನೆಪ್ಚೂನ್ ಅಥವಾ ಯುರೇನಸ್ ಗ್ರಹಗಳಲ್ಲಿ ವಜ್ರಗಳು ಮಳೆಯಂತೆ ಬೀಳುವುದನ್ನು ನೇರವಾಗಿ ವೀಕ್ಷಿಸಿಲ್ಲ. ಇದು ಪ್ರಯೋಗಾಲಯದ ಅಧ್ಯಯನಗಳು ಮತ್ತು ಗ್ರಹಗಳ ಒಳಭಾಗದ ಮಾದರಿಗಳ ಆಧಾರದ ಮೇಲೆ ರೂಪುಗೊಂಡಿರುವ ವೈಜ್ಞಾನಿಕ ಸಿದ್ಧಾಂತವಾಗಿದೆ. ಆದರೂ ಈ ಸಂಶೋಧನೆಗಳು ಬಾಹ್ಯಾಕಾಶದ ಗ್ರಹಗಳ ಒಳಭಾಗದಲ್ಲಿ ನಡೆಯಬಹುದಾದ ವಿಚಿತ್ರ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಿವೆ. ಭೂಮಿಯಲ್ಲಿ ಅಮೂಲ್ಯ ಆಭರಣವಾಗಿ ಕಾಣುವ ವಜ್ರಗಳು ಬಾಹ್ಯಾಕಾಶದ ಕೆಲವು ಗ್ರಹಗಳಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುತ್ತಿರಬಹುದು ಎಂಬ ಕಲ್ಪನೆಯೇ ನಿಜಕ್ಕೂ ವಿಸ್ಮಯಕಾರಿಯಾಗಿದೆ, (ಏಜೆನ್ಸೀಸ್​).