ಹೈದರಾಬಾದ್: ದೇಶದ ಮೊದಲ ಕೋವಿಡ್ 19 ಔಷಧ ಎಂದು ಹೇಳಲಾಗುತ್ತಿರುವ ಕೋವ್ಯಾಕ್ಸಿನ್ನ ಹ್ಯೂಮನ್ ಕ್ಲಿನಿಕಲ್ ಟ್ರಯಲ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದ್ದಾಗಿ ವರದಿಯಾಗಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಎಂಬ ಲಸಿಕೆ ಉತ್ಪಾದಕ ಕಂಪನಿ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದೆ. ಹೈದರಾಬಾದ್ನ ಜಿನೋಮ್ ವ್ಯಾಲಿಯಲ್ಲಿ ಇರುವ ಬಯೋ ಸೇಫ್ಟಿ ಲೆವೆಲ್ ಮೂರರ ಹೈ ಕಂಟೇನ್ಮೆಂಟ್ ಫೆಸಿಲಿಟಿಯಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ದೇಶೀಯವಾಗಿಯೇ ಅಭಿವೃದ್ಧಿಪಡಿಸಿರುವ ಲಸಿಕೆಗೆ ಕೋವಾಕ್ಸಿನ್ ಎಂದು ಹೆಸರಿಡಲಾಗಿದ್ದು, ಸದ್ಯ ಇನ್ಆ್ಯಕ್ಟಿವೇಟೆಡ್ ವಾಕ್ಸಿನ್ ಆಗಿದೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿ ಅದರಿಂದ ಸಾರ್ಸ್-ಕೋವ್-2 ಒತ್ತಡವನ್ನು ಪ್ರತ್ಯೇಕಿಸಿ ನಂತರ ಭಾರತ್ ಬಯೋಟೆಕ್ಗೆ ಹಸ್ತಾಂತರಿಸಲಾಗಿದೆ. ಇದರ ಫಲಿತಾಂಶವನ್ನು ಕಂಪನಿಯು ಡಿಸಿಜಿಐಗೆ ಸಲ್ಲಿಸಿದ್ದು, ಹ್ಯೂಮನ್ ಕ್ಲಿನಿಕಲ್ ಟ್ರಯಲ್ಗೆ ಅನುಮತಿ ಸಿಕ್ಕಿದೆ. ಇದರೊಂದಿಗೆ ಮುಂದಿನ ತಿಂಗಳು ದೇಶಾದ್ಯಂತ ಈ ಲಸಿಕೆಯ ಕ್ಲಿನಿಕಲ್ ಟ್ರಯಲ್ ಆರಂಭವಾಗಲಿದೆ.
ಕೋವಿಡ್-19 ತಡೆಗೆ ಭಾರತದ ಮೊದಲ ಸ್ವದೇಶಿ ಲಸಿಕೆ ಕೋವಾಕ್ಸಿನ್ ಎಂದು ಘೋಷಿಸುವುದಕ್ಕೆ ನಾವು ಹೆಮ್ಮೆ ಪಡುತ್ತಿದ್ದೇವೆ. ಐಸಿಎಂಆರ್ ಮತ್ತು ಎನ್ಐವಿ ಪಾಲುದಾರಿಕೆ ಈ ಲಸಿಕೆಯ ಅಭಿವೃದ್ಧಿಯಲ್ಲಿ ಮಹತ್ವದ್ದಾಗಿತ್ತು. ಸಿಡಿಎಸ್ಸಿಒದ ಮಾರ್ಗಸೂಚಿ ಮತ್ತು ಪೂರಕ ಬೆಂಬಲದ ಕಾರಣ ಇದು ಬಹಳ ಬೇಗನೆ ಕಾರ್ಯಸಾಧುವಾಯಿತು. ನಮ್ಮ ಆರ್ಆ್ಯಂಡ್ ಡಿ ಮತ್ತು ಉತ್ಪಾದನಾ ತಂಡಗಳ ಸದಸ್ಯರು ಈ ಲಸಿಕೆಯ ಅಭಿವೃದ್ಧಿಗೆ ನಮ್ಮಲ್ಲಿರುವ ಟೆಕ್ನಾಲಜಿ ಮತ್ತು ಇತರೆ ಮೂಲಸೌಕರ್ಯವನ್ನು ಬಳಸಿಕೊಂಡು ಅವಿರತವಾಗಿ ಶ್ರಮವಹಿಸಿದ್ದಾರೆ ಎಂದು ಭಾರತ್ ಬಯೋಟೆಕ್ನ ಸಿಎಂಡಿ ಡಾ.ಕೃಷ್ಣ ಎಲ್ಲಾ ತಿಳಿಸಿದ್ದಾರೆ.
ಕಂಪನಿಯ ಜೆಎಂಡಿ ಸುಚಿತ್ರಾ, ನಮ್ಮಲ್ಲಿ ಸದ್ಯ ಚಾಲ್ತಿಯಲ್ಲಿರುವ ಸಂಶೋಧನೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಕುರಿತ ಪರಿಣತೆಯು ಎಚ್1ಎನ್1 ಲಸಿಕೆ ಅಭಿವೃದ್ಧಿ ಪಡಿಸುವಲ್ಲಿಯೂ ನೆರವಾಗಿತ್ತು ಎಂದು ಹೇಳಿದ್ದಾರೆ. ಈ ಕಂಪನಿ ಇದುವರೆಗೆ ಪೊಲಿಯೋ, ರೇಬಿಸ್, ರೊಟಾವೈರಸ್, ಜಪಾನೀಸ್ ಎನ್ಸೆಫಾಲಿಟಿಸ್, ಚಿಕೂನ್ಗುನ್ಯಾ, ಝಿಕಾ ವೈರಸ್ಗೆ ಲಸಿಕೆ ಅಭಿವೃದ್ಧಿಪಡಿಸಿದೆ. (ಏಜೆನ್ಸೀಸ್)