ಲೈಫ್‌ಸ್ಟೈಲ್

ಸುಖವಾದ ನಿದ್ದೆ ಬೇಕೆಂದರೆ ಯೋಗದ ಮೊರೆಹೋಗಿ

ಪ್ರ:ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ 2-3 ತಾಸು ನಿದ್ರೆ ಬಂದರೆ ಹೆಚ್ಚು. ಸುಖನಿದ್ರೆಗಾಗಿ ಯಾವ ಯೋಗ ಅಳವಡಿಸಿಕೊಳ್ಳಬಹುದು?

ಉತ್ತರ: ಇತ್ತೀಚಿನ ಆಧುನಿಕ ಜೀವನ ಶೈಲಿಯ ವಿಧಾನದಿಂದ ಕೆಲವೊಮ್ಮೆ ನಿದ್ರೆಯ ಕೊರತೆ ಕಂಡು ಬರುತ್ತದೆ. ಅತಿಯಾದ ಕೆಲಸದ ಒತ್ತಡದಿಂದಲೂ ಕೆಲವೊಮ್ಮೆ ಸಮರ್ಪಕವಾಗಿ ನಿದ್ರೆ ಬರುವುದಿಲ್ಲ. ನಿದ್ರೆ ಯಾಕೆ ಬರುತ್ತಿಲ್ಲ? ಮನಸ್ಸು, ಬುದ್ಧಿಗೆ ಹೆಚ್ಚು ಕೆಲಸ ಕೊಟ್ಟಾಗ ನಿದ್ರೆ ಬರುವುದಿಲ್ಲ. ದೈಹಿಕ ನಿರಾಯಾಸ, ಚಿಂತೆ, ಒತ್ತಡ, ಉದ್ವೇಗ, ಆಹಾರ ಸೇವನೆಯ ಅನಿಯಮ ಇತ್ಯಾದಿ ನಿದ್ರಾಭಂಗಕ್ಕೆ ಕಾರಣ. ನಿದ್ರಾಹೀನತೆಯಿಂದ ಆಸಿಡಿಟಿ, ಬೊಜ್ಜು, ಮಾನಸಿಕ ದೌರ್ಬಲ್ಯ, ನಿರುತ್ಸಾಹ ಇತ್ಯಾದಿ ರೋಗಗಳು ಬಾಧಿಸಬಲ್ಲವು. ಆದರೆ ನಿದ್ರೆ ಬರಲಿಲ್ಲ ಎಂಬ ಚಿಂತೆ ಬೇಡ. ದೇಹವೇ ನಿದ್ರೆ ಕೇಳುತ್ತದೆ. ದೇಹಕ್ಕೆ ದಣಿವಾದರೆ ನಿದ್ರೆಯು ಸಹಜವಾಗಿ ಬರುತ್ತದೆ. ನಿದ್ರೆ ಬರಲಿಲ್ಲ ಎಂಬ ಚಿಂತೆ ಮಾಡಿದರೆ ಅದುವೇ ಒಂದು ಕಾಯಿಲೆಯಾಗುತ್ತದೆ. ಸುಮ್ಮನೇ ಹಾಸಿಗೆಯಲ್ಲಿ ಮಲಗಿ ವಿಶ್ರಾಂತಿ ಮಾಡಿ.

ನಿದ್ರೆ ಬರಲು ಕೆಲವು ಟಿಪ್ಸ್​ಗಳು: ಯಾವುದೇ ಚಿಂತೆಗಳನ್ನು ರಾತ್ರಿ ಮಲಗುವ ವೇಳೆಗೆ ಗಾಳಿಗೆ ತೂರಿಬಿಡುವುದು ಒಳ್ಳೆಯ ಉಪಾಯ. ಇಂಪಾದ ಸಂಗೀತ ಕೇಳಿ ಮಲಗುವುದು, ದೈಹಿಕವಾಗಿ ಬಳಲಿಕೆ ಆಗುವ ವ್ಯಾಯಾಮ, ನಡಿಗೆ ಯೋಗಾಸನಗಳು, ಪ್ರಾಣಾಯಾಮ, ಧ್ಯಾನ, ಮುದ್ರೆಗಳು, ಯೋಗಾಭ್ಯಾಸವು ನಿಮ್ಮಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ಪ್ರಾಚೀನ ಅಭ್ಯಾಸವು ಒತ್ತಡವನ್ನು ಕಡಿಮೆ ಮಾಡುವ, ಸಣ್ಣ ನೋವನ್ನು ಸರಾಗಗೊಳಿಸುವ, ಆತಂಕವನ್ನು ನಿವಾರಿಸುವ ಮತ್ತು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಸಾಮರ್ಥ್ಯ್ಕೆ ಹೆಸರುವಾಸಿಯಾಗಿದೆ.

ಪ್ರಾಣಾಯಾಮದಲ್ಲಿ ಉಸಿರಾಟದ ಮೇಲೆ ಹಿಡಿತ ಉಂಟುಮಾಡುವುದಲ್ಲದೆ, ಸಕ್ರಮಗೊಳಿಸಿ ಶ್ವಾಸಕೋಶದ ಮತ್ತು ನರಮಂಡಲದ ಸಾಮರ್ಥ್ಯವನ್ನು ಹೆಚ್ಚಿಸುವುದು. ನಾಡಿ ಶುದ್ಧಿಯಾಗಿ ಮನಸ್ಸಿನ ಚಂಚಲತೆ ಇಲ್ಲದಾಗಿ ಅದು ಶಾಂತವಾಗುವುದು. ಸಂಯಮ ಉಂಟಾಗುವುದು, ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಪ್ರಾಣಮಯ ಕೋಶದ ಶುದ್ಧೀಕರಣವಾಗಿ ಅದು ಸಶಕ್ತವಾಗುವುದು.

ಸೂಚಿತ ಆಸನಗಳು: ಅರ್ಧ ಚಕ್ರಾಸನ, ಪಾದ ಹಸ್ತಾಸನ, ಪರ್ವತಾಸನ, ಶಶಾಂಕಾಸನ, ಸರ್ವಾಂಗಾಸನ, ಮಕರಾಸನ, ಭುಜಂಗಾಸನ, ಅಧೋಮುಖ - ಶ್ವಾನಾಸನ, ಬಕಾಸನ ಮತ್ತು ಶವಾಸನ. ಸಾಧ್ಯವಾದರೆ ಕಪಾಲಭಾತಿ, ತ್ರಾಟಕ, ನೌಲಿ ಕ್ರಿಯೆಗಳು.(ಅಗ್ನಿಸಾರ ಕ್ರಿಯೆ). ಪ್ರತಿ ನಿತ್ಯ ಯೋಗ ಮಾಡುವುದರಿಂದ ದೈನಂದಿನ ಒತ್ತಡ ಗಳಿಂದ ದೂರ ಉಳಿದು ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಯೋಗವನ್ನು ಅಭ್ಯಾಸ ಮಾಡುವ ಮುಂಚೆ ಗುರುಮುಖೇನ ಯೋಗದ ಬಗೆಗಿನ ಮಾಹಿತಿ, ಸಲಹೆ, ಸೂಚನೆ ಪಡೆದುಕೊಂಡು ಕಲಿತು ಪ್ರಾರಂಭಿಸಿರಿ. ನಿಯಮಿತ ಯೋಗಾಭ್ಯಾಸವು ಆರೋಗ್ಯಕರ ನಿದ್ರೆ ಬರಲು ಸಹಾಯ ಮಾಡುತ್ತದೆ.

ಮುದ್ರೆಗಳು: ಪ್ರಾಣ ಮುದ್ರೆ 10 ನಿಮಿಷ, ಚಿನ್​ವುುದ್ರೆ 20 ನಿಮಿಷ, ಶಕ್ತಿ ಮುದ್ರೆ 10 ನಿಮಿಷ ಅಭ್ಯಾಸ ಮಾಡಿ.

ಹಾಸಿಗೆಯಲ್ಲಿ ಮಲಗುವ ಮೊದಲು ಕುಳಿತುಕೊಂಡು ಚಿನ್​ವುುದ್ರೆ ಧಾರಣೆ ಮಾಡಿ ಇಷ್ಟ ದೇವರನ್ನು ಅಥವಾ ‘ಓಂ ಪದ್ಮನಾಭಾಯ ನಮಃ’ ಎಂದು ಸ್ವಲ್ಪ ಹೊತ್ತು ಮಂತ್ರ ಪಠಿಸಿ. ಆಮೇಲೆ ಹಾಗೇ ಹಾಸಿಗೆಯಲ್ಲಿ ಕುಳಿತುಕೊಂಡೇ ಚಿನ್​ವುುದ್ರೆ ಧಾರಣೆ ಮಾಡಿ ಉಸಿರನ್ನು ಗಮನಿಸುತ್ತ ಅಥವಾ ಇಷ್ಟ ದೇವರನ್ನು ಗಮನಿಸಿಕೊಂಡು ಧ್ಯಾನ ಮಾಡಿ. ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಲು ಒಳ್ಳೆಯ ಕಲೆಗಳ ಹವ್ಯಾಸ, ಶಾರೀರಿಕ ಚಟುವಟಿಕೆ, ಸದ್ವಿನಯ, ಸತ್ಸಂಗ, ಒಳ್ಳೆಯ ಪುಸ್ತಕಗಳ ಓದು ಇತ್ಯಾದಿ ಗಳನ್ನು ರೂಢಿಸಿಕೊಳ್ಳಿ. ಹಗಲು ನಿದ್ರಿಸದಿರುವುದು, ಮಲಗುವ ಸಮಯಕ್ಕಿಂತ ಕನಿಷ್ಠ ಒಂದ ತಾಸು ಮೊದಲು ಹದವರಿತು ಊಟ ಮಾಡುವುದು, ಸಾತ್ವಿಕ ಆಹಾರ ಸ್ವೀಕರಿಸುವುದು, ಮಲಗುವ ಕೋಣೆಯ ಕಿಟಕಿಗಳನ್ನು ತೆರೆದಿಟ್ಟು ಶುಭ್ರ ಗಾಳಿ ಓಡಾಡುವಂತೆ ಮಾಡುವುದು ಕೂಡ ಅಗತ್ಯ. ಹೀಗೆ ಒಟ್ಟಿನಲ್ಲಿ ಒಂದು ಹಿತವಾದ ವಾತಾವರಣದಲ್ಲಿ ಮಲಗಿ ನಿದ್ರೆಯನ್ನು ಆಹ್ವಾನಿಸಿಕೊಳ್ಳಿ. ನಾವು ದೇಹದ ಆರೋಗ್ಯಕ್ಕೆ ಒತ್ತು ಕೊಡುವ ಹಾಗೇ ಮನಸ್ಸಿನ ಆರೋಗ್ಯಕ್ಕೆ ಒತ್ತು ಕೊಡುವುದಿಲ್ಲ. ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸುವ ವಿಧಾನ ತಿಳಿದಿರಬೇಕು. ಹೆಚ್ಚಿನ ನಮ್ಮ ಸಮಸ್ಯೆ ಮನಸ್ಸಿನ ದೋಷದಿಂದಲೇ ಸೃಷ್ಟಿಯಾಗುತ್ತದೆ.