35 ಕೆಜಿ ತೂಕ ಇಳಿಸಿಕೊಂಡ ಶೈವ್ಯಾ ಜೈನ್ 
ಆರೋಗ್ಯ

ತೂಕ ಇಳಿದರೂ ಸಿಗದ ಸಂತೋಷ... ಯಾರೂ ಹೇಳದ 6 ಕಹಿ ಸತ್ಯ ಬಿಚ್ಚಿಟ್ಟ 35 KG ತೂಕ ಇಳಿಸಿಕೊಂಡ ಯುವತಿ! Weight Loss

ಸತತ 12 ತಿಂಗಳಲ್ಲಿ ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡು ಸಾಧನೆ ಮಾಡಿರುವ ಶೈವ್ಯಾ ಜೈನ್ (Shaivya Jain) ಎಂಬ ಯುವತಿ, ತಮ್ಮ ಈ ಫಿಟ್‌ನೆಸ್‌ ಪಯಣದಲ್ಲಿ ಕಂಡುಕೊಂಡ 6 ಕಹಿ ಸತ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದು ಪ್ರತಿಯೊಬ್ಬರಿಗೂ ಕಣ್ಣು ತೆರೆಸುವಂತಿದೆ.

Weight Loss : ತೂಕ ಇಳಿಸಿಕೊಳ್ಳುವುದು ಎಂದರೆ ಕೇವಲ ವ್ಯಾಯಾಮ ಅಥವಾ ಆಹಾರ ನಿಯಂತ್ರಣ ಮಾತ್ರವಲ್ಲ, ಅದಕ್ಕೆ ಅಪಾರ ತಾಳ್ಮೆ ಮತ್ತು ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳು ಅಗತ್ಯ. ತೂಕ ಕಡಿಮೆಯಾದ ನಂತರ ಸಿಗುವ ಲಾಭಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ, ಆದರೆ, ಆ ಹಾದಿಯಲ್ಲಿ ಎದುರಾಗುವ ಕಠಿಣ ಸವಾಲುಗಳ ಬಗ್ಗೆ ಯಾರೂ ಹೇಳುವುದಿಲ್ಲ. ಸತತ 12 ತಿಂಗಳಲ್ಲಿ ಬರೋಬ್ಬರಿ 35 ಕೆಜಿ ತೂಕ ಇಳಿಸಿಕೊಂಡು ಸಾಧನೆ ಮಾಡಿರುವ ಶೈವ್ಯಾ ಜೈನ್ (Shaivya Jain) ಎಂಬ ಯುವತಿ, ತಮ್ಮ ಈ ಫಿಟ್‌ನೆಸ್‌ ಪಯಣದಲ್ಲಿ ಕಂಡುಕೊಂಡ 6 ಕಹಿ ಸತ್ಯಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅದು ಪ್ರತಿಯೊಬ್ಬರಿಗೂ ಕಣ್ಣು ತೆರೆಸುವಂತಿದೆ.

1. ಫಿಟ್‌ನೆಸ್‌ ಪಯಣಕ್ಕೆ ಜೇಬಿನಿಂದ ಹರಿಯಬೇಕು ಹಣ!

ತೂಕ ಇಳಿಸಿಕೊಳ್ಳಲು ಪ್ರತಿ ತಿಂಗಳು ಸರಿಸುಮಾರು 10,000 ದಿಂದ 12,000 ರೂಪಾಯಿ ಖರ್ಚಾಗುತ್ತದೆ ಎಂದು ಶೈವ್ಯಾ ವಿವರಿಸಿದ್ದಾರೆ. ಪರ್ಸನಲ್ ಟ್ರೈನಿಂಗ್, ಪ್ರೋಟೀನ್ ಪೂರಕಗಳು, ಶುಗರ್-ಫ್ರೀ ಸ್ನ್ಯಾಕ್ಸ್ ಮತ್ತು ಪ್ರತಿದಿನ ಪೌಷ್ಟಿಕ ಆಹಾರವನ್ನು ಕೊಳ್ಳುವುದು ಅತ್ಯಗತ್ಯವಾಗಿತ್ತು. ತಾವು ಕೆಳ-ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದು, ಸೀಮಿತ ಆದಾಯವಿದ್ದ ಕಾರಣ ಇಷ್ಟೊಂದು ಹಣವನ್ನು ಪ್ರತಿ ತಿಂಗಳು ವಿನಿಯೋಗಿಸುವುದು ತಮಗೆ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು ಎಂದು ಅವರು ಬರೆದುಕೊಂಡಿದ್ದಾರೆ.

2. ದಿಢೀರ್ ಡಯಟ್ ಬದಲಾವಣೆಯಿಂದ ಜೀರ್ಣಾಂಗ ವ್ಯವಸ್ಥೆಯ ಏರುಪೇರು

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಆಹಾರ ಪದ್ಧತಿಯಲ್ಲಿ ಅನೇಕ ಸಣ್ಣ ಮತ್ತು ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಶೈವ್ಯಾ ಅವರಿಗೆ ಪದೇಪದೆ ಮಲಬದ್ಧತೆ ಮತ್ತು ಭೇದಿಯಂತಹ ಹೊಟ್ಟೆಯ ಸಮಸ್ಯೆಗಳು ಎದುರಾಗುತ್ತಿದ್ದವು. ಈ ಜೀರ್ಣಾಂಗ ಸಂಬಂಧಿತ ತೊಂದರೆಗಳನ್ನು ಶಮನಗೊಳಿಸಲು ಅವರು ಪ್ರತಿದಿನ ನಾರಿನಂಶ ಹೆಚ್ಚಿರುವ 'ಚಿಯಾ ಸೀಡ್ಸ್' ಮತ್ತು 'ಇಸಬ್‌ಗೋಲ್' ಸೇವಿಸಬೇಕಾಯಿತು.

3. ಪ್ರತಿದಿನ 3 ರಿಂದ 4 ಗಂಟೆಗಳ ಸಮಯ ಮೀಸಲು

ಫಿಟ್‌ನೆಸ್‌ಗಾಗಿ ಪ್ರತಿದಿನ 3 ರಿಂದ 4 ಗಂಟೆಗಳ ಸಮಯವನ್ನು ವಿನಿಯೋಗಿಸಬೇಕಾಗುತ್ತದೆ ಎಂದು ಶೈವ್ಯಾ ಜೈನ್ ತಿಳಿಸಿದ್ದಾರೆ. ಜಿಮ್‌ನಲ್ಲಿ ಕಳೆಯುವ ಸಮಯ, ಪೌಷ್ಟಿಕ ಅಡುಗೆ ತಯಾರಿಕೆ ಮತ್ತು ಬಟ್ಟೆ ಒಗೆಯುವುದು ಸೇರಿದಂತೆ ದಿನನಿತ್ಯದ ಕೆಲಸಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ವಿಶೇಷವಾಗಿ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಸಮಯವನ್ನು ಕಂಡುಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ.

4. ಜೀವನದ ಎಲ್ಲಾ ಆದ್ಯತೆಗಳನ್ನೂ ಬದಿಗೊತ್ತಬೇಕಾಗುತ್ತದೆ

35 ಕೆಜಿ ತೂಕ ಇಳಿಸಲು ಶೈವ್ಯಾ ಅವರಿಗೆ ಪೂರ್ತಿ ಒಂದು ವರ್ಷ ಬೇಕಾಯಿತು. ಈ ಒಂದು ವರ್ಷದ ಅವಧಿಯಲ್ಲಿ ಕೆಲಸ, ರಜೆಗಳ ಪ್ರವಾಸ ಹಾಗೂ ಬಂಧು-ಮಿತ್ರರೊಂದಿಗಿನ ಬಾಂಧವ್, ಎಲ್ಲಕ್ಕಿಂತ ಹೆಚ್ಚಾಗಿ ಫಿಟ್‌ನೆಸ್‌ಗೆ ಮೊದಲ ಆದ್ಯತೆ ನೀಡಬೇಕಾಯಿತು. ಒಂಟಿಯಾಗಿ ಇರದವರಿಗೆ ಅಥವಾ ಮಕ್ಕಳಿರುವ ಜನರಿಗೆ ಈ ರೀತಿಯ ಕಠಿಣ ದಿನಚರಿಯನ್ನು ನಿರಂತರವಾಗಿ ಕಾಯ್ದುಕೊಳ್ಳುವುದು ಅತ್ಯಂತ ಕಷ್ಟಕರ ಎಂದು ಅವರು ಹೇಳಿದ್ದಾರೆ.

5. ಮತ್ತೆ ತೂಕ ಹೆಚ್ಚಾಗುತ್ತದೆಯೋ ಎಂಬ ನಿರಂತರ ಮಾನಸಿಕ ಒತ್ತಡ

ವ್ಯಾಯಾಮ ಅಥವಾ ಡಯಟ್ ಮಾಡುವುದಕ್ಕಿಂತಲೂ, ಇಳಿಸಿದ ತೂಕ ಮತ್ತೆ ಎಲ್ಲಿ ಹೆಚ್ಚಾಗುತ್ತದೆಯೋ ಎಂಬ ಭಯ ಮತ್ತು ಮಾನಸಿಕ ಒತ್ತಡವನ್ನು ತಡೆಯುವುದು ಕಷ್ಟ. ಒಮ್ಮೆ ಸಾಮಾನ್ಯ ಆಹಾರ ಸೇವಿಸಿದರೂ ತೂಕ ಮತ್ತೆ ಹೆಚ್ಚಾಗಬಹುದು ಎಂಬ ಭೀತಿ ಸದಾ ಕಾಡುತ್ತದೆ. ಫಿಟ್‌ನೆಸ್‌ನ ಈ ಓಟದಲ್ಲಿ ಜನರು ದೈಹಿಕವಾಗಿ ಆಯಾಸಗೊಳ್ಳುವುದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ತೀವ್ರ ಆಯಾಸಗೊಳ್ಳುತ್ತಾರೆ ಎಂದು ಶೈವ್ಯಾ ಅಭಿಪ್ರಾಯಪಟ್ಟಿದ್ದಾರೆ.

6. 35 ಕೆಜಿ ಇಳಿಸಿದ ಮೇಲೆಯೂ ಸಿಗಲಿಲ್ಲ ಪೂರ್ಣ ಸಂತೋಷ

ತೂಕ ಇಳಿಸಿಕೊಂಡ ತಕ್ಷಣ ಜೀವನದ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದು ನಾನು ಭಾವಿಸಿದ್ದೆ. ಆದರೆ, ಪ್ರತಿ ಹಂತದಲ್ಲೂ ಹೊಸ ಸವಾಲುಗಳು ಎದುರಾಗುತ್ತವೆ. 35 ಕೆಜಿ ತೂಕ ಇಳಿಸಿದ ಮೇಲೆಯೂ ನನಗೆ ಪೂರ್ಣ ಸಂತೋಷ ಸಿಗಲಿಲ್ಲ ಎಂದು ಬರೆದುಕೊಂಡಿರುವ ಶೈವ್ಯಾ ಜೈನ್, ಕಾಲರ್‌ಬೋನ್ ಕಾಣಿಸದೆ ಅಳುವುದಕ್ಕಿಂತ, ಕಾಲರ್‌ಬೋನ್ ಸ್ಪಷ್ಟವಾಗಿ ಕಾಣಿಸುತ್ತಾ ಅಳುವುದು ಉತ್ತಮ ಎಂಬ ಮಾತಿನೊಂದಿಗೆ ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ, (ಏಜೆನ್ಸೀಸ್​).