ಮೂಗು ಚುಚ್ಚಿಸಿಕೊಳ್ಳುವಾಗ ನೀವು ಮಾಡುವ ಈ ಒಂದು ಸಣ್ಣ ಮಿಸ್ಟೇಕ್​ ನಿಮ್ಮ ಪ್ರಾಣವನ್ನೇ ಕಸಿಯಬಹುದು ಎಚ್ಚರ! Nose Piercing  
ಆರೋಗ್ಯ

ಮೂಗು ಚುಚ್ಚಿಸಿಕೊಳ್ಳುವಾಗ ನೀವು ಮಾಡುವ ಈ ಒಂದು ಸಣ್ಣ ಮಿಸ್ಟೇಕ್​ ನಿಮ್ಮ ಪ್ರಾಣವನ್ನೇ ಕಸಿಯಬಹುದು ಎಚ್ಚರ! Nose Piercing

ಪ್ರಮುಖ ಮುಖ್ಯಾಂಶಗಳು

  • ಮೂಗು ಚುಚ್ಚಿಸಿಕೊಳ್ಳುವ ಫ್ಯಾಷನ್‌ನಿಂದ ಎದುರಾಗುವ ಶಾಕಿಂಗ್​ ಅಪಾಯಗಳು
  • ಪಿಯರ್ಸ್ ಗನ್ ಬಳಕೆ ಮಾಡುವುದರಿಂದ ಮಾರಕ ಸೋಂಕು ಹರಡುವ ಭೀತಿ
  • ಮುಖದ ಡೇಂಜರ್ ಟ್ರಯಾಂಗಲ್ ಭಾಗದಲ್ಲಿ ಸೋಂಕಿನಿಂದ ಮೆದುಳಿಗೆ ಗಂಭೀರ ಹಾನಿ
  • ಮೂಗು ಚುಚ್ಚಿಸಿದ ಬಳಿಕ ಗಾಯದ ಸರಿಯಾದ ಆರೈಕೆ ಮಾಡುವುದು ಅತ್ಯಂತ ಅಗತ್ಯ
Nose Piercing : ಮೂಗು ಚುಚ್ಚಿಸಿಕೊಳ್ಳುವುದು ನಮ್ಮ ಹಿಂದೂ ಧರ್ಮದ ಒಂದು ಸಂಪ್ರದಾಯ. ಹೆಣ್ಣು ಮಕ್ಕಳು ಬೆಳೆದ ದೊಡ್ಡವರಾಗುತ್ತಿದ್ದಂತೆ ಮೂಗು ಚುಚ್ಚಿಸಿಕೊಳ್ಳುವುದು ಸಾಮಾನ್ಯ. ಆದರೆ, ಕಾಲ ಬದಲಾದಂತೆ ಹೆಣ್ಣು-ಗಂಡು ಅನ್ನೋ ಭೇದವಿಲ್ಲದೇ ಮೂಗು ಚುಚ್ಚಿಸಿಕೊಳ್ಳುವ ಟ್ರೆಂಡ್​ ಕೂಡ​ ಹುಟ್ಟಿಕೊಂಡಿದೆ. ಈ ಹಿಂದೆ ಗಟ್ಟಿಯಾದ ಮುಳ್ಳು ಅಥವಾ ಕೆಲವು ಚೂಪಾದ ಸಾಧನಗಳನ್ನು ಬಳಸಿ ಮೂಗು ಚುಚ್ಚುತ್ತಿದ್ದರು. ಆದರೆ, ಇಂದು ಪಿಯರ್ಸ್​ ಗನ್​ಗಳು ಆ ಸ್ಥಾನವನ್ನು ಆಕ್ರಮಿಸಿಕೊಂಡಿವೆ. ಹಚ್ಚೆ ವಿಚಾರದಲ್ಲೂ ಇದೇ ಪಿಯರ್ಸ್​ ಗನ್​ಗಳು ಹೆಚ್ಚು ಬಳಕೆಯಲ್ಲಿವೆ. ಹೆಚ್ಚು ನೋವಿಲ್ಲದೇ ಸುಲಭವಾಗಿ ಮೂಗು ಚುಚ್ಚಬಹುದು ಹಾಗೂ ಹಚ್ಚೆಯನ್ನು ಸಹ ಹಾಕಬಹುದು. ಆದರೆ, ಇದೇ ಪಿಯರ್ಸ್​ ಗನ್​ಗಳು ಕೆಲವೊಮ್ಮೆ ಪ್ರಾಣಕ್ಕೆ ಹಾನಿಯನ್ನೂ ಉಂಟು ಮಾಡಬಹುದು. ಅದು ಹೇಗೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮೂಗು ಚುಚ್ಚುವಿಕೆ ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಕೇವಲ ಸೌಂದರ್ಯ ಮಾತ್ರವಲ್ಲ ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ, ಇಂದಿನ ಫ್ಯಾಶನ್​ ಲೋಕದಲ್ಲಿ ಮೂಗುತ್ತಿ ಧರಿಸುವುದು ಒಂದು ಸ್ಟೈಲ್​ ಆಗಿ ಬದಲಾಗಿದೆ. ಹೀಗಾಗಿಯೇ ಬಗೆಬಗೆಯ ಮೂಗುತ್ತಿಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ವಿವಿಧ ಡಿಸೈನ್​ಗಳು, ಸೂಕ್ಷ್ಮವಾದ ಸ್ಟಡ್‌ಗಳಿಂದ ಹಿಡಿದು ದಪ್ಪ ಹೂಪ್‌ಗಳವರೆಗೆ ಯುವಕ-ಯುವತಿಯರ ಗಮನ ಸೆಳೆಯುತ್ತಿವೆ. ಇಂದು ಕೇವಲ ತೋರ್ಪಡಿಕೆ ವಸ್ತುವಾಗಿ ಮೂಗುತಿಗಳನ್ನು ಬಳಸಲಾಗುತ್ತಿದೆ. ಆದರೆ, ಈ ತೋರ್ಪಡಿಕೆಯ ಹಿಂದೆ ಅಪಾಯವೂ ಇದೆ. ಈ ಆಧುನಿಕ ಯುಗದಲ್ಲಿ ಮೂಗು ಚುಚ್ಚಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೆ ಪ್ರಾಣವೇ ಹೋಗಬಹುದು.
ಹೌದು, ಪಿಯರ್ಸ್​ ಗನ್‌ಗಳಿಂದ ಮೂಗು ಚುಚ್ಚಿಸಿಕೊಳ್ಳುವುದು ತುಂಬಾನೇ ಸುಲಭ. ವೇಗವಾಗಿ ಮತ್ತು ಭಯವಿಲ್ಲದೆ ಮೂಗು ಮತ್ತು ಕಿವಿಯನ್ನು ಚುಚ್ಚಿಸಿಕೊಳ್ಳಬಹುದು. ಆದರೆ, ಚುಚ್ಚಿಸಿಕೊಳ್ಳುವಾಗ ನಾವು ಮಾಡುವ ಸಣ್ಣ ಎಡವಟ್ಟುಗಳು ಪ್ರಾಣಕ್ಕೆ ಕುತ್ತು ತರಬಹುದು ಎನ್ನುತ್ತಾರೆ ವೃತ್ತಿಪರ ಪಿಯರ್ಸರ್‌ಗಳು ಮತ್ತು ಆರೋಗ್ಯ ತಜ್ಞರು. ಏಕೆಂದರೆ, ಪಿಯರ್ಸ್​ ಗನ್​ಗಳನ್ನು ಮರುಬಳಕೆ ಮಾಡುವಾಗ ಅವುಗಳನ್ನು ಆಟೋಕ್ಲೇವ್‌ನಲ್ಲಿ ಸರಿಯಾಗಿ ಸ್ವಚ್ಛಗೊಳಿಸಲು ಸಾಧ್ಯವಾಗದಿರುವುದರಿಂದ ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಅಥವಾ ಎಚ್‌ಐವಿಯಂತಹ ಸೋಂಕುಗಳು ಹರಡುವ ಅಪಾಯ ಹೆಚ್ಚಿರುತ್ತದೆ. ಅಲ್ಲದೆ, ಗನ್ ಬಳಸಿ ಚುಚ್ಚುವುದರಿಂದ ಅಂಗಾಂಶಕ್ಕೆ ಹೆಚ್ಚಿನ ಹಾನಿಯಾಗಬಹುದು. ಇದರಿಂದ ಗಾಯ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ಸೋಂಕಿನ ಅಪಾಯವೂ ಹೆಚ್ಚಾಗಬಹುದು.
ಮೂಗಿನ ತುದಿಯಲ್ಲಿರುವ ‘ಡೇಂಜರ್ ಟ್ರಯಾಂಗಲ್’ ಎಂದು ಕರೆಯಲಾಗುವ ಭಾಗದಲ್ಲಿ ಸೋಂಕು ಉಂಟಾದರೆ, ಅಪರೂಪದ ಸಂದರ್ಭಗಳಲ್ಲಿ ಅದು ಮೆದುಳಿನ ಭಾಗಕ್ಕೂ ಹರಡುವಂತಹ ಗಂಭೀರ ತೊಂದರೆ ಉಂಟಾಗಬಹುದು. ಆದ್ದರಿಂದ ಮೂಗು ಚುಚ್ಚಿಸುವಾಗ ಯಾವ ಭಾಗದಲ್ಲಿ ಚುಚ್ಚಬೇಕು ಎಂಬುದರ ಬಗ್ಗೆ ಸರಿಯಾದ ಜ್ಞಾನ ಹೊಂದಿರುವ ವೃತ್ತಿಪರರನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯ. ಮೂಗು ಚುಚ್ಚಿಸಿದ ನಂತರ ಗಾಯದ ಸರಿಯಾದ ಆರೈಕೆಯೂ ಅಷ್ಟೇ ಅಗತ್ಯ.
ಮೊದಲನೆಯದಾಗಿ, ಗಾಯವನ್ನು ಸ್ವಚ್ಛವಾಗಿಡಲು ಸೂಕ್ತವಾದ ಉಪ್ಪುನೀರಿನ ಅಥವಾ ಸಲೈನ್ ದ್ರಾವಣವನ್ನು ಬಳಸಬಹುದು. ಕೈಗಳನ್ನು ಸ್ವಚ್ಛವಾಗಿ ತೊಳೆಯದೆ ಮೂಗು ಅಥವಾ ಗಾಯವನ್ನು ಎಂದಿಗೂ ಮುಟ್ಟಬಾರದು. ಕೈಗಳಲ್ಲಿರುವ ಬ್ಯಾಕ್ಟೀರಿಯಾಗಳು ಸೋಂಕಿಗೆ ಕಾರಣವಾಗಬಹುದು. ಗಾಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಲೋಷನ್‌ಗಳು ಅಥವಾ ಆ್ಯಂಟಿಸೆಪ್ಟಿಕ್ ಕ್ರೀಮ್‌ಗಳನ್ನು ಬಳಸುವುದನ್ನೂ ತಪ್ಪಿಸಬೇಕು.
ಆಭರಣದ ಗುಣಮಟ್ಟಕ್ಕೂ ವಿಶೇಷ ಗಮನ ನೀಡಬೇಕು. ಉತ್ತಮ ಗುಣಮಟ್ಟದ ಲೋಹಗಳಿಂದ ತಯಾರಾದ ಆಭರಣವನ್ನು ಬಳಸುವುದು ಸೂಕ್ತ. ನಕಲಿ ಆಭರಣಗಳಿಂದ ಅಲರ್ಜಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ತೀವ್ರ ಊತ, ಕಿರಿಕಿರಿ ಮತ್ತು ಸೋಂಕು ಉಂಟಾಗಬಹುದು. ಆಭರಣ ತುಂಬಾ ಭಾರವಾಗಿದ್ದರೆ ಅಥವಾ ಗಾತ್ರದಲ್ಲಿ ದೊಡ್ಡದಾಗಿದ್ದರೆ ಮೂಗಿನ ಕಾರ್ಟಿಲೇಜ್‌ಗೆ ಹಾನಿಯಾಗಬಹುದು. ಮೂಗಿನೊಳಗೆ ಚುಚ್ಚುವ ತುದಿ ಹೊಂದಿರುವ ಆಭರಣಗಳು ಅಂಗಾಂಶಕ್ಕೆ ಹಾನಿ ಮಾಡಬಹುದು ಅಥವಾ ಒಳಗೆ ಸಿಲುಕಿಕೊಳ್ಳಬಹುದು. ಇಂತಹ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಬಹುದು. ಹೀಗಾಗಿ, ಮೂಗು ಚುಚ್ಚಿಸಿಕೊಳ್ಳುವ ಮುನ್ನ ಒಮ್ಮ ಯೋಚನೆ ಮಾಡಿ ವೃತ್ತಿಪರರನ್ನು ಆಯ್ಕೆ ಮಾಡುವುದು ತುಂಬಾನೇ ಒಳ್ಳೆಯದು, (ಏಜೆನ್ಸೀಸ್​).