ಎಲ್​ ನಿನೊ ಎಫೆಕ್ಟ್: ಎಚ್ಚರ ಭಾರತದಲ್ಲಿ ಹೆಚ್ಚುತ್ತಿದೆ ಡೆಂಘೆ, ಮಲೇರಿಯಾ, ತಾಪಮಾನ ಸಂಬಂಧಿತ ಕಾಯಿಲೆಗಳು! El Nino Effect  
ಆರೋಗ್ಯ

ಎಲ್​ ನಿನೊ ಎಫೆಕ್ಟ್: ಎಚ್ಚರ ಭಾರತದಲ್ಲಿ ಹೆಚ್ಚುತ್ತಿದೆ ಡೆಂಘೆ, ಮಲೇರಿಯಾ, ತಾಪಮಾನ ಸಂಬಂಧಿತ ಕಾಯಿಲೆಗಳು! El Nino Effect

ಪ್ರಮುಖ ಮುಖ್ಯಾಂಶಗಳು

  • ಎಲ್ ನಿನೊ ಪರಿಣಾಮದಿಂದ ಭಾರತದಲ್ಲಿ ಹೆಚ್ಚುತ್ತಿರುವ ಆರೋಗ್ಯ ಆತಂಕ
  • ಡೆಂಘೆ ಹಾಗೂ ಮಲೇರಿಯಾ ಸೋಂಕುಗಳ ಏರಿಕೆಗೆ ಕಾರಣವಾಗುತ್ತಿರುವ ಹವಾಮಾನ ವೈಪರೀತ್ಯ
  • ಅತಿಹೆಚ್ಚು ತಾಪಮಾನದಿಂದ ತಲೆದೋರುತ್ತಿರುವ ಹೀಟ್ ಎಕ್ಸಾಸ್ಶನ್ ಮತ್ತು ಹೀಟ್‌ಸ್ಟ್ರೋಕ್ ಅಪಾಯ
  • ದೆಹಲಿಯಲ್ಲಿ ಗಣನೀಯವಾಗಿ ಹೆಚ್ಚಾದ ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳ ಸಂಖ್ಯೆ
El Nino Effect : ನಿಮಗೆಲ್ಲ ಗೊತ್ತಿರುವ ಹಾಗೇ ಇದು ಮಳೆಗಾಲ. ಮಳೆಯಿಂದ ಭೂಮಿ ತಂಪಾಗಬೇಕಿರುವ ಈ ಸಮಯದಲ್ಲಿ ಬಿಸಿಲು ಒಂದೇ ಸಮನೆ ಸುಡುತ್ತಿದೆ. ಒಂದೆಡೆ ಬೇಸಿಗೆಯ ಬಿಸಿಲಾದರೆ, ಮತ್ತೊಂದೆಡೆ ಮಳೆ ಬಂದ್ರೆ ಸಾಕು ಅಂತಾ ಆಸೆಗಣ್ಣಿನಿಂದ ಎದುರು ನೋಡುತ್ತಿರುವ ರೈತರು. ಇದೆಲ್ಲದರ ನಡುವೆ ಹವಾಮಾನದ ಈ ಏರುಪೇರು ಕೇವಲ ವಾತಾವರಣವನ್ನಷ್ಟೇ ಬದಲಿಸುತ್ತಿಲ್ಲ, ನಮ್ಮ ಆರೋಗ್ಯಕ್ಕೂ ಅಪಾಯದ ಮುನ್ಸೂಚನೆ ನೀಡುತ್ತಿದೆ.
ಹೌದು, ಎಲ್ ನಿನೊ ಪರಿಣಾಮದಿಂದ ಡೆಂಘೆ, ಮಲೇರಿಯಾದಂತಹ ಸೊಳ್ಳೆಗಳಿಂದ ಬರುವ ಕಾಯಿಲೆಗಳ ಜೊತೆಗೆ ಹೀಟ್ ಎಕ್ಸಾಸ್ಶನ್ ಮತ್ತು ಹೀಟ್‌ಸ್ಟ್ರೋಕ್‌ನಂತಹ ಶಾಖ ಸಂಬಂಧಿತ ಸಮಸ್ಯೆಗಳ ಅಪಾಯವೂ ಹೆಚ್ಚಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಎಲ್ ನಿನೊ ಎನ್ನುವುದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರದ ಮೇಲ್ಮೈ ನೀರಿನ ತಾಪಮಾನ ಹೆಚ್ಚಳದಿಂದ ಉಂಟಾಗುವ ಹವಾಮಾನ ವಿದ್ಯಮಾನ. ಇದರ ಪರಿಣಾಮವಾಗಿ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ, ಒಣಹವಾಮಾನ ಹಾಗೂ ಅಸ್ಥಿರ ಮಳೆಯಂತಹ ಪರಿಸ್ಥಿತಿಗಳು ಕಾಣಿಸಿಕೊಳ್ಳಬಹುದು.
ಹೆಚ್ಚಿನ ತಾಪಮಾನವು ಏಡಿಸ್ ಈಜಿಪ್ಟಿ ಸೊಳ್ಳೆಯಲ್ಲಿ ಡೆಂಘೆ ವೈರಸ್ ಬೆಳವಣಿಗೆಯ ವೇಗವನ್ನು ಹೆಚ್ಚಿಸಬಹುದು. ಮಳೆಯ ನಂತರ ನಿಂತ ನೀರು ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರವಾಗುವುದರಿಂದ ಡೆಂಘೆ, ಮಲೇರಿಯಾ ಸೇರಿದಂತೆ ಸೊಳ್ಳೆಜನ್ಯ ಕಾಯಿಲೆಗಳ ಅಪಾಯ ಹೆಚ್ಚಬಹುದು. ದೀರ್ಘಕಾಲದ ಬಿಸಿಲಿನಿಂದ ನಿರ್ಜಲೀಕರಣ, ಹೀಟ್ ಎಕ್ಸಾಸ್ಶನ್ ಮತ್ತು ಹೀಟ್‌ಸ್ಟ್ರೋಕ್ ಉಂಟಾಗುವ ಸಾಧ್ಯತೆಯೂ ಇದೆ.
ದೆಹಲಿಯಲ್ಲಿ ಆಗಸ್ಟ್ ಅಂತ್ಯದ ವೇಳೆಗೆ 311 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಆಗಸ್ಟ್ ಒಂದೇ ತಿಂಗಳಲ್ಲಿ 90 ಪ್ರಕರಣಗಳು ವರದಿಯಾಗಿವೆ. ಮಲೇರಿಯಾ ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದ್ದು, ಜುಲೈನಲ್ಲಿ 17 ಇದ್ದ ಪ್ರಕರಣಗಳು ಆಗಸ್ಟ್‌ನಲ್ಲಿ 53ಕ್ಕೆ ಏರಿವೆ.
ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಸೊಳ್ಳೆ ನಿಯಂತ್ರಣಕ್ಕೆ ಪ್ರಮುಖ ಕ್ರಮವಾಗಿದೆ. ನೀರಿನ ಪಾತ್ರೆಗಳು, ಕೂಲರ್ ಟ್ರೇ ಹಾಗೂ ಹೂವಿನ ಕುಂಡಗಳಲ್ಲಿ ನೀರು ಸಂಗ್ರಹವಾಗದಂತೆ ಸ್ವಚ್ಛಗೊಳಿಸಬೇಕು. ಬಿಸಿಲಿನ ಸಮಯದಲ್ಲಿ ಹೊರಗಿರುವುದನ್ನು ತಪ್ಪಿಸಿ, ಸಾಕಷ್ಟು ನೀರು ಮತ್ತು ಆರೋಗ್ಯಕರವಾದ ದ್ರವ ಪದಾರ್ಥಗಳನ್ನು ಸೇವಿಸುವುದು ಅಗತ್ಯ.
ತೀವ್ರ ಜ್ವರ, ದೇಹದ ನೋವು, ತಲೆತಿರುಗುವಿಕೆ, ಅತಿಯಾದ ಬೆವರು ಅಥವಾ ಗೊಂದಲದಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.

ಏನಿದು ಎಲ್ ನಿನೊ? ಮತ್ತು ಏಕಿಷ್ಟು ಆತಂಕ?

ಎಲ್ ನಿನೊ (El Niño) ಎಂಬುದು ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಉಷ್ಣವಲಯದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವುದರಿಂದ ಉಂಟಾಗುವ ಒಂದು ನೈಸರ್ಗಿಕ ಹವಾಮಾನ ವಿದ್ಯಮಾನವಾಗಿದೆ. 'ಎಲ್ ನಿನೊ ಸದರ್ನ್ ಆಸಿಲೇಶನ್' (ENSO) ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಇದು, ಸಾಮಾನ್ಯವಾಗಿ ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಅವಧಿಯಲ್ಲಿ ಜಾಗತಿಕ ವಾಣಿಜ್ಯ ಮಾರುತಗಳು (Trade winds) ದುರ್ಬಲಗೊಳ್ಳುವುದರಿಂದ, ಸಾಗರದ ಆಳದಲ್ಲಿನ ಬೆಚ್ಚಗಿನ ನೀರು ಪೂರ್ವದ ಕಡೆಗೆ ಚಲಿಸಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಸಾಗರದ ಅಗಾಧ ಶಾಖವು ವಾತಾವರಣಕ್ಕೆ ವರ್ಗಾವಣೆಗೊಂಡು, ಪೆಸಿಫಿಕ್ ಮಹಾಸಾಗರದ ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 2 ಡಿಗ್ರಿ ಸೆಲ್ಸಿಯಸ್​ನಷ್ಟು ಹೆಚ್ಚಾಗುವಂತೆ ಮಾಡುತ್ತದೆ.

ಎಲ್​ ನಿನೊ ಹೆಸರು ಬಂದಿದ್ದು ಹೇಗೆ?

'ಎಲ್ ನಿನೊ' ಎಂಬುದು ಸ್ಪ್ಯಾನಿಷ್ ಭಾಷೆಯ ಪದವಾಗಿದ್ದು, ಇದರ ಅರ್ಥ "ಚಿಕ್ಕ ಹುಡುಗ" ಅಥವಾ "ಬಾಲ ಯೇಸು" ಎಂದಾಗುತ್ತದೆ. ದಕ್ಷಿಣ ಅಮೆರಿಕಾದ ಪೆಸಿಫಿಕ್ ಕರಾವಳಿಯಲ್ಲಿರುವ ಪೆರು ಮತ್ತು ಈಕ್ವೆಡಾರ್ ದೇಶದ ಮೀನುಗಾರರು 1600ರ ದಶಕದಲ್ಲೇ ಈ ವಿದ್ಯಮಾನವನ್ನು ಮೊದಲ ಬಾರಿಗೆ ಗುರುತಿಸಿದ್ದರು. ಸಾಗರದ ನೀರು ಅಸಹಜವಾಗಿ ಬಿಸಿಯಾಗುವ ಈ ಪ್ರಕ್ರಿಯೆಯು ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ, ಅಂದರೆ ಕ್ರಿಸ್‌ಮಸ್ ಹಬ್ಬದ ಆಸುಪಾಸಿನಲ್ಲಿ ಗರಿಷ್ಠ ಮಟ್ಟ ತಲುಪುತ್ತಿತ್ತು. ಕ್ರಿಸ್‌ಮಸ್ ಜೀಸಸ್ ಕ್ರೈಸ್ಟ್‌ ಅವರ ಜನ್ಮದಿನವಾಗಿರುವುದರಿಂದ, ಅಲ್ಲಿನ ಸ್ಥಳೀಯ ಮೀನುಗಾರರು ಸಾಗರದಲ್ಲಿ ಕಂಡುಬರುತ್ತಿದ್ದ ಈ ವಿಶಿಷ್ಟ ಬದಲಾವಣೆಗೆ ಯೇಸುಕ್ರಿಸ್ತನ ಸ್ಮರಣಾರ್ಥವಾಗಿ 'ಎಲ್ ನಿನೊ' (ಬಾಲ ಯೇಸು) ಎಂದು ಹೆಸರಿಟ್ಟರು, (ಏಜೆನ್ಸೀಸ್​).