ಪ್ರತಿದಿನ ಒಂದು ಹಿಡಿ ಕುಂಬಳಕಾಯಿ ಬೀಜ ತಿಂದ್ರೆ ದೇಹಕ್ಕೆ ಏನೆಲ್ಲ ಲಾಭ? ಇಲ್ಲಿದೆ ಉಪಯುಕ್ತ ಮಾಹಿತಿ | Pumpkin Seeds  
ಆರೋಗ್ಯ

ಪ್ರತಿದಿನ ಒಂದು ಹಿಡಿ ಕುಂಬಳಕಾಯಿ ಬೀಜ ತಿಂದ್ರೆ ದೇಹಕ್ಕೆ ಏನೆಲ್ಲ ಲಾಭ? ಇಲ್ಲಿದೆ ಉಪಯುಕ್ತ ಮಾಹಿತಿ | Pumpkin Seeds

Pumpkin Seeds: ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇಂದಿನ ದೊಡ್ಡ ಸವಾಲಾಗಿದೆ. ಕಾರಣ, ಬದುಕಿನ ಶೈಲಿ, ಸೇವಿಸುತ್ತಿರುವ ಕಲುಷಿತ ಆಹಾರ, ಅಲ್ಪ ಅವಧಿಯ ನಿದ್ರೆ ಮತ್ತು ವ್ಯಾಯಾಮವೇ ಇಲ್ಲದ ದಿನಚರಿ ನಮ್ಮ ದೇಹವನ್ನು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವೇ ಇಲ್ಲ ಎನ್ನುವಂತೆ ಮಾಡಿಟ್ಟಿದೆ. ಹಲವಾರು ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಂದಿ, ತಾವೇನು ಸೇವನೆ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ತಿಳಿಯದೆ ಇರುವುದು ಬೇಸರದ ಸಂಗತಿ. ಇಲ್ಲೇ ಅನೇಕರು ಮಾಡುತ್ತಿರುವುದು ಬಿಗ್ ಮಿಸ್ಟೇಕ್​.

ದೇಹವನ್ನು ಆರೋಗ್ಯಕರವಾಗಿ ಮತ್ತು ಸಕ್ರಿಯವಾಗಿರಿಸಲು, ನಿಮ್ಮ ದೈನಂದಿನ ಆಹಾರದಲ್ಲಿ ಪೋಷಕಾಂಶಗಳನ್ನು ಒಳಗೊಂಡಿರುವ ಆಹಾರವನ್ನು ಸೇರಿಸುವುದು ಅತ್ಯವಶ್ಯಕ. ಎಣ್ಣೆಯಲ್ಲಿ ಕರಿದ ಕುರುಕಲು ತಿಂಡಿಗಳು, ಬೇಕರಿಯ ಸಿಹಿ ತಿನಿಸುಗಳು ಸೇರಿದಂತೆ ಹಲವು ಆರೋಗ್ಯ ಕೆಡಿಸುವ ಪದಾರ್ಥಗಳನ್ನು ಆಗಾಗ್ಗೆ ತಿನ್ನುವ ಅಭ್ಯಾಸವನ್ನು ಆದಷ್ಟು ಕಡಿತಗೊಳಿಸಿ. ಇದರ ಬದಲಿಗೆ, ತರಕಾರಿ, ಹಣ್ಣುಗಳು ಮತ್ತು ಸೂರ್ಯಕಾಂತಿ, ಕುಂಬಳಕಾಯಿ ಬೀಜಗಳನ್ನು ಸೇವಿಸಲು ಶುರು ಮಾಡಿ. ಯಾಕೆಂದರೆ, ನೋಡಲು ಸಣ್ಣ ಗಾತ್ರದಲ್ಲಿ ಈ ಬೀಜಗಳು ಪೋಷಕಾಂಶಗಳಿಂದ ಹೇರಳವಾಗಿವೆ. ಇವುಗಳಲ್ಲಿ ಪ್ರಮುಖವಾದದ್ದು ಕುಂಬಳಕಾಯಿ ಬೀಜ.

ಕುಂಬಳಕಾಯಿ ಬೀಜಗಳು ಪ್ರೋಟೀನ್, ಫೈಬರ್, ಮೆಗ್ನೀಸಿಯಮ್, ಸತು ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿವೆ. ಇವುಗಳನ್ನು ಲಘು ಆಹಾರವಾಗಿ ಸೇವಿಸಬಹುದು ಅಥವಾ ಸಲಾಡ್‌ಗಳನ್ನು ಒಳಗೊಂಡಂತೆ ಊಟದಲ್ಲಿ ಸೇರಿಸಿಕೊಳ್ಳಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, 30 ದಿನಗಳವರೆಗೆ ಪ್ರತಿದಿನ ಒಂದು ಹಿಡಿ ಕುಂಬಳಕಾಯಿ ಬೀಜಗಳನ್ನು ಸೇವಿಸುತ್ತಾ ಬಂದರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಸಿಗಲಿದೆ ಎಂಬುದರ ವಿವರವಾದ ಉತ್ತರ ಇಲ್ಲಿದೆ ನೋಡಿ.

6 ಮುಖ್ಯ ಪ್ರಯೋಜನಗಳು

1. ಹೃದಯ ಮತ್ತು ಸ್ನಾಯು

ಕುಂಬಳಕಾಯಿ ಬೀಜಗಳು ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾದ್ದು, ಇವು ಹೃದಯ ಮತ್ತು ಸ್ನಾಯುಗಳ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತವೆ. ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಉತ್ತಮ ತಿನಿಸು.

2. ರೋಗನಿರೋಧಕ ಶಕ್ತಿ ಹೆಚ್ಚಳ

ಕುಂಬಳಕಾಯಿ ಬೀಜಗಳಲ್ಲಿರುವ ಸತುವು ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ. ಇದು ಗಾಯಗಳು ವೇಗವಾಗಿ ಗುಣವಾಗಲು ಸಹ ಸಹಾಯ ಮಾಡುತ್ತದೆ. ಕುಂಬಳಕಾಯಿ ಬೀಜಗಳನ್ನು ಪ್ರತಿದಿನ ತಿನ್ನುವುದರಿಂದ ಸೋಂಕಿನಿಂದ ರಕ್ಷಿಸಲು ಸಹಕಾರಿ.

3. ತೂಕ ನಷ್ಟಕ್ಕೆ ಉತ್ತಮ

ಕುಂಬಳಕಾಯಿ ಬೀಜಗಳು ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಹೇರಳವಾಗಿವೆ. ಇದು ನಿಮಗೆ ಹೆಚ್ಚು ಕಾಲ ಪೂರ್ಣವಾಗಿರಲು ಸಹಾಯ ಮಾಡುತ್ತದೆ. ತಿಂಡಿಗಳನ್ನು ತಿನ್ನದೇ ಹೋದರೂ ದೀರ್ಘಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ನಿಮ್ಮ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ, ಇದರಲ್ಲಿ ಹೆಚ್ಚಿನ ಕ್ಯಾಲೋರಿಗಳು ಇರುವುದರಿಂದ ಈ ಬೀಜಗಳನ್ನು ಮಿತವಾಗಿ ತಿನ್ನುವುದು ಒಳಿತು.

4. ಪುರುಷ ಫಲವತ್ತತೆಯ ಆರೋಗ್ಯಕ್ಕೆ ಸಹಕಾರಿ

ಕುಂಬಳಕಾಯಿ ಬೀಜಗಳಲ್ಲಿರುವ ಸತುವು ಪುರುಷರ ವೀರ್ಯದ ಬೆಳವಣಿಗೆ ಮತ್ತು ಗುಣಮಟ್ಟಕ್ಕೆ ಸಹಕಾರಿ. ಆದ್ದರಿಂದ, ಪುರುಷರ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದು ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಕೆಲವು ಅಧ್ಯಯನಗಳು ತೋರಿಸಿವೆ.

5. ಸ್ತನ ಕ್ಯಾನ್ಸರ್ ಅಪಾಯ ನಿಯಂತ್ರಣ

ಕುಂಬಳಕಾಯಿ ಬೀಜಗಳು ಫೈಟೊಈಸ್ಟ್ರೊಜೆನ್ಗಳನ್ನು ಹೊಂದಿರುತ್ತವೆ. ಇದು ಹಾರ್ಮೋನ್ ಈಸ್ಟ್ರೊಜೆನ್ ಅನ್ನು ಅನುಕರಿಸುವ ಸಸ್ಯ ಸಂಯುಕ್ತಗಳಾಗಿವೆ. ಇವುಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ.

6. ಉತ್ತಮ ನಿದ್ರೆಗೆ ಬೆಸ್ಟ್​ ಮೆಡಿಸನ್​

ಕುಂಬಳಕಾಯಿ ಬೀಜಗಳಲ್ಲಿರುವ ಅಮೈನೋ ಆ್ಯಸಿಡ್ ಟ್ರಿಪ್ಟೊಫಾನ್ ನಿದ್ರೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೆಲಟೋನಿನ್ ಮತ್ತು ಸಿರೊಟೋನಿನ್ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಉತ್ತಮ ನಿದ್ರೆ ಪಡೆಯಲು ಸಹಕಾರಿ. ನಿಮ್ಮ ದೈನಂದಿನ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿದ್ದರೂ, ಸರಿಯಾದ ವೈದ್ಯಕೀಯ ಸಲಹೆಯೊಂದಿಗೆ ಮಿತವಾಗಿ ಸೇವಿಸುವುದು ಅತೀ ಮುಖ್ಯ,(ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.