ಕೃತಕ ಬುದ್ಧಿಮತ್ತೆ ಸಹಾಯದಿಂದ ಸೃಷ್ಟಿಸಿದ ಚಿತ್ರ 
ಆರೋಗ್ಯ

ಒಂದೇ ಬದಿಯ ಮೂಗು ಕಟ್ಟಿದೆ ಎಂದು ನಿರ್ಲಕ್ಷಿಸಬೇಡಿ!: ಜೀವಕ್ಕೆ ಕಂಟಕವಾಗಬಹುದು ಎಚ್ಚರ..! Nasal Cancer

ಒಂದೇ ಬದಿಯ ಮೂಗು ಕಟ್ಟುವಿಕೆ ಮತ್ತು ರಕ್ತಸ್ರಾವವನ್ನು ನಿರ್ಲಕ್ಷಿಸಬೇಡಿ. ಬೆಂಗಳೂರಿನ ವೃದ್ಧನಿಗೆ ಅಪರೂಪದ ಸೈನೋನಾಸಲ್ ಕ್ಯಾನ್ಸರ್ ಪತ್ತೆ; ಸಕಾಲಿಕ ತಪಾಸಣೆಯ ಮಹತ್ವದ ಬಗ್ಗೆ ವೈದ್ಯರ ಎಚ್ಚರಿಕೆ.

ಬೆಂಗಳೂರು: ಒಂದೇ ಬದಿಯ ಮೂಗು ಕಟ್ಟಿದೆ ಎಂದ ತಕ್ಷಣ ನಾವು ಸಾಮಾನ್ಯವಾಗಿ ಶೀತ ಅಥವಾ ಸೈನಸ್‌ ಸಮಸ್ಯೆ ಇದ್ದಿರಬಹುದು ಎಂದು ನಿರ್ಲಕ್ಷ್ಯ ಮಾಡಿ ಬಿಡುತ್ತೇವೆ. ಆದರೆ, ಬೆಂಗಳೂರಿನ 70 ವರ್ಷದ ವೃದ್ಧರೊಬ್ಬರ ವಿಷಯದಲ್ಲಿ, ಈ ಸಣ್ಣ ಕಿರಿಕಿರಿ ಮತ್ತು ಆಗೊಮ್ಮೆ ಈಗೊಮ್ಮೆ ಆಗುತ್ತಿದ್ದ ರಕ್ತಸ್ರಾವ ಒಂದು ಅಪರೂಪದ ಮತ್ತು ಮಾರಣಾಂತಿಕ ಕ್ಯಾನ್ಸರ್ ಆಗಿ ಪರಿಣಮಿಸಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.

ಈ ಅಪರೂಪದ ಪ್ರಕರಣದ ಕುರಿತಂತೆ ಮಾಹಿತಿ ನೀಡಿರುವ ವಾಸವಿ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ತಜ್ಞರಾದ ಡಾ. ಯಶಸ್ವಿ ಶ್ರೀಕಾಕುಲ ಮೂಗಿನ ಒಂದು ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಿರ್ಲಕ್ಷಿಸುವುದು ಪ್ರಾಣಕ್ಕೆ ಸಂಚಕಾರ ತರಬಹುದು. ಈ ರೋಗಿಗೆ ಮೂಗಿನ ಒಂದು ಬದಿ ಕಟ್ಟುವಿಕೆ ಮತ್ತು ರಕ್ತಸ್ರಾವದ ಸಮಸ್ಯೆ ಇತ್ತು. ಮೂಗಿನ ಸಮಸ್ಯೆಗಳು ಸಾಮಾನ್ಯವಾದರೂ, ಅದು ಕೇವಲ ಒಂದು ಬದಿಗೆ ಸೀಮಿತವಾಗಿದ್ದರಿಂದ ನಮಗೆ ಅನುಮಾನ ಉಂಟಾಯಿತು.

ತಪಾಸಣೆ ನಡೆಸಿದಾಗ ಮೂಗಿನೊಳಗೆ ದೊಡ್ಡ ಗಡ್ಡೆಯೊಂದು ಬೆಳದಿರುವುದು ಪತ್ತೆಯಾಯಿತು. ರೋಗಿಯ ವಯಸ್ಸು ಮತ್ತು ಗಡ್ಡೆಯ ತೀವ್ರತೆಯನ್ನು ಪರಿಗಣಿಸಿ, ನಾವು 'ಫಂಕ್ಷನಲ್ ಎಂಡೋಸ್ಕೋಪಿಕ್ ಸೈನಸ್ ಸರ್ಜರಿ' (FESS) ಮೂಲಕ ಅದನ್ನು ಯಶಸ್ವಿಯಾಗಿ ಹೊರಗೆ ತೆಗೆದೆವು ಎಂದಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಗಡ್ಡೆಯ ಮಾದರಿಯನ್ನು ಪರೀಕ್ಷಿಸಿದಾಗ ಬೆಚ್ಚಿಬೀಳಿಸುವ ಸಂಗತಿ ತಿಳಿದು ಬಂದಿತು. ಆ ಗಡ್ಡೆಯು ಸ್ಕ್ವಾಮಸ್ ಸೆಲ್ ಕಾರ್ಸಿನೋಮ (SCC) ಎಂಬ ಅಪರೂಪದ ಕ್ಯಾನ್ಸರ್ ಎಂದು ದೃಢಪಟ್ಟಿತು.

ಸಾಮಾನ್ಯವಾಗಿ ಗಂಟಲು ಅಥವಾ ಶ್ವಾಸಕೋಶದಲ್ಲಿ ಕಂಡುಬರುವ ಈ ಕ್ಯಾನ್ಸರ್, ಮೂಗಿನೊಳಗೆ ಕಾಣಿಸಿಕೊಳ್ಳುವುದು ಬಹಳ ವಿರಳ. ಅಂಕಿಅಂಶಗಳ ಪ್ರಕಾರ, ಒಟ್ಟು ಕ್ಯಾನ್ಸರ್ ಪ್ರಕರಣಗಳಲ್ಲಿ ಮೂಗು ಮತ್ತು ಸೈನಸ್ಗೆ ಸಂಬಂಧಿಸಿದ ಕ್ಯಾನ್ಸರ್ ಶೇ. 1ಕ್ಕಿಂತ ಕಡಿಮೆ ಇರುತ್ತದೆ. ಮೂಗಿನ ಒಳಗಿನ ಖಾಲಿ ಜಾಗದಲ್ಲಿ ಈ ಗೆಡ್ಡೆಗಳು ಯಾವುದೇ ನೋವಿಲ್ಲದೆ ಬೆಳೆಯುತ್ತವೆ. ಹೀಗಾಗಿ ಜನರು ಇದನ್ನು ಕೇವಲ ಮೂಗಿನ ಗೆಡ್ಡೆ ಅಥವಾ ಸೈನಸ್ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಇಂಥಹ ನಿರ್ಲಕ್ಷ್ಯವೇ ಜೀವಕ್ಕೆ ಕಂಟಕವಾಗಿ ಬಿಡುವ ಸಾಧ್ಯತೆ ಇರುತ್ತದೆ.

ಚಿಕಿತ್ಸೆ ಮತ್ತು ಎಚ್ಚರಿಕೆ

ಶಸ್ತ್ರಚಿಕಿತ್ಸೆಯ ಮೂಲಕ ಗೆಡ್ಡೆಯನ್ನು ತೆಗೆದುಹಾಕಿದರೂ, ಈ ಕ್ಯಾನ್ಸರ್ ಅತ್ಯಂತ ವೇಗವಾಗಿ ಹರಡುವ ಗುಣ ಹೊಂದಿರುವುದರಿಂದ ರೋಗಿಗೆ ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆಯನ್ನು ನೀಡಲಾಗಿದೆ. ಶಸ್ತ್ರಚಿಕಿತ್ಸೆ ನಂತರ ರೋಗವು ಮರುಕಳಿಸದಂತೆ ತಡೆಯಲು ಈ ಚಿಕಿತ್ಸೆಗಳು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಸಲಹೆ:

  • ಮೂಗಿನ ಒಂದು ಭಾಗದಲ್ಲಿ ಮಾತ್ರ ದೀರ್ಘಕಾಲದವರೆಗೆ ಕಟ್ಟುವಿಕೆ ಇದ್ದರೆ ನಿರ್ಲಕ್ಷಿಸಬೇಡಿ.

  • ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಿ.

  • ಸ್ವಯಂ ಚಿಕಿತ್ಸೆ ಅಥವಾ ಕೇವಲ 'ನೋಸ್ ಡ್ರಾಪ್ಸ್' ಬಳಸುವುದರಿಂದ ಅಪಾಯ ಹೆಚ್ಚಾಗಬಹುದು.

  • ಸಕಾಲದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ನಿಮ್ಮ ಪ್ರಾಣವನ್ನು ಉಳಿಸಬಹುದು.