ಒಬ್ಬ ಮಹಿಳೆ ಗರ್ಭಿಣಿ ಆಗಿದ್ದಾರೆ ಎಂಬ ವಿಚಾರ ತಿಳಿದ ದಿನದಿಂದ ಮಗು ಜನಿಸುವವರೆಗೂ ಅವರ ಆಹಾರಕ್ರಮವನ್ನು ನೋಡಿಕೊಳ್ಳಲು ಸಲಹೆ ನೀಡಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಆಹಾರವು ತುಂಬಾ ಮುಖ್ಯವಾಗಿದೆ. ಆ ಆಹಾರವು ಮಗುವಿನ ಬೆಳವಣಿಗೆಗೆ ಪೂರಕವಾಗಿರುತ್ತದೆ. ತಾಯಿ ಏನನ್ನು ತಿಂದರೂ ಅದರ ಎಲ್ಲಾ ಪೋಷಣೆಯು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ದೊರೆಯುತ್ತದೆ. ಇದೇ ಕಾರಣಕ್ಕಾಗಿಯೇ ಗರ್ಭಿಣಿಯರು ಸೂಪರ್‌ಫುಡ್ ತಿನ್ನಬೇಕು ಎಂದು ಹೇಳಲಾಗುತ್ತದೆ.
ಹಾಗಾದ್ರೆ ಗರ್ಭಿಣಿ ಮಹಿಳೆಯರು ಸೇವಿಸಬೇಕಾದ ಆ ಸೂಪರ್ಫುಡ್ಗಳ ಮಾಹಿತಿ ಇಲ್ಲಿ ತಿಳಿಸಿಲಾಗಿದೆ.
- ಗರ್ಭಿಣಿಯರು ಪ್ರತಿದಿನ ಎಳನೀರನ್ನು ಕುಡಿಯಬೇಕು. ಇದು ದೇಹವನ್ನು ತಂಪಾಗಿ ಇಡುವುದರ ಜತೆಗೆ ಉತ್ತಮ ಆರೋಗ್ಯವನ್ನು ಹೊಂದುವ ಮಾರ್ಗವಾಗಿದೆ.
- ನಿಮ್ಮ ಆಹಾರದಲ್ಲಿ ಪಾಲಕ್ ಅನ್ನು ಸೇರಿಸಿಕೊಳ್ಳಬೇಕು. ಪಾಲಕ್ ಸೊಪ್ಪು ತಾಯಿ ಮತ್ತು ಮಗುವಿಗೆ ಅಗತ್ಯವಾದ ಕಬ್ಬಿಣಾಂಶವನ್ನು ಹೊಂದಿರುತ್ತದೆ. ಮಗುವಿನ ಬೆಳವಣಿಗೆಯಲ್ಲಿ ಕಬ್ಬಿಣಾಂಶವು ಪ್ರಮುಖ ಪಾತ್ರ ವಹಿಸುತ್ತದೆ.
- ಗರ್ಭಾವಸ್ಥೆಯಲ್ಲಿ ಪ್ರತಿದಿನ ಬೆಟ್ಟದ ನೆಲ್ಲಿಕಾಯಿ ತಿನ್ನಬೇಕು. ಬೆಟ್ಟದ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವೈಟ್ ಡಿಶ್ಚಾರ್ಜ್ನಿಂದ ಬಳಲುತ್ತಿರುವ ಮಹಿಳೆಯರು ಬೆಟ್ಟದ ನೆಲ್ಲಿಕಾಯಿ ತಿನ್ನವುದರಿಂದ ಪ್ರಯೋಜನ ಪಡೆಯಬಹುದು.
- ಗರ್ಭಾವಸ್ಥೆಯಲ್ಲಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳುತ್ತಾರೆ. ಹಣ್ಣುಗಳು ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ಪೂರೈಸುತ್ತವೆ. ವಿಟಮಿನ್ ಸಿ ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಿತ್ತಳೆ, ಸ್ಟ್ರಾಬೆರಿ, ಬ್ರೊಕೊಲಿ ಮಿಸ್ ಮಾಡದೇ ಸೇವಿಸಿ.
- ಸೇಬು ಮತ್ತು ದಾಳಿಂಬೆಯನ್ನು ತಿನ್ನಬೇಕು. ಈ ಎರಡು ಹಣ್ಣುಗಳು ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಮತ್ತು ಗರ್ಭಾವಸ್ಥೆಯಲ್ಲಿ ರಕ್ತಹೀನತೆಯನ್ನು ತಡೆಯಲು ಕೆಲಸ ಮಾಡುತ್ತದೆ. ದಾಳಿಂಬೆ ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುತ್ತದೆ.
- ಬೀಟ್ರೂಟ್ ಗರ್ಭಿಣಿಯರಿಗೆ ಮಾತ್ರವಲ್ಲದೆ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೂ ತುಂಬಾ ಪ್ರಯೋಜನಕಾರಿ. ಬೀಟ್ರೂಟ್ನಲ್ಲಿ ಫೋಲಿಕ್ ಆಮ್ಲವು ಹೇರಳವಾಗಿ ಕಂಡುಬರುತ್ತದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಫೋಲಿಕ್ ಆಮ್ಲವನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಫೋಲಿಕ್ ಆಮ್ಲವು ಮಗುವಿನ ನರ ಕೊಳವೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಗರ್ಭಿಣಿ ಮಹಿಳೆ ಬೀಟ್ರೂಟ್ ಅನ್ನು ತಿನ್ನಬೇಕು.
- ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಬಿಪಿ ಕಡಿಮೆಯಾದರೆ, ತಲೆಸುತ್ತು ಬಂದರೆ, ಅತಿಯಾಗಿ ವಾಂತಿಯಾಗುತ್ತಿದ್ದರೆ ಅಥವಾ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗದೇ ಇದ್ದರೆ ಬಾಳೆಹಣ್ಣು ತಿನ್ನುವುದು ಸೂಕ್ತ. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ.