ಲೈಫ್‌ಸ್ಟೈಲ್

ಅತಿಯಾದ ಸ್ಮಾರ್ಟ್​ಫೋನ್​ ಬಳಕೆಯಿಂದ ನಿಮ್ಮ ಕಣ್ಣಿನ ದೃಷ್ಟಿ ಮಸುಕಾಗಿದೆಯಾ? ಕೂಡಲೇ ಇದನ್ನು ಮಾಡಿ... Eye Health

Eye Health : ಸರ್ವೇಂದ್ರಿಯಾಣಂ ನಯನಂ ಪ್ರಧಾನಂ ಎನ್ನುತ್ತಾರೆ. ಇದರರ್ಥ ಕಣ್ಣುಗಳು ಎಲ್ಲ ಅಂಗಗಳಿಗಿಂತ ಪ್ರಮುಖವಾಗಿವೆ ಎಂದರ್ಥ. ಅದಕ್ಕಾಗಿಯೇ ಕಣ್ಣುಗಳನ್ನು ಆರೋಗ್ಯವಾಗಿರಿಸಿಕೊಳ್ಳಬೇಕು. ಆದರೆ, ಇಂದು ಸ್ಮಾರ್ಟ್​ಫೋನ್​ಗಳ ಅತಿಯಾದ ಬಳಕೆ ಜನರ ಕಣ್ಣಿನ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ದೇಹದ ಬಹುಮುಖ್ಯ ಅಂಗವಾಗಿರುವ ಕಣ್ಣುಗಳು ಆರೋಗ್ಯವನ್ನು ಕಳೆದುಕೊಳ್ಳುತ್ತಿವೆ.

ದಿನವಿಡಿ ಮೊಬೈಲ್​ ಪರದೆಯನ್ನು ನೋಡುವುದು, ರಾತ್ರಿಯಲ್ಲಿ ಲೈಟ್ ಆಫ್ ಮಾಡಿ, ಕತ್ತಲಲ್ಲಿ ಮೊಬೈಲ್ ಬಳಸುವುದು, ಮುಂತಾದವುಗಳಿಂದ ಕಣ್ಣಿನ ಆರೋಗ್ಯ ಹಾಳಾಗಿ, ದೃಷ್ಟಿ ಮಂದವಾಗುತ್ತದೆ. ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಳ್ಳಬಹುದು. ಈ ಸಮಸ್ಯೆ ಎದುರಾಗಬಾರದು ಅಂದರೆ, ಕಣ್ಣುಗಳ ಆರೋಗ್ಯದ ಮೇಲೆ ನಿಮ್ಮ ಗಮನವಿರಲಿ. ನಾವೀಗ ಕಣ್ಣಿನ ಆರೋಗ್ಯವನ್ನು ಸುಧಾರಿಸುವ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

* ಕಣ್ಣಿನ ಆರೋಗ್ಯವನ್ನು ಸುಧಾರಿಸಲು ವಿಟಮಿನ್ ಎ ಅತ್ಯುತ್ತಮ ಎಂದು ಎಲ್ಲರೂ ಹೇಳುತ್ತಾರೆ. ಇದಲ್ಲದೆ, ವಿಟಮಿನ್ ಸಿ ಮತ್ತು ಖನಿಜಗಳಾದ ಸತು ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ.

* ಸೊಪ್ಪು ಸೇರಿದಂತೆ ಹಸಿರು ತರಕಾರಿಗಳನ್ನು ಸೇವಿಸಿದರೆ ಕಣ್ಣಿಗೆ ಆರೋಗ್ಯವನ್ನು ಕಾಪಾಡುವ ವಿಟಮಿನ್​ಗಳು ದೇಹಕ್ಕೆ ತಲುಪುತ್ತವೆ.

* ಸಾಲ್ಮನ್ ಮೀನು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ನೀವು ಕಣ್ಣಿನ ಶುಷ್ಕತೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಮೀನುಗಳನ್ನು ಸೇರಿಸುವುದು ಉತ್ತಮ.

* ದ್ವಿದಳ ಧಾನ್ಯಗಳಲ್ಲಿ ಸತುವು ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಕಣ್ಣಿನ ರೆಟಿನಾಗೆ ಹಾನಿಯಾಗುವುದಿಲ್ಲ. ಅಕ್ಷಿಪಟಲ ಚೆನ್ನಾಗಿದ್ದರೆ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ದ್ವಿದಳ ಧಾನ್ಯಗಳನ್ನೂ ಸೇರಿಸಿ.

* ಸಿಟ್ರಸ್ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು. ಆಮ್ಲ, ಕಿತ್ತಳೆ ಮತ್ತು ಸ್ಟ್ರಾಬೆರಿಯಂತಹ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿದರೆ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದ ಆಧಾರದ ಮೇಲೆ ಸಂಗ್ರಹಿಸಲಾಗಿದೆ. ಇದು ಕೇವಲ ಜಾಗೃತಿಗಾಗಿ. "ವಿಜಯವಾಣಿ.ನೆಟ್​" ಇದನ್ನು ದೃಢೀಕರಿಸುವುದಿಲ್ಲ. ಈ ಸಲಹೆಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.