ಲೈಫ್‌ಸ್ಟೈಲ್

ಪರಿಶ್ರಮದ ಅನುಭವಕ್ಕೂ ಬೆಲೆ ಇದೆ

Webdesk - Manjunatha B
ನರೇಂದ್ರ ಎಸ್. ಗಂಗೊಳ್ಳಿ
ಒಂದು ದೊಡ್ಡ ಹಡಗನ್ನು ವಿದೇಶ ಪ್ರಯಾಣಕ್ಕಾಗಿ ಸಿದ್ಧಪಡಿಸಲಾಗುತ್ತಿತ್ತು. ಪಯಣಕ್ಕೆ ಹೊರಡುವ ಮುನ್ನ ಎಲ್ಲವೂ ಸರಿಯಾಗಿದೆಯೇ ಎಂದು ಪರಿಶೀಲಿಸಲು ಆರಂಭಿಸಿದರು. ಹಡಗಿನ ಒಳಗಿರುವ ಒಂದು ಯಂತ್ರವು ಆರಂಭ ಮಾಡಿದಾಗಲೆಲ್ಲಾ ವಿಪರೀತ ಕರ್ಕಶ ಸದ್ದನ್ನು ಉಂಟು ಮಾಡುತ್ತಿತ್ತು. ಅದನ್ನು ಸರಿಪಡಿಸಲು ಅಲ್ಲಿನ ಉದ್ಯೋಗಿಗಳು ಬಹಳಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಹೊರಭಾಗದಿಂದ ಬಹಳಷ್ಟು ತಂತ್ರಜ್ಞರನ್ನು ಕರೆಸಲಾಯಿತು. ಅವರಿಂದಲೂ ಅದನ್ನು ಸರಿ ಮಾಡುವುದು ಸಾಧ್ಯವಾಗಲಿಲ್ಲ. ಈ ವಿಷಯ ತಿಳಿದು ದೂರದಿಂದ ಒಬ್ಬ ಇಂಜಿನಿಯರ್ ‘ನಾನು ಸರಿಪಡಿಸುತ್ತೇನೆ’ ಎಂದು ಮುಂದೆ ಬಂದ.

ಆತ ಹಡಗಿನ ಇಂಜಿನ್ ಸೂಕ್ಷ್ಮವಾಗಿ ಪರಿಶೀಲಿಸಿದ. ಕೊನೆಗೆ ತನ್ನ ಸಲಕರಣೆಗಳ ಚೀಲದಿಂದ ಸುತ್ತಿಗೆಯೊಂದನ್ನು ಹೊರತೆಗೆದು ಅದರಿಂದ ಇಂಜಿನ್​ನ ಒಂದು ಭಾಗದಲ್ಲಿ ಕೇವಲ ಐದು ಬಾರಿ ಬಲವಾಗಿ ಹೊಡೆದ. ಅಲ್ಲಿಗೆ ಯಂತ್ರವು ಕರ್ಕಶವಾಗಿ ಶಬ್ದ ಮಾಡುವುದು ನಿಂತು ಹೋಯಿತು. ಎಲ್ಲರಿಗೂ ಬಹಳ ಖುಷಿಯಾಯಿತು.

ಹಡಗಿನ ಮಾಲಿಕ ನಿಮ್ಮ ಫೀಸ್ ಎಷ್ಟು ಎಂದು ಇಂಜಿನಿಯರ್​ನನ್ನು ಕೇಳಿದಾಗ ಆತ 50,000 ರೂಪಾಯಿಗಳು ಎಂದು ತಿಳಿಸಿದ. ಅವನು ಅಷ್ಟೊಂದು ದೊಡ್ಡ ಮೊತ್ತದ ಫೀಸ್ ಕೇಳಿದ್ದಕ್ಕೆ ಮಾಲೀಕನಿಗೆ ಸಿಟ್ಟು ಬಂದರೂ ಅದನ್ನು ತೋರಿಸಿಕೊಳ್ಳದೆ ಕೇಳಿದ. ‘ನೀನು ಬಂದು ಒಂದಷ್ಟು ಹೊತ್ತು ಗಮನಿಸಿದೆ ಮತ್ತು ಸುತ್ತಿಗೆಯಿಂದ ನಾಲ್ಕಾರು ಬಾರಿ ಬಡಿದೆ. ಇಷ್ಟು ಸಣ್ಣ ಕೆಲಸಕ್ಕೆ ಅಷ್ಟು ದೊಡ್ಡ ಮೊತ್ತ ತೆಗೆದುಕೊಳ್ಳುವುದು ಸರಿಯೇ?’ ಅದಕ್ಕೆ ಇಂಜಿನಿಯರ್ ಹೇಳಿದ. ‘ನಿಮಗೆ ನಾನು ಸುತ್ತಿಗೆ ಯಿಂದ ಬಡಿದದ್ದು ಮಾತ್ರ ಕಾಣಿಸಿತು. ಆದರೆ ಹಲವು ಘಟಾನುಘಟಿ ತಂತ್ರಜ್ಞರುಗಳು ಸರಿಪಡಿಸಲಾಗದೆ ಬಿಟ್ಟ ಕೆಲಸದ ಲೋಪವನ್ನು ಶೀಘ್ರ ಕಂಡುಹಿಡಿದು ಅದನ್ನು ಸರಿಪಡಿಸಲು ಎಲ್ಲಿ ಬಡಿಯಬೇಕು ಎಷ್ಟು ಬಡಿಯಬೇಕು ಎಂದು ಕರಾರುವಕ್ಕಾಗಿ ನಿರ್ಧರಿಸಲು ಕಳೆದ 25 ವರ್ಷಗಳ ನನ್ನ ಅನುಭವವನ್ನು ಧಾರೆಯೆರೆದಿರುವೆ. ನಾನು ಹಣ ಕೇಳಿದ್ದು ಆ ಅನುಭವಕ್ಕೆ ಹೊರತು ಈಗಿನ ಕೆಲಸಕ್ಕೆ ಮಾತ್ರವಲ್ಲ’ ಎಂದ. ಮಾಲೀಕನಿಗೆ ಅವನ ಮಾತು ಸರಿ ಎನ್ನಿಸಿ ಸಂತೋಷದಿಂದ ಹಣವನ್ನು ಕೊಟ್ಟು ಕಳುಹಿಸಿದ.

ನಾವು ಕೂಡ ಬಹಳಷ್ಟು ಸಲ ನಮ್ಮ ಸುತ್ತಮುತ್ತಲಿನಲ್ಲಿ ಬೇರೆ ಬೇರೆ ರಂಗಗಳಲ್ಲಿರುವ ಪ್ರತಿಭಾನ್ವಿತರ ಪ್ರತಿಭೆಯನ್ನು ಕೇವಲ ಅವರು ತೆಗೆದುಕೊಂಡ ಸಮಯ ಮತ್ತು ನಿರ್ವಹಣೆಯ ಮೇಲೆ ವಿಶ್ಲೇಷಿಸಿ ಬಿಡುತ್ತೇವೆ. ಆದರೆ ಅಂತಹ ಉನ್ನತವಾದ ಪ್ರದರ್ಶನವನ್ನು ತೋರಲು ಅವರು ತಮ್ಮ ಜೀವನದಲ್ಲಿ ಹಲವು ವರ್ಷಗಳ ಕಾಲ ಬಹಳಷ್ಟು ಕಷ್ಟಪಟ್ಟಿರುತ್ತಾರೆ ಎನ್ನುವುದನ್ನು ಮರೆಯುತ್ತೇವೆ. ಕೆಲವರು ಅದನ್ನು ಮೀರಿ ಹಣವನ್ನು ದುರಾಸೆಗೆ ಬಯಸಬಹುದು. ಆದರೆ ಎಲ್ಲರನ್ನೂ ಒಂದೇ ತರನಾಗಿ ನೋಡಲಾಗದು. ಅಲ್ಲದೆ. ಅನುಭವಕ್ಕೂ ಬೆಲೆ ಇದೆ.

(ಲೇಖಕರು ವಾಣಿಜ್ಯಶಾಸ್ತ್ರ ಉಪನ್ಯಾಸಕರು)