ಲೈಫ್‌ಸ್ಟೈಲ್

ಸಂತೋಷ ನಮ್ಮಲ್ಲೇ ಇದೆ

ಪದ್ಮಲತಾ ಮೋಹನ್
ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಕೆಲವು ದಿನಗಳ ಹಿಂದೆ ಆತನ ಆಪ್ತಮಿತ್ರ ಕಾಯಿಲೆಯಿಂದ ತೀರಿಕೊಂಡಿದ್ದ. ಇದರಿಂದಾಗಿ ರಾಜ ಬಹಳ ದುಃಖಿತನಾಗಿದ್ದ. ತನ್ನ ದುಃಖ ಶಮನ ಮಾಡಲು ಆತ ತನ್ನ ಮಂತ್ರಿಯನ್ನು ಕರೆದು, ‘ನನಗೆ ತುಂಬ ದುಃಖವಾಗಿದೆ. ನೀವು ಈ ರಾಜ್ಯದ ಮಂತ್ರಿ. ನನಗೆ ಯಾವುದೇ ರೀತಿಯ ನೋವು ಬಾಧಿಸದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ನನ್ನನ್ನು ಸಂತೋಷಪಡಿಸಿ’ ಎಂದು ಆಜ್ಞಾಪಿಸಿದ.

ಮಂತ್ರಿ ‘ಅಪ್ಪಣೆ ಮಹಾಸ್ವಾಮಿ’ ಎಂದ. ಮಂತ್ರಿ ರಾಜನನ್ನು ಸಂತೋಷವಾಗಿಡಲು ತನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಿದ. ನೃತ್ಯ, ಸಂಗೀತ, ಹಾಸ್ಯಗೋಷ್ಠಿ, ಕವಿಗೋಷ್ಠಿ ಇತ್ಯಾದಿ ವಿಭಿನ್ನ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ. ರಾಜ್ಯದ ಎಂತಹುದೇ ಕಠಿಣ ಸಮಸ್ಯೆಗಳನ್ನು ರಾಜನ ಬಳಿಗೆ ಒಯ್ಯದೆ ತಾನೇ ಪರಿಹಾರ ಸೂಚಿಸತೊಡಗಿದ. ಆದರೂ ರಾಜನಿಗೆ ದುಃಖ ಶಮನವಾಗಲಿಲ್ಲ. ಆತ ಮಂತ್ರಿಗೆ, ‘ನನ್ನ ಮನಸ್ಸಿನ ದುಃಖ ಇನ್ನೂ ಕಡಿಮೆಯಾಗಿಲ್ಲ. ನೀವು ಪ್ರಯತ್ನದಲ್ಲಿ ಸೋತಿದ್ದೀರಿ’ ಎಂದ. ಆಗ ಮಂತ್ರಿ ತನಗೆ ಇನ್ನು ಕೆಲವು ದಿನಗಳ ಅವಕಾಶ ಕೊಡಿ ಎಂದು ಕೇಳಿಕೊಂಡ. ರಾಜ ಸರಿ ಎಂದ.

ಮರುದಿನ ಮಂತ್ರಿ ರಾಜನ ಪ್ರಿಯವಾದ ತಿಂಡಿಯನ್ನು ಮಾಡಿಸಿ ತೆಗೆದುಕೊಂಡು ಬಂದ. ರಾಜ ತನ್ನ ಇಷ್ಟವಾದ ತಿಂಡಿಯನ್ನು ನೋಡಿದ. ಅದನ್ನು ತೆಗೆದುಕೊಂಡು ಸ್ವಲ್ಪವೇ ತಿಂದ. ‘ಬಹಳ ರುಚಿಯಾಗಿತ್ತು. ಆದರೆ ವಿಪರೀತ ಗಟ್ಟಿಯಾಗಿ ಇರುವುದರಿಂದ ಹೆಚ್ಚು ತಿನ್ನಲಾಗಲಿಲ್ಲ’ ಎಂದ.

ಒಡನೆಯೇ ಮಂತ್ರಿ ರಾಜನಿಗೆ, ‘ನಾನು ನಿಮಗೆ ಇಷ್ಟವಾದ ತಿಂಡಿಯನ್ನು ಮಾಡಿಕೊಡಬಹುದು. ಆದರೆ ಅದನ್ನು ತಿನ್ನಿಸಲು ಸಾಧ್ಯವೇ? ನಿಮಗೆ

ಬೇಕಾದರೆ ನೀವೇ ಕಷ್ಟಪಟ್ಟು ಜಗಿದು ತಿನ್ನಬೇಕಲ್ಲವೇ?’ ಎಂದ.

ಆಗ ರಾಜನು, ‘ಹೌದು ಮಂತ್ರಿಗಳೇ ನನಗೆ ಇಷ್ಟವಾದುದನ್ನು ನೀವು ತಯಾರಿಸಿಕೊಡಬಹುದು. ಆದರೆ ಅದನ್ನು ತಿನ್ನಬೇಕಾದರೆ ನಾನೇ ಜಗಿಯಬೇಕು’ ಎಂದ. ಮಂತ್ರಿ ಪ್ರತಿಕ್ರಿಯಿಸಿ, ‘ಹಾಗೆಯೇ ನಿಮಗೆ ನಾನು ಸಂತೋಷವಾಗಿ ಇರಿಸಲು ಏನೇ ಮಾಡಿದರೂ ಅದು ಸಾಧ್ಯವಿಲ್ಲ. ಸಂತೋಷವಾಗಿ ಇರುವುದು ನಿಮ್ಮ ಕೈಯಲ್ಲೇ ಇದೆ. ಸಂತೋಷವಾಗಿ ಇರಬೇಕೆಂಬ ಭಾವನೆ ನಿಮ್ಮಲ್ಲಿ ಹುಟ್ಟದಿದ್ದರೆ ಬೇರೆಯವರಿಂದ ಅದನ್ನು ಪಡೆಯಲಾಗದು’ ಎಂದ. ಈಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ, ದುಃಖದಿಂದ ಹೊರಬರಲು ಪ್ರಯತ್ನಿಸಿ, ಯಶಸ್ವಿಯಾದ.

ನಾವೆಲ್ಲರು ಯಾವತ್ತೂ ಸಂತೋಷವಾಗಿ ಇರಲು ಇಚ್ಛಿಸುತ್ತೇವೆ. ಆದರೆ ನಾವು ಆ ಸಂತೋಷವನ್ನು ಬೇರೆಯವರಿಂದ ನಿರೀಕ್ಷಿಸುತ್ತೇವೆ. ಬೇರೆಯವರು ನಮ್ಮನ್ನು ಸಂತೋಷದಿಂದ ಇಡಲು ಪ್ರಯತ್ನ ಪಟ್ಟರೂ ನಮ್ಮಲ್ಲಿ ಆ ಪ್ರಯತ್ನ ಇಲ್ಲದಿದ್ದರೆ ಪ್ರಯೋಜನವಿಲ್ಲ. ಸ್ವಾಮಿ ವಿವೇಕಾನಂದರ ಮಾತಿನಂತೆ, ‘ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ದಾರರು, ಮತ್ತಾರೂ ಅಲ್ಲ’. ನಮ್ಮ ಅದೃಷ್ಟವನ್ನು, ಸಂತೋಷವನ್ನು ರೂಪಿಸಿಕೊಳ್ಳುವವರು ನಾವೇ. ಬೇರೆಯವರಿಂದ ದೊರಕಲಾರದು. ಈ ವಾಸ್ತವವನ್ನು ಅರ್ಥಮಾಡಿಕೊಂಡು ಜೀವನ ರೂಪಿಸಿಕೊಳ್ಳೋಣ, ದುಃಖವನ್ನು ಹಿಂದಿಕ್ಕಿ ಸಂತೋಷವನ್ನು ಬರಮಾಡಿಕೊಳ್ಳೋಣ.

(ಲೇಖಕಿ ಉಪನ್ಯಾಸಕಿ)