ಮಹದೇವಪುರ: ಮಹದೇವಪುರ ಕ್ಷೇತ್ರವ್ಯಾಪ್ತಿಯ ಕಿತ್ತಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನರ ಸಮಸ್ಯೆ ಬಗೆಹರಿಸುವುದಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯ ಕೆ.ವಿ.ನಾಗರಾಜ ರೂಪಿಸಿರುವ ಗುಡ್ ಮಾರ್ನಿಂಗ್ ಕಿತ್ತಗನೂರು ಕಾರ್ಯಕ್ರಮಕ್ಕೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೊದಲಬಾರಿಗೆ ಗ್ರಾಮ ಪಂಚಾಯತಿ ಸದಸ್ಯ ಕೆ.ವಿ.ನಾಗರಾಜ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಗುಡ್ ಮಾರ್ನಿಂಗ್ ಹೆಸರಿನಲ್ಲಿ ತಾನು ರೂಪಿಸಿರುವ ಕಾರ್ಯಕ್ರಮ ವಿಶಿಷ್ಟವಾಗಿದೆ. ಅಧಿಕಾರಿಗಳೊಂದಿಗೆ ಒಂದೊಂದು ಬಡಾವಣೆಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಕಾರ್ಯಕ್ರಮ ಇತರ ಜನಪ್ರತಿನಿದಿಗಳಿಗೂ ಮಾದರಿಯಾಗಿದೆ ಎಂದರು.
ಕಿತ್ತಗನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಬಡಾವಣೆಗಳಿವೆ. ಕೆಲವು ಡೆವಲಪರ್‌ಗಳು ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸದೆ ನಿವೇಶನಗಳನ್ನು ಮಾರಿದ್ದು, ಸಮಸ್ಯೆಗಳಿರುವ ಬಡಾವಣೆಗಳಲ್ಲಿ ಹಂತಹಂತವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಅರವಿಂದ ಲಿಂಬಾವಳಿ ಭರವಸೆ ನೀಡಿದರು.
ನಂತರ ಮಾತನಾಡಿದ ಕೆ.ವಿ.ನಾಗರಾಜ, ಒಬ್ಬ ಗ್ರಾಮ ಪಂಚಾಯತಿ ಸದಸ್ಯನಾಗಿ ಬಡಾವಣೆ ನಿವಾಸಿಗಳಿಗೆ ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಭೇದ ಮಾಡದೇ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಆದ್ಯ ಕರ್ತವ್ಯ. ಆದ್ದರಿಂದ ಪ್ರತಿದಿನ ಒಂದೊಂದು ಬಡಾವಣೆ ಆಯ್ಕೆ ಮಾಡಿಕೊಂಡು ಪಂಚಾಯತಿ ಅಧಿಕಾರಿಗಳು ಹಾಗೂ ಸ್ಥಳಿಯರೊಂದಿಗೆ ಭೇಟಿ ನೀಡಿ ಸ್ಥಳದಲ್ಲಿನ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಇದೇ ವೇಳೆ ಪೌರ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ಮುಖಂಡರಾದ ರಾಂಪುರ ಗಣೇಶ್, ಕೃಷ್ಣಮ್ಮ ಮಾದೇಶ್, ಆಶಾರಾಣಿ, ವಿ.ಪಿ.ಕೃಷ್ಣ, ಎಸ್.ಶ್ರೀನಿವಾಸಗೌಡ, ರಮೇಶ್ ಗೌಡ ಗ್ರಾ.ಪಂ. ಅಧ್ಯಕ್ಷ ಲಕ್ಷೀನಾರಾಯಣಸ್ವಾಮಿ ಮತ್ತಿತರರಿದ್ದರು.