ಮಳೆಯಲ್ಲಿ ಬಜ್ಜಿ-ಚಹಾ ರುಚಿಯ ಜತೆ ಬೆರೆತ ನೆನಪುಗಳು  
ಆಹಾರ

ಮಳೆ ಬಂದರೆ ಚಹಾ-ಬಜ್ಜಿ ತಿನ್ನೋ ಆಸೆ ಯಾಕೆ? ಇದರ ಹಿಂದೆ ಇದೆ ಅಚ್ಚರಿ ಕಾರಣ | Rainy season food cravings

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಬಿಸಿ-ಬಿಸಿ ತಿಂಡಿ ತಿನ್ನುವ ಆಸೆ ಯಾಕೆ ಹೆಚ್ಚಾಗುತ್ತದೆ?
  • ಬಜ್ಜಿ, ಪಕೋಡಾ ತಿಂಡಿಗಳು ‘ಕಂಫರ್ಟ್ ಫುಡ್’ ಅನಿಸುತ್ತವೆ ಯಾಕೆ?
  • ಹನಿಯುವ ವೇಳೆ ಚಹಾ, ಕಾಫಿಯ ಪರಿಮಳಕ್ಕೂ ಸೋಲುವ ಮನಸ್ಸು

Rainy Season

: ಮಳೆ ಬಂದ್ರೆ ಸಾಕು... ಕೈಯಲ್ಲಿ ಬಿಸಿ ಬಿಸಿ ಚಹಾ, ಪಕ್ಕದಲ್ಲಿ ಗರಿಗರಿಯಾದ ಬಜ್ಜಿ ಇದ್ದರೆ ಸಾಕು ಸ್ವರ್ಗ ಅಂತ ಹಲವರಿಗೆ ಅನಿಸುತ್ತೆ. ಹೊರಗೆ ಮಳೆಯ ಸದ್ದು, ತಂಪಾದ ವಾತಾವರಣ, ಮಣ್ಣಿನ ಪರಿಮಳ... ಇವೆಲ್ಲ ಸೇರಿ ಏನಾದರೂ ಬಿಸಿ-ಬಿಸಿ ತಿಂಡಿ ತಿನ್ನುವ ಆಸೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಆದ್ರೆ ಇದು ಬರೀ ನಾಲಿಗೆ ಕೇಳುವ ಆಸೆ ಅಲ್ಲ. ನಮ್ಮ ದೇಹ, ಮೆದುಳು, ಇಂದ್ರಿಯಗಳು ಮತ್ತು ಬಾಲ್ಯದ ನೆನಪುಗಳೂ ಮಳೆಗಾಲದ ಈ ಆಸೆಯಲ್ಲಿ ಪಾತ್ರ ವಹಿಸುತ್ತವೆ. ಮಳೆ ಬಂದಾಗ ವಾತಾವರಣ ತಂಪಾಗುತ್ತದೆ. ದೇಹ ತನ್ನ ಸಾಮಾನ್ಯ ತಾಪಮಾನ ಕಾಪಾಡಿಕೊಳ್ಳಲು ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಇದೇ ವೇಳೆ ಬಿಸಿ ಆಹಾರ ಅಥವಾ ಪಾನೀಯ ಸೇವಿಸಿದಾಗ ದೇಹಕ್ಕೆ ಒಂದು ರೀತಿಯ ಆರಾಮ ಸಿಗುತ್ತದೆ. .

ಬಜ್ಜಿ, ಪಕೋಡಾ ಯಾಕಿಷ್ಟು ಇಷ್ಟ?

ಮಳೆಗಾಲದಲ್ಲಿ ಬಿಸಿ, ರುಚಿಕರ ಮತ್ತು ಗರಿಗರಿಯಾದ ಆಹಾರ ತಿನ್ನುವುದರಿಂದ ಸಿಗುವ ತೃಪ್ತಿಯೂ ‘ಕ್ರೇವಿಂಗ್’ ಅಂದರೆ ಆಸೆ ಹೆಚ್ಚಿಸಬಹುದು. ಅದರಲ್ಲೂ ಬಜ್ಜಿ, ಪಕೋಡಾ, ವಡಾದಂತಹ ಕರಿದ ತಿಂಡಿಗಳು ತಕ್ಷಣವೇ ‘ಕಂಫರ್ಟ್ ಫುಡ್’ ಫೀಲ್ ಕೊಡುತ್ತವೆ. ಮೋಡ ಕವಿದ ವಾತಾವರಣ ಮತ್ತು ಮನೆಯಲ್ಲೇ ಆರಾಮದ ಮೂಡ್ ಕೂಡ ಇಂತಹ ಆಹಾರದತ್ತ ಮನಸ್ಸು ಸೆಳೆಯಲು ಕಾರಣವಾಗಬಹುದು.

ಚಹಾ, ಕಾಫಿಯ ಪರಿಮಳಕ್ಕೂ ಸೋಲುವ ಮನ

ಮಳೆಗಾಲದಲ್ಲಿ ಶುಂಠಿ, ಏಲಕ್ಕಿ, ಲವಂಗ ಹಾಕಿದ ಬಿಸಿ ಚಹಾದ ಪರಿಮಳವೇ ಬೇರೆ. ಕಾಫಿಯ ಬಿಸಿ ಸುವಾಸನೆಯೂ ಮನಸ್ಸಿಗೆ ಆಹ್ಲಾದಕರ ಅನುಭವ ನೀಡುತ್ತದೆ. ಹೊರಗೆ ಮಳೆ, ಒಳಗೆ ಬಿಸಿ ಚಹಾದ ಪರಿಮಳ... ಈ ಕಾಂಬಿನೇಷನ್‌ ನೋಡಿದ್ರೆ ಎಂತಾ ಡಯಟ್​ ಮಾಡುವವರಿಗೂ ಬಜ್ಜಿ ತಿನ್ನಬೇಕು ಅನ್ನಿಸದೇ ಇರಲ್ಲ.

ಮಳೆ ಮತ್ತು ಬಾಲ್ಯದ ನೆನಪುಗಳು

ಮಳೆಗಾಲದಲ್ಲಿ ಬಜ್ಜಿ, ಚಹಾ ತಿನ್ನಬೇಕು ಅನ್ನಿಸುವುದಕ್ಕೆ ಬಾಲ್ಯದ ನೆನಪುಗಳೂ ಒಂದು ಪ್ರಮುಖ ಕಾರಣ. ಚಿಕ್ಕಂದಿನಿಂದಲೇ ಮಳೆ ಅಂದ್ರೆ ಬಿಸಿ ಬಜ್ಜಿ, ಚಹಾ ಎಂಬ ಅನುಭವ ಹಲವರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದಿರುತ್ತದೆ. ಮಳೆ ಬಂದಾಗ ಮನೆಯಲ್ಲಿ ಈರುಳ್ಳಿ ಬಜ್ಜಿ, ಮೆಣಸಿನಕಾಯಿ ಬಜ್ಜಿ ಅಥವಾ ಪಕೋಡಾ ಮಾಡುತ್ತಿದ್ದರೆ, ಅದರ ರುಚಿ ಮತ್ತು ಪರಿಮಳದ ನೆನಪುಗಳು ವರ್ಷಗಳಾದರೂ ಉಳಿಯುತ್ತವೆ. ಹೀಗಾಗಿ ಮಳೆ ಹನಿಗಳು ಕಿಟಕಿಗೆ ಬಡಿಯುತ್ತಿದ್ದಂತೆ ಆ ಹಳೆಯ ನೆನಪುಗಳು ಮತ್ತೆ ಮನಸ್ಸಿಗೆ ಬಂದು, ಬಜ್ಜಿ ತಿನ್ನಬೇಕು ಅನ್ನಿಸಬಹುದು.

ಮನೆಯಲ್ಲಿ ಇದ್ದರೆ ತಿನ್ನುವ ಆಸೆ ಜಾಸ್ತಿ

ಮಳೆ ಜೋರಾಗಿ ಬಂದಾಗ ಹೊರಗೆ ಹೋಗುವ ಪ್ಲಾನ್ ಕ್ಯಾನ್ಸಲ್ ಆಗಬಹುದು. ಆಗ ಸಿನಿಮಾ ನೋಡುತ್ತಾ, ಮನೆಯವರ ಜೊತೆ ಮಾತುಕತೆಯಾಡುತ್ತಾ ಅಥವಾ ಮೊಬೈಲ್ ಸ್ಕ್ರೋಲ್ ಮಾಡುತ್ತಾ ಏನಾದ್ರೂ ತಿನ್ನಬೇಕು ಅನ್ನಿಸಬಹುದು. ಅದರಲ್ಲೂ ಮನೆಯಲ್ಲಿ ಕಡಲೆಹಿಟ್ಟು, ಈರುಳ್ಳಿ, ಮೆಣಸಿನಕಾಯಿ ಇದ್ದರೆ ಸಾಕು.. ‘ಬಜ್ಜಿ ಮಾಡೋಣ’ ಅನ್ನುವ ಯೋಚನೆ ಬರಲು ಇನ್ನೇನು ಬೇಕು?

ಹಾಗಾದ್ರೆ ಮಳೆ-ಬಜ್ಜಿ ಕಾಂಬಿನೇಷನ್ ಯಾಕೆ ಇಷ್ಟು ಫೇಮಸ್?

ತಂಪಾದ ವಾತಾವರಣ, ಬಿಸಿ ಆಹಾರ, ಗರಿಗರಿಯಾದ ತಿಂಡಿಯ ರುಚಿ, ಆಹಾರದ ಪರಿಮಳ, ಬಾಲ್ಯದ ನೆನಪುಗಳು ಹಾಗೂ ಮನೆಯ ಆರಾಮದ ವಾತಾವರಣ. ಇವೆಲ್ಲ ಸೇರಿ ಮಳೆಗಾಲದಲ್ಲಿ ಬಜ್ಜಿ, ಪಕೋಡಾ, ಚಹಾದಂತಹ ತಿಂಡಿಗಳತ್ತ ನಮ್ಮ ಆಸೆಯನ್ನು ಹೆಚ್ಚಿಸುತ್ತವೆ.
ಅದಕ್ಕೇ ಮಳೆ ಶುರುವಾದ ತಕ್ಷಣ ‘ಚಹಾ ಮಾಡ್ಲಾ?’ ಎಂಬ ಪ್ರಶ್ನೆ ಬರುವುದಕ್ಕೂ ಮುಂಚೆಯೇ, ‘ಬಜ್ಜಿ ಮಾಡೋಣ’ ಅಂತ ಮನಸ್ಸು ಹೇಳಿಬಿಡುತ್ತೆ. ಆದ್ರೆ ಕರಿದ ತಿಂಡಿಗಳನ್ನು ಮಿತವಾಗಿ ತಿನ್ನೋದು ಒಳ್ಳೆಯದು. ಬಿಸಿ ತಿಂಡಿಯ ಜೊತೆ ಕಡಿಮೆ ಸಕ್ಕರೆಯ ಚಹಾ ಅಥವಾ ಕಾಫಿ, ಜೊತೆಗೆ ಆರೋಗ್ಯಕರ ಆಯ್ಕೆಗಳಿಗೆ ಆದ್ಯತೆ ನೀಡಿದರೆ ಒಳ್ಳೆಯದು.