King Of Sweets 
ಆಹಾರ

ಭಾರತದಲ್ಲಿನ ಸಿಹಿ ತಿನಿಸುಗಳ ಮಹಾರಾಜ ಯಾರು ಗೊತ್ತೆ..? ಕರ್ನಾಟಕದ ಈ ಸ್ವೀಟ್​ಗಿದೆ ರೋಚಕ ಕಥೆ!..King Of Sweets

ಪ್ರಮುಖ ಮುಖ್ಯಾಂಶಗಳು

  • ಭಾರತದ ಸಿಹಿಗಳ ರಾಜ ಕರ್ನಾಟಕದ ಹೆಮ್ಮೆಯ ಸ್ವೀಟ್ ಮೈಸೂರ್​ ಪಾಕ್
  • ರಾಜನಿಗಾಗಿ ಅಪ್ರಯತ್ನದಿಂದ ತಯಾರಾದ ಮೈಸೂರ್​ ಪಾಕ್​ಗೆ ಭಾರಿ ಮನ್ನಣೆ
  • ​ ಕಾಕಾಸುರ ಮಾದಪ್ಪ ತಯಾರಿಸಿದ ಕಡಲೆ ಹಿಟ್ಟಿನ ಸಿಹಿಗೆ ಎಲ್ಲೆಲ್ಲೂ ಡಿಮ್ಯಾಂಡ್
King Of Sweets: ಹಣ್ಣುಗಳ ರಾಜ ಮಾವು, ಹೂಗಳ ರಾಣಿ ಗುಲಾಬಿ, ಕಾಡಿನ ರಾಜ ಸಿಂಹ ಹೀಗೆ ಪರಿಸರದ ಎಲ್ಲ ಪ್ರಭೇದಕ್ಕೂ ಒಂದೊಂದು ಲೀಡರ್​ ಇದ್ದಾರೆ. ಹಾಗೆಯೇ ದೇಶದಲ್ಲಿ ಇರುವ ಸಾವಿರಕ್ಕೂ ಹೆಚ್ಚು ಸಿಹಿತಿಂಡಿಗಳಿಗೂ ಒಬ್ಬ ಕಿಂಗ್​  ಇದೆ. ಅದ್ಯಾವುದು ಗೊತ್ತಾ? ಅದೇ ಮೈಸೂರಿನ ಪಾಕು, ಮೈಸೂರು ಪಾಕ್​.
ಬಾಯಿಗಿಟ್ಟರೆ ಕರಗುವ, ಚಿನ್ನದ ಬಣ್ಣದ ಮೈಸೂರು ಪಾಕ್(Mysore Pak), ದೇಶ-ವಿದೇಶ ಹಾಗೂ ಕರ್ನಾಟಕದ ಗಲ್ಲಿ-ಗಲ್ಲಿಯಲ್ಲಿಯೂ ಇದರ ಸ್ವಾದಕ್ಕೆ ಮನಸೋತೋರಿಲ್ಲ. ಮೈಸೂರು ರಾಜರ ಅರಮನೆಯಲ್ಲಿ ಅಪ್ರಯತ್ನಿತವಾಗಿ ಹುಟ್ಟಿದ್ದ ರಾಜವೈಭವಿ ತಿನಿಸಾದ ಇದು ವಿಶ್ವದಾದ್ಯಂತ ಜನಪ್ರಿಯಗಳಿಸಿದೆ.

ಸಿಹಿ ತಿಂಡಿಗಳ ರಾಜ ಮೈಸೂರ್​ ಪಾಕ್​ ಅನ್ನೋದ್ಯಾಕೆ?

ಭಾರತದಲ್ಲಿ ಹಲವು ಸಿಹಿ ತಿಂಡಿಯಿದೆ. ಬಾದೂಷ, ರಸಗೂಲ್ಲ, ಚಂಪಾಕಲಿ, ಮಿಲ್ಕ್​​ ಕೇಕ್, ಜಾಮೂನ್ ಹೀಗೆ ಹಲವು ಹೆಸರಾಂತ ಸ್ವೀಟ್​ಗಳಿವೆ ಆದರೆ, ಅನೇಕ ಭಾರತೀಯರು ಸಿಹಿ ತಿಂಡಿಗಳ ರಾಜ ಯಾವುದು ಎಂದು ಚರ್ಚೆ ಮಾಡುವಾಗ ಎಲ್ಲರೂ ಮೈಸೂರು ಪಾಕ್ ಅನ್ನೇ ಉಲ್ಲೇಖಿಸುತ್ತಾರೆ. ಇದಕ್ಕೆ ಇದರ ರಾಜವೈಭವಿ ಹಿನ್ನೆಲೆ. ಶ್ರೀಮಂತ ರುಚಿ, ಬಣ್ಣ, ತುಪ್ಪ ಇರುವುದೇ ಇದಕ್ಕೆ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಿರುವುದಕ್ಕೆ ಕಾರಣವಾಗಿದೆ.  ಈ ಮೈಸೂರುಪಾಕ್​ ನಿಜಕ್ಕೂ ಐಷಾರಾಮಿ ತಿನಿಸು.  ಈ ಒಂದು ಸಿಹಿ ತಿನಿಸು ಐಷಾರಾಮಿ, ಪ್ರತಿಷ್ಠೆ ಮತ್ತು ಸಂಭ್ರಮಾಚರಣೆಗಳೊಂದಿಗೆ ಎಷ್ಟು ಗಾಢವಾಗಿ ಬೆಸೆದುಕೊಂಡಿದೆ. ಬಹುಶಃ ಇದಕ್ಕಾಗಿಯೇ ಮೈಸೂರ್​ ಪಾಕ್​ ಸಿಹಿಗಳ ರಾಜ ಎನ್ನಬಹುದು.

ಮೈಸೂರು ಪಾಕ್ ಮಾಡಿದ್ದು ಯಾರು?

19ನೇ ಶತಮನಾದ ಅಂತ್ಯ 20ನೇ ಶತಮಾನದ ಆರಂಭದಲ್ಲಿ ಅರಮನೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡುತ್ತಿದ್ದರು. ಅವರು ನಾಲ್ವಡಿ ಕೃಷ್ಣರಾಜ ಒಡೆಯರ್​ ಮತ್ತು ಜಯ ಚಾಮರಾಜ ಒಡೆಯರ್​ ಆಡಳಿತಾವಧಿಯಲ್ಲಿ ಪಾಕಶಾಲೆಯ ನೇತೃತ್ವವನ್ನುವಹಿಸಿಕೊಂಡಿದ್ದರು. ಒಮ್ಮೆ ಅವರಿಗೆ ರಾಜರು ಸಿಹಿಯೊಂದನ್ನು ತಯಾರಿ ಮಾಡಲು ಆದೇಶಿಸುತ್ತಾರೆ. ಎಲ್ಲ ರೀತಿಯ ತಿನಿಸು ಪ್ರತಿದಿನ ಮಾಡಲಾಗುತ್ತದೆ. ಹೊಸದಾಗಿ ಏನಾದರು ಮಾಡ್ಬೇಕಲ್ಲ ಎಂದು ಚಿಂತೆ ಮಾಡ್ತಿದ್ದಾಗ ಹುಟ್ಟಿದ್ದೇ ಈ ಮೈಸೂರು ಪಾಕು.
 ಕಡಲೆ ಹಿಟ್ಟು, ಸಕ್ಕರೆ ಮತ್ತು ಹೇರಳವಾಗಿ ತುಪ್ಪವನ್ನು ಬಳಸಿ ಒಂದು ಮಿಶ್ರಣ ತಯಾರಿಸಿದರು. ಅರಸರು ಅದನ್ನು ಸವಿದು ಮಾರುಹೋದರು ಮತ್ತು ಅದರ ಹೆಸರನ್ನು ಕೇಳಿದರು. ಆದರೆ, ಹೆಸರಿಲ್ಲ ಎಂದು ಕಾಕಾಸುರ ಹೇಳಿದರು. ಆಗ ರಾಜರು ಮೈಸೂರ್​ ಪಾಕ್​ ಎಂದು ಇಟ್ಟರು. 

ಮದುವೆ, ಕಾರ್ಯಕ್ರಮಕ್ಕೆ ಇದರದ್ದೇ ಮೇಲುಗೈ

ದೀಪಾವಳಿಗಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮದುವೆ ಸಮಾರಂಭ, ಮಗುವಿನ ನಾಮಕರಣ,  ಸೀಮಂತ ಸೇರಿದಂತೆ ಬಹುತೇಕ ಸಾಂಪ್ರದಾಯಿಕ ಆಚರಣೆಗಳಲ್ಲಿ ಇದರ ಬಳಕೆ ಕಡ್ಡಾಯ. ಮೈಸೂರ್​ ಪಾಕ್ ಬರಿ ಸಿಹಿ ತಿನಿಸಲ್ಲ ಇದು ದಕ್ಷಿಣ ಭಾರತ ಮತ್ತು ಕರ್ನಾಟಕದ ಹೆಮ್ಮೆಯ ಖಾದ್ಯ. 

ಎರಡು ರೀತಿಯಲ್ಲಿ ಸಿಹಿ ತಯಾರಿ

ಮೊದಲು ಮೈಸೂರ್​ ಪಾಕ್​ ಉಗಮವಾದ ರೀತಿಯೇ ಬೇರೆ. ರೇಷ್ಮೆ ಬಣ್ಣದ ಮೈಸೂರ್​ ಪಾಕ್​ಗೆ ಅಲ್ಲಲ್ಲಿ ತೂತುಗಳಿರುತ್ತದೆ ಕೊಂಚ ದಪ್ಪ ಹಾಗೂ ಗಟ್ಟಿ. ಇದು ಈಗಲೂ ಸಹ ಮೈಸೂರಿನಲ್ಲಿ ಮಾದಪ್ಪನವರ ವಂಶಸ್ಥರು ತಯಾರಿ ಮಾಡುತ್ತಾರೆ.
ಇತ್ತೀಚಿನ ಮೈಸೂರು ಪಾಕ್​ ಮೃದು ಸ್ವಭಾವದ್ದು ಹೇರಳವಾಗಿ ತುಪ್ಪ ಸುರಿದು, ಬಾಯಿಗಿಟ್ಟರೆ ಕರಗುವಂತೆ ತಯಾರಿ ಮಾಡಲಾಗುತ್ತದೆ, ಇದು ಇಂದಿನ ಆಧುನಿಕ ಬೇಕರಿಗಳಲ್ಲಿ ಕಾಣಸಿಗುತ್ತದೆ.

ಮೈಸೂರು ಪಾಕ್ ಮಾಡೋದು ಹೇಗೆ?

ಮೈಸೂರು ಪಾಕ್ ಸಿಹಿ ಮಾಡಲು ಬೇಕಾಗೋದು ಬರೀ ಮೂರೇ ಪದಾರ್ಥ ಒಂದು ಕಡಲೇ ಹಿಟ್ಟು,. ಸಕ್ಕರೆ ಹಾಗೂ ತುಪ್ಪ.

  • 1 ಕಪ್​ ಕಡಲೆ ಹಿಟ್ಟನ್ನು ಜರಡಿ ಮಾಡಿಟ್ಟು ರೆಡಿ ಇರಲಿ
  • 2ರಿಂದ ಎರಡು ಕಾಲು ತುಪ್ಪ
  • 2 ಕಪ್ ಸಕ್ಕರೆ
  • 1 ಕಪ್ ನೀರು 
  • ರಂಧ್ರ ವಿನ್ಯಾಸಕ್ಕಾಗಿ ಚಿಟಿಕೆ ಸೋಡ. ಮತ್ತು ಸ್ವಾದಕ್ಕಾಗಿ ಏಲಕ್ಕಿ ಬೇಕಾಗುತ್ತದೆ.

ತಯಾರಿಸುವ ವಿಧಾನ

ಮೊದಲಿಗೆ ತುಪ್ಪವಿಲ್ಲದೆ ಕಡಲೆ ಹಿಟ್ಟನ್ನು ಹುರಿದುಕೊಳ್ಳಿ. ನಂತರ  ಹುರಿದ ಕಡಲೆ ಹಿಟ್ಟು ತಣ್ಣಗಾಗಲು ಬಿಡಿ, ಆನಂತರ ಅದಕ್ಕೆ ತುಪ್ಪ ಸೇರಿಸಿ ನಿಧಾನವಾಗಿ ಕಲಿಸಿ. ಮತ್ತೊಂದು ಬಾಂಡಲಿಯಲ್ಲಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ. ಬೆಲ್ಲದ ಜೊತೆಗೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕರಗಿಸಿ.
ಹುರಿದ ಕಡಲೆ ಹಿಟ್ಟಿನ ಜೊತೆ ತುಪ್ಪ ಸೇರಿದಿ ಇಟ್ಟುಕೊಂಡ ಮೇಲೆ ಬಾಣಲೆಗೆ ನಿಧಾನವಾಗಿ ಹಾಕಿ ಮಿಶ್ರಣ ಮಾಡಿಕೊಳ್ಳಿ, ಗಟ್ಟಿಯಾದ ನಂತರ ತುಪ್ಪ ಸವರಿದ ತಟ್ಟೆಗೆ ಅದನ್ನು ಹಾಕಿ ತಣ್ಣಗಾಗಲು ಬಿಡಿ. ಅದು ತಣ್ಣಗಾದ ನಂತ ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿಕೊಳ್ಳಿ, (ಏಜೆನ್ಸೀಸ್​)