Fashion Tips : ಒಂದು ಬಟ್ಟೆ ಅಂಗಡಿಯಲ್ಲಿ ನೋಡಿದಾಗ ನಮಗೆ ತುಂಬಾ ಇಷ್ಟವಾಗುವ ಡ್ರೆಸ್, ಧರಿಸಿದಾಗ ಮಾತ್ರ ಯಾಕೋ ಅಷ್ಟೊಂದು ಚೆನ್ನಾಗಿ ಕಾಣುತ್ತಿಲ್ಲ? ಎಂದು ನಮಗೆ ಅನಿಸಬಹುದು. ಈ ಅನುಭವ ಬಹುತೇಕರಿಗೆ ಆಗಿರುತ್ತದೆ. ಡ್ರೆಸ್‌ನ ವಿನ್ಯಾಸ ಚೆನ್ನಾಗಿಯೇ ಇರುತ್ತದೆ, ಬಟ್ಟೆಯ ಗುಣಮಟ್ಟವೂ ಚೆನ್ನಾಗಿರುತ್ತದೆ. ಆದರೂ ಮುಖದ ಲುಕ್ ಮಾತ್ರ ಬದಲಾಗಿರುತ್ತದೆ. ಇದಕ್ಕೆ ಕಾರಣ ಹಲವು ಬಾರಿ ಬಟ್ಟೆಯ ಬಣ್ಣ ನಮ್ಮ ಸ್ಕಿನ್ ಟೋನ್‌ಗೆ ಹೊಂದದಿರುವುದು.
ನಮ್ಮ ಚರ್ಮದ ಬಣ್ಣಕ್ಕೆ ಹೊಂದುವ ಶೇಡ್ ಆಯ್ಕೆ ಮಾಡಿದಾಗ ಮುಖ ಹೆಚ್ಚು ಫ್ರೆಶ್ ಆಗಿ, ನ್ಯಾಚುರಲ್ ಆಗಿ ಕಾಣಬಹುದು. ಅದೇ ಕಾರಣಕ್ಕೆ ಕೆಲವರು ಸರಳವಾದ ಬಟ್ಟೆ ಧರಿಸಿದರೂ ತುಂಬಾ ಸ್ಟೈಲಿಶ್ ಆಗಿ ಕಾಣುತ್ತಾರೆ. ಹಾಗಾದರೆ, ನಿಮ್ಮ ಚರ್ಮಕ್ಕೆ ಯಾವ ಬಣ್ಣಗಳು ಹೆಚ್ಚು ಹೊಂದಬಹುದು? ಬಟ್ಟೆಯನ್ನು ತೆಗೆದುಕೊಳ್ಳುವಾಗ ಯಾವಾಗಲೂ ಆ ಬಟ್ಟೆಯ ಮೇಲೆ ನಮ್ಮ ಕೈಯನ್ನು ಇಟ್ಟಾಗ ನಮ್ಮ ಬಣ್ಣ ಬದಲಾಗುತ್ತದೆ ಅದನ್ನು ಕೂಡಾ ಒಮ್ಮೆ ಪರಿಶೀಲಿಸಬೇಕು.
ತಿಳಿ ಚರ್ಮದವರಿಗೆ ಪ್ರತಿಯೊಂದು ಬಣ್ಣವೂ ಚೆನ್ನಾಗಿ ಕಾಣುತ್ತದೆ ಎಂಬುದು ಸಾಮಾನ್ಯವಾಗಿ ಇರುವ ಅಭಿಪ್ರಾಯ. ಆದರೆ, ಬಣ್ಣದ ಶೇಡ್ ಮುಖ್ಯವಾಗುತ್ತದೆ. ಪೀಚ್, ಲ್ಯಾವೆಂಡರ್, ಸಾಫ್ಟ್ ಪಿಂಕ್, ಸ್ಕೈ ಬ್ಲೂನಂತಹ ಮೃದುವಾದ ಬಣ್ಣಗಳು ಮುಖಕ್ಕೆ ಸಾಫ್ಟ್ ಲುಕ್ ನೀಡಬಹುದು. ಅದೇ ಸಮಯದಲ್ಲಿ ನೆವಿ ಬ್ಲೂ, ಬರ್ಗಂಡಿ, ಡೀಪ್ ಗ್ರೀನ್‌ನಂತಹ ಗಾಢ ಬಣ್ಣಗಳು ಮುಖದ ಜೊತೆ ಉತ್ತಮ ಕಾಂಟ್ರಾಸ್ಟ್ ಸೃಷ್ಟಿಸಬಹುದು. ಪಾರ್ಟಿ ಅಥವಾ ವಿಶೇಷ ಸಂದರ್ಭಕ್ಕೆ ಇಂತಹ ಶೇಡ್‌ಗಳು ಇನ್ನಷ್ಟು ಎದ್ದು ಕಾಣಬಹುದು.
ಗೋಧಿ ಬಣ್ಣದ ಸ್ಕಿನ್ ಟೋನ್ ಹೊಂದಿರುವವರಿಗೆ ವಾರ್ಮ್ ಮತ್ತು ರಿಚ್ ಶೇಡ್‌ಗಳು ಸಾಮಾನ್ಯವಾಗಿ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಮರೂನ್, ರಸ್ಟ್, ಆಲಿವ್ ಗ್ರೀನ್, ಟೀಲ್, ಮಸ್ಟರ್ಡ್, ರಾಯಲ್ ಬ್ಲೂ ಮುಂತಾದ ಬಣ್ಣಗಳನ್ನು ಪ್ರಯತ್ನಿಸಬಹುದು. ವಿಶೇಷವಾಗಿ ಮುಖದ ಬಳಿ ಧರಿಸುವ ಬಟ್ಟೆ ಆಯ್ಕೆ ಮಾಡುವಾಗ ಬಣ್ಣವು ಮುಖವನ್ನು ಮಂಕಾಗಿ ತೋರಿಸುತ್ತಿದೆಯೇ ಅಥವಾ ಫ್ರೆಶ್ ಆಗಿ ಕಾಣಿಸುತ್ತಿದೆಯೇ ಎಂಬುದನ್ನು ಗಮನಿಸುವುದು ಮುಖ್ಯ.
ಡಾರ್ಕ್ ಸ್ಕಿನ್ ಟೋನ್ ಮೇಲೆ ಕಾಂಟ್ರಾಸ್ಟ್ ನೀಡುವ ಬಣ್ಣಗಳು ಲುಕ್ ಅನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡಬಹುದು. ವೈಟ್, ರಾಯಲ್ ಬ್ಲೂ, ಎಮರಾಲ್ಡ್ ಗ್ರೀನ್, ಪರ್ಪಲ್, ಕೋರಲ್ ಮತ್ತು ಬ್ರೈಟ್ ಆರೆಂಜ್‌ನಂತಹ ಬಣ್ಣಗಳು ಉತ್ತಮ ಆಯ್ಕೆಯಾಗಬಹುದು. ಆದರೆ, ಡಾರ್ಕ್ ಸ್ಕಿನ್‌ಗೆ ಈ ಬಣ್ಣ ಮಾತ್ರ ಎಂಬ ನಿಯಮವೇನಿಲ್ಲ. ನಿಮಗೆ ಇಷ್ಟವಾಗುವ ಬಣ್ಣವನ್ನು ಸರಿಯಾದ ಶೇಡ್ ಮತ್ತು ಕಾಂಬಿನೇಷನ್‌ನಲ್ಲಿ ಧರಿಸುವುದೇ ಮುಖ್ಯ.
ಹೊಸ ಡ್ರೆಸ್ ಖರೀದಿಸುವಾಗ ಕೇವಲ ಬಟ್ಟೆಯನ್ನು ನೋಡಿ ನಿರ್ಧಾರ ಮಾಡಬೇಡಿ. ಅದನ್ನು ಮುಖದ ಹತ್ತಿರ ಹಿಡಿದು ಕನ್ನಡಿಯಲ್ಲಿ ನೋಡಿ. ಆ ಬಣ್ಣದಿಂದ ಮುಖ ಹೆಚ್ಚು ಫ್ರೆಶ್ ಆಗಿ ಕಾಣುತ್ತಿದೆಯೇ, ಕಣ್ಣುಗಳು ಎದ್ದು ಕಾಣುತ್ತಿವೆಯೇ ಅಥವಾ ಮುಖ ಡಲ್ ಆಗಿ ಕಾಣುತ್ತಿದೆಯೇ ಎಂಬುದನ್ನು ಗಮನಿಸಿ. ಇನ್ನೊಂದು ಮುಖ್ಯ ವಿಚಾರವೆಂದರೆ ಸ್ಕಿನ್ ಟೋನ್ ಮಾತ್ರವಲ್ಲ, ನಾವು ಸೆಲೆಕ್ಟ್ ಮಾಡುವ ಬಟ್ಟೆಯ ಬಣ್ಣ ಮುಖ್ಯ, ನಾವೂ ಹೇಗೆ ಕಾಣುತ್ತೇ ಎಂಬುದು ಕೂಡಾ ಮುಖ್ಯ ಪಾತ್ರವಹಿಸುತ್ತದೆ. ಒಂದೇ ರೀತಿಯ ಚರ್ಮದ ಬಣ್ಣ ಹೊಂದಿರುವ ಇಬ್ಬರಿಗೆ ಒಂದೇ ಬಣ್ಣ ಒಂದೇ ರೀತಿ ಕಾಣಿಸಬೇಕೆಂದಿಲ್ಲ.
ಫ್ಯಾಷನ್‌ನಲ್ಲಿ ಪ್ರತಿವರ್ಷ ಹೊಸ ಬಣ್ಣಗಳು ಟ್ರೆಂಡ್‌ಗೆ ಬರುತ್ತವೆ. ಆದರೆ ಟ್ರೆಂಡ್‌ನಲ್ಲಿದೆ ಎಂಬ ಕಾರಣಕ್ಕೆ ಪ್ರತಿಯೊಂದು ಬಣ್ಣವನ್ನೂ ಧರಿಸಬೇಕೆಂದಿಲ್ಲ. ನಿಮ್ಮ ಚರ್ಮದ ಬಣ್ಣ, ಅಂಡರ್‌ಟೋನ್, ಕೂದಲಿನ ಬಣ್ಣ ಮತ್ತು ನೀವು ಧರಿಸುವ ಸಂದರ್ಭಕ್ಕೆ ಹೊಂದುವ ಶೇಡ್ ಆಯ್ಕೆ ಮಾಡಿದರೆ ಸರಳ ಡ್ರೆಸ್ ಕೂಡ ಹೆಚ್ಚು ಎಲಿಗಂಟ್ ಆಗಿ ಕಾಣಬಹುದು.
ಹೀಗಾಗಿ ಮುಂದಿನ ಬಾರಿ ಶಾಪಿಂಗ್‌ಗೆ ಹೋದಾಗ ಈ ಡ್ರೆಸ್ ಚೆನ್ನಾಗಿದೆಯಾ? ಎನ್ನುವುದರ ಜೊತೆಗೆ, ಈ ಬಣ್ಣ ನನ್ನ ಮೇಲೆ ಹೇಗೆ ಕಾಣುತ್ತದೆ? ಅನ್ನುವುದನ್ನೂ ಒಮ್ಮೆ ಕನ್ನಡಿಯಲ್ಲಿ ನೋಡಿ. ಕೆಲವೊಮ್ಮೆ ದುಬಾರಿ ಬಟ್ಟೆಗಿಂತ ಸರಿಯಾದ ಬಣ್ಣದ ಆಯ್ಕೆಯೇ ನಿಮ್ಮ ಲುಕ್‌ನ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು, (ಏಜೆನ್ಸೀಸ್).