ಲೈಫ್‌ಸ್ಟೈಲ್

ದಪ್ಪ ಹಾಗೂ ಉದ್ದವಾದ ಕೂದಲನ್ನು ಹೊಂದಲು ಪ್ರತಿನಿತ್ಯ ಈ ಆಹಾರಗಳನ್ನು ಸೇವಿಸಿ! Hair growth

Hair growth: ಉದ್ದ ಮತ್ತು ಕಪ್ಪು ಕೂದಲು ಯಾರಿಗೆ ತಾನೇ ಬೇಡ ಹೇಳಿ! ಪ್ರತಿಯೊಬ್ಬ ಹುಡುಗಿಯೂ ತನ್ನ ಸೊಂಟದವರೆಗೂ ಉದ್ದ ಕೂದಲು ಇರಬೇಕೆಂದು ಬಯಸುತ್ತಾರೆ. ಆದಾಗ್ಯೂ, ನಮ್ಮ ದೈನಂದಿನ ಜೀವನದಲ್ಲಿ ಉದ್ದವಾದ ಕೂದಲನ್ನು ಬೆಳೆಸುವುದು ಬಹಳ ಕಷ್ಟವಾದಂತಹ ಕೆಲಸ. ಇದಕ್ಕಾಗಿ ಜನರು ದುಬಾರಿ ಶಾಂಪೂಗಳು, ಎಣ್ಣೆಗಳು ಹಾಗೂ ಕಂಡೀಷನರ್​ಗಳ ಕಡೆ ಮುಖಮಾಡಿರುತ್ತಾರೆ. ಇವುಗಳು ಕೆಲವೊಮ್ಮೆ ಪರಿಹಾರ ನೀಡಿದರೂ, ಇನ್ನೂ ಕೆಲವೊಮ್ಮೆ ನೀಡದೇ ಇರಬಹುದು. ಹಾಗಾಗಿ ನಿಮ್ಮ ಕೂದಲಿನ ಆರೈಕೆಯಲ್ಲಿ ಈ ರೀತಿಯ ವಸ್ತುಗಳನ್ನು ಬಳಕೆ ಮಾಡಿ. ಇದು ನಿಮ್ಮ ಕೂದಲನ್ನು ಸದೃಢವಾಗಿ ಬೆಳೆಸಲು ಸಹಾಯ ಮಾಡುತ್ತದೆ.

1. ಕರಿಬೇವು

ಕರಿಬೇವು ಎಲೆಗಳನ್ನು ಆಹಾರದ ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲದೇ, ಕೂದಲಿಗೆ ಸಹ ತುಂಬಾ ಪ್ರಯೋಜನಕಾರಿ ಎಂದು ತಿಳಿದುಬಂದಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15-20 ಕರಿಬೇವು ಎಲೆಗಳನ್ನು ಅಗಿದು ತಿನ್ನುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಹಾಗೆಯೇ ಇದು ನೈಸರ್ಗಿಕ ಹೊಳಪನ್ನು ನೀಡುತ್ತದೆ. ಕರಿಬೇವು ವಿಟಮಿನ್​ ಎ ಮತ್ತು ಆಕ್ಸಿಡೇಟಿವ್​ ಗುಣಗಳನ್ನು ಹೊಂದಿರುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡಿ ದಪ್ಪವಾದ ಕೂದಲನ್ನು ಬೆಳೆಯುವಂತೆ ಮಾಡುತ್ತದೆ.

2. ನೆನೆಸಿದ ಬಾದಾಮಿ

ರಾತ್ರಿಯಿಡೀ ನೆನಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಮಾತ್ರವಲ್ಲದೇ, ಕೂದಲಿಗೂ ಪ್ರಯೋಜನ ಎಂದು ತಿಳಿದುಬಂದಿದೆ. ಇದು ಬಯೋಟಿನ್​ ಮತ್ತು ವಿಟಮಿನ್​ ಇ ಗಳಿಂದ ಸಮೃದ್ಧಿಯಾಗಿದ್ದು, ಕೂದಲನ್ನು ಬಲಶಾಲಿಯಾಗಿರುವಂತೆ ತಡೆಯುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 4 ನೆನಸಿದ ಬಾದಾಮಿಯನ್ನು ತಿನ್ನುವುದರಿಂದ ಇದು ಕೂದಲಿನ ನೈಸರ್ಗಿಕ ಬೆಳವಣಿಗೆಯನ್ನು ಸುಧಾರಿಸುತ್ತದೆ.

3. ಅರಿಶಿಣ

ಅರಿಶಿಣವನ್ನು ನೈಸರ್ಗಿಕವಾದ ಔಷಧಿ ಎಂದು ಕರೆಯುತ್ತಾರೆ. ಇದು ಚರ್ಮಕ್ಕೆ ಮಾತ್ರವಲ್ಲದೇ, ಕೂದಲಿನ ಆರೋಗ್ಯಕ್ಕೂ ಮುಖ್ಯ ಎಂದು ಕರೆಯಲಾಗಿದೆ. ಇದರ ನಿಯಮಿತ ಸೇವನೆಯು ನೆತ್ತಿಯನ್ನು ನಿರ್ವಿಷಗೊಳಿಸಿ ಕೂದಲನ್ನು ಬಲಪಡಿಸುತ್ತದೆ. ಹಾಗೆಯೇ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಅರಿಶಿಣವು ಕೂದಲಿನ ಬೇರುಗಳನ್ನು ಪೋಷಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಂಬಲಾಗಿದೆ.

4. ಮೆಂತ್ಯ ಬೀಜಗಳು

ಮೆಂತ್ಯೆ ಬೀಜಗಳನ್ನು ರಾತ್ರಿಯಿಡೀ ನೆನಸಿಟ್ಟು ತಿನ್ನುವುದರಿಂದ ತಲೆಹೊಟ್ಟನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪ್ರೊಟೀನ್​ ಹಾಗೂ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಕೂದಲಿನ ಬೇರುಗಳನ್ನು ಬಲಶಾಲಿ ಪಡಿಸುವುದಲ್ಲದೇ, ಕೂದಲನ್ನು ಹೊಳೆಯುವಂತೆ ಮಾಡಿ ಉದುರುವುದನ್ನು ಕಡಿಮೆ ಮಾಡುತ್ತದೆ.

5. ನಿಂಬೆ ನೀರು

ನಿಂಬೆಹಣ್ಣಿನಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು ಎಂದು ತಿಳಿದುಬಂದಿದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯದಲ್ಲಿ ಉತ್ತಮ ಕೆಲಸವನ್ನು ಮಾಡುತ್ತದೆ. ಹಾಗೆಯೇ ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿನೊಂದಿಗೆ ನಿಂಬೆ ರಸವನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಇದು ಕೂದಲನ್ನು ಪೋಷಿಸುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.