

ವಿಜಯಪುರ: ‘ಯಾವುದೇ ಚರ್ಚೆ, ಪ್ರಕಟಣೆ ಇಲ್ಲದೆ, ಜನರ ಗಮನಕ್ಕೆ ತಾರದೆ ಮಹಾನಗರ ಪಾಲಿಕೆಯ ವಿಸ್ತರಿಸಿರುವ ಕ್ರಮ ಖಂಡನೀಯ. ಇದರ ಹಿಂದೆ ‘ರಿಯಲ್ ಎಸ್ಟೇಟ್ ದಂಧೆ’ ಅಭಿವೃದ್ಧಿ ಪಡಿಸುವ ಸಂದೇಹ ಎದ್ದು ಕಾಣುತ್ತಿದೆ ಎಂದು ಮಾಜಿ ಕಾರ್ಪೋರೇಟರ್ ರವೀಂದ್ರ ಲೋಣಿ ಹೇಳಿದರು.
ಮಹಾನಗರ ಪಾಲಿಕೆಯ ವ್ಯಾಪ್ತಿ ವಿಸ್ತರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಫೋಟೋ ಇರುವ ಮಾಹಿತಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು ಸಹ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಇಂಥ ಮಹತ್ವದ ನಿರ್ಧಾರದ ಕುರಿತು ಸ್ಪಷ್ಟತೆ ಇಲ್ಲದಿರುವುದು ಮತ್ತು ಕ್ಯಾಬಿನೆಟ್‌ನಲ್ಲಿ ಚರ್ಚೆಯಾದ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳದಿರುವುದು ಸಂಶಯಕ್ಕೆಡೆ ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ನನಗಿರುವ ಮಾಹಿತಿ ಪ್ರಕಾರ 1995ರಲ್ಲಿ ಮಹಾನಗರ ಪಾಲಿಕೆಯ ವ್ಯಾಪ್ತಿ ವಿಸ್ತರಣೆಯಾಗಿತ್ತು. ಅದಾದ ಬಳಿಕ ಸುದೀರ್ಘ 30 ವರ್ಷಗಳ ನಂತರ ಇದೀಗ ವ್ಯಾಪ್ತಿ ವಿಸ್ತರಿಸಲಾಗಿದೆ’ ಎಂದ ಲೋಣಿ ಅವರು, ಮಹಾನಗರ ಪಾಲಿಕೆಯನ್ನು ಅಭಿವೃದ್ಧಿ ದೃಷ್ಠಿಯಿಂದ ವ್ಯಾಪ್ತಿ ವಿಸ್ತರಿಸುವುದಕ್ಕೆ ತಮ್ಮ ವಿರೋಧ ಇಲ್ಲ. ಆದರೆ, ಏಕಾಏಕಿ ಯಾವುದೇ ಸಭೆ ನಡೆಸದೇ, ಚರ್ಚಿಸದೇ ದಿಢೀರ್ ನಿರ್ಧಾರ ಕೈಗೊಂಡಿರುವುದರ ಹಿಂದೆ ರೀಯಲ್ ಎಸ್ಟೇಟ್ ದಂಧೆಕೋರರ ಕೈವಾಡ ಎದ್ದು ಕಾಣುತ್ತಿದೆ. ಇದೊಂದು ಆತುರದ ನಿರ್ಧಾರ. ಸದ್ಯ ಆಗಿರುವ ನಿರ್ಧಾರ ಅಸ್ಪಷ್ಟವಾಗಿದ್ದು, ಇದನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದರು.
ವಿಜಯಪುರ ಮಹಾನಗರ ಸುತ್ತಲಿನ ಹಳ್ಳಿಗಳನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಇನ್ನು ಕೆಲವೆಡೆ ಕೇವಲ ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದಿದ್ದರೆ ಇನ್ನೂ ಕೆಲವು ಕಡೆ ಕೆಲವೇ ಕೆಲವು ಸರ್ವೆ ನಂಬರ್‌ಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಮಾಹಿತಿ ಇದೆ. ಈ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ ಪ್ರತಿ ಹತ್ತು ವರ್ಷಕ್ಕೊಮ್ಮೆ ಯೋಜನೆ ರೂಪಿಸಬೇಕು. ನೀಲಿನಕ್ಷೆ ಸಿದ್ಧಪಡಿಸಿ, ಬಡಾವಣೆ ಅಭಿವೃದ್ಧಿ ಪಡಿಸಬೇಕು. ಬಳಿಕ ಮಹಾನಗರ ಪಾಲಿಕೆ ಅದರ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಆದರೆ ಮೊದಲಿನ ಪಾಲಿಕೆ ವ್ಯಾಪ್ತಿಯೇ ಎಲ್ಲಿಯವರೆಗೆ ಇದೆ ಎಂಬ ಮಾಹಿತಿ ಬಹುತೇಕರಿಗೆ ಗೊತ್ತಿಲ್ಲ. ಈ ಮಧ್ಯೆ ಅನಧಿಕೃತ ಬಡಾವಣೆಗಳ ಸಂಖ್ಯೆ ಹೆಚ್ಚಾಗಿದೆ. ಇಂಥದರಲ್ಲಿ ಪಾಲಿಕೆ ವ್ಯಾಪ್ತಿ ವಿಸ್ತರಿಸಿ ಮೂಲ ಸೌಕರ್ಯ ಕೊಡದ ಸ್ಥಿತಿ ನಿರ್ಮಾಣವಾಗಬಾರದು, ಭೂಮಿ ಬೆಲೆ ಹೆಚ್ಚಿಸುವ ಉದ್ದೇಶದಿಂದ ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಹೊರೆ ಮಾಡಬಾರದು. ಸಚಿವರು ಅಧಿಕಾರಿಗಳು ಹಾಗೂ ಜನರ ಸಭೆ ಕರೆದು ಚರ್ಚಿಸಿ, ಸಂಪೂರ್ಣ ಮಾಹಿತಿ ಕೊಟ್ಟು ನಂತರ ವಿಸ್ತರಿಸಬೇಕು ಎಂದರು.
ಸದ್ಯ ವಿಜಯಪುರ ನಗರ ಅಭಿವೃದ್ಧಿ ವಂಚಿತಗೊಂಡಿದೆ. ನಗರದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಈ ಹಿಂದೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಕೂಡಲೇ ಯುಜಿಡಿ, ನಗರೋತ್ಥಾನ್, ಎಸ್‌ಎಫ್‌ಸಿ ಫಂಡ್ ಮತ್ತಿತರ ಯೋಜನೆಗಳು ಸುವರ್ಣಯುಗ ತಂದವು. ಆದರೆ ಮಾಸ್ಟರ್ ಪ್ಲ್ಯಾನ್ ಕಾಮಗಾರಿ ವೈಜ್ಞಾನಿಕವಾಗಿ ಆಗಲಿಲ್ಲ. ಪಾಲಿಕೆಯ 30 ಕೋಟಿ ಅನುದಾನ ಸಹ ಮಾಸ್ಟರ್ ಪ್ಲಾೃನ್‌ಗೆ ಬಳಸಿಕೊಂಡರೂ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಳ್ಳಲಿಲ್ಲ. ಕೋಟೆಗೋಡೆಯಾಚೆ ವಿಜಯಪುರ ಸಾಕಷ್ಟು ಬೆಳೆದಿದೆ. ಅರ್ಧಕ್ಕಿಂತ ಹೆಚ್ಚುನ ಜನಸಂಖ್ಯೆ ವಿಸ್ತೃತ ನಗರ ಪ್ರದೇಶದಲ್ಲಿದೆ. ಆದರೆ ಅಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಕೋಟೆಗೋಡೆ ಕಂದಕ ಸ್ವಚ್ಛವಾಗಿಲ್ಲ. ಸಂಚಾರಿ ಸಮಸ್ಯೆ ಹೆಚ್ಚಾಗಿದೆ. ಹಬ್ಬಗಳಲ್ಲಿ ಕಿಮೀಗಟ್ಟಲೇ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಮೊದಲು ವಿಜಯಪುರ ನಗರವನ್ನು ಅಭಿವೃದ್ಧಿ ಪಡಿಸಿ. ನಂತರ ವ್ಯಾಪ್ತಿ ಹೆಚ್ಚಿಸಲು ಅನುಕೂಲವಾಗಲಿದೆ ಎಂದರು.