Moonquake : ರಾತ್ರಿ ಆಕಾಶದಲ್ಲಿ ತಂಪಾಗಿ ಹೊಳೆಯುವ ಚಂದ್ರನನ್ನು ನೋಡಿದಾಗ ಅದು ಸಂಪೂರ್ಣ ಶಾಂತವಾಗಿರುವಂತೆ ಕಾಣುತ್ತದೆ. ಅಲ್ಲಿ ಗಾಳಿಯಿಲ್ಲ, ಮಳೆಯಿಲ್ಲ, ಭೂಮಿಯಂತೆ ಜೀವಜಗತ್ತಿನ ಚಟುವಟಿಕೆಗಳೂ ಇಲ್ಲ. ಆದರೆ ಈ ನಿಶ್ಶಬ್ದ ಚಂದ್ರನ ಒಳಗಡೆಯೇ ಆಗಾಗ ಭೂಮಿ ಕಂಪಿಸುವಂತಹ ವಿದ್ಯಮಾನಗಳು ನಡೆಯುತ್ತವೆ ಎಂದರೆ ನಂಬುತ್ತೀರಾ? ಹೌದು, ಭೂಮಿಯಲ್ಲಿ ಸಂಭವಿಸುವ ಭೂಕಂಪಗಳಂತೆಯೇ ಚಂದ್ರನ ಮೇಲೂ ಕಂಪನಗಳು ಉಂಟಾಗುತ್ತವೆ. ಅಚ್ಚರಿಯ ಸಂಗತಿಯೆಂದರೆ, ಕೆಲವು ಚಂದ್ರಕಂಪನಗಳು 10 ನಿಮಿಷಕ್ಕೂ ಹೆಚ್ಚು ಕಾಲ ಮುಂದುವರಿಯುತ್ತವೆ. ಈ ವಿಚಿತ್ರ ವಿದ್ಯಮಾನವನ್ನು ವಿಜ್ಞಾನಿಗಳು 'ಮೂನ್ಕ್ವೇಕ್' ಎಂದು ಕರೆಯುತ್ತಾರೆ. ಹಾಗಾದರೆ ಚಂದ್ರನ ಮೇಲೆ ಭೂಕಂಪ ಉಂಟಾಗಲು ಕಾರಣವೇನು? ಭೂಮಿಗಿಂತ ಚಂದ್ರನ ಭೂಕಂಪ ಹೇಗೆ ಭಿನ್ನವಾಗಿದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.
1969ರಲ್ಲಿ ಅಮೆರಿಕದ ನಾಸಾ ಕೈಗೊಂಡ ಅಪೋಲೋ 11 ಬಾಹ್ಯಾಕಾಶ ಯಾತ್ರೆ ಚಂದ್ರನ ಅಧ್ಯಯನದಲ್ಲಿ ಮಹತ್ವದ ಮೈಲಿಗಲ್ಲಾಯಿತು. ಈ ಯಾತ್ರೆಯ ಸಂದರ್ಭದಲ್ಲಿ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ಭೂಕಂಪ ಮಾಪಕವನ್ನು ಅಳವಡಿಸಿದರು. ಈ ಉಪಕರಣ ಚಂದ್ರನ ಮೇಲ್ಮೈಯಲ್ಲಿನ ಕಂಪನಗಳನ್ನು ದಾಖಲಿಸಲು ಆರಂಭಿಸಿತು. ನಂತರ ಅಪೋಲೋ 12, 14, 15 ಮತ್ತು 16 ಯಾತ್ರೆಗಳಲ್ಲೂ ಇಂತಹ ಉಪಕರಣಗಳನ್ನು ಅಳವಡಿಸಲಾಯಿತು. ಇವುಗಳಿಂದ ಭೂಮಿಗೆ ಬಂದ ಮಾಹಿತಿಯನ್ನು ಅಧ್ಯಯನ ಮಾಡಿದ ವಿಜ್ಞಾನಿಗಳಿಗೆ ಚಂದ್ರನಲ್ಲೂ ವಿವಿಧ ರೀತಿಯ ಭೂಕಂಪಗಳು ಸಂಭವಿಸುತ್ತವೆ ಎಂಬುದು ತಿಳಿಯಿತು.
ಭೂಮಿಯಲ್ಲಿ ಭೂಕಂಪಗಳು ಹೆಚ್ಚಾಗಿ ಭೂಫಲಕಗಳ ಚಲನೆಯಿಂದ ಸಂಭವಿಸುತ್ತವೆ. ಆದರೆ ಚಂದ್ರನಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ಚಂದ್ರನಲ್ಲಿನ ಕಂಪನಗಳಿಗೆ ಹಲವು ಕಾರಣಗಳಿವೆ. ಭೂಮಿಯ ಗುರುತ್ವಾಕರ್ಷಣ ಶಕ್ತಿಯು ಚಂದ್ರನ ಒಳಭಾಗದ ಮೇಲೆ ಬೀರುವ ಪ್ರಭಾವದಿಂದ ಆಳವಾದ ಕಂಪನಗಳು ಉಂಟಾಗುತ್ತವೆ. ಇದರ ಜೊತೆಗೆ ಚಂದ್ರನ ಒಳಭಾಗ ತಣ್ಣಗಾಗುತ್ತಾ ನಿಧಾನವಾಗಿ ಕುಗ್ಗುತ್ತಿರುವುದರಿಂದ ಮೇಲ್ಮೈಯಲ್ಲಿ ಬಿರುಕುಗಳು ಉಂಟಾಗುತ್ತವೆ. ಈ ಬಿರುಕುಗಳಲ್ಲಿನ ಬಂಡೆಗಳು ಹಠಾತ್ತನೆ ಚಲಿಸಿದಾಗಲೂ ಭೂಕಂಪ ಸಂಭವಿಸುತ್ತದೆ.
ಚಂದ್ರನ ಮೇಲ್ಮೈಯ ಸಮೀಪ ಸಂಭವಿಸುವ ಕೆಲವು ಕಂಪನಗಳು ವಿಜ್ಞಾನಿಗಳ ಗಮನ ಸೆಳೆದಿವೆ. ಅಪೋಲೋ ಯಾತ್ರೆಗಳ ಸಂದರ್ಭದಲ್ಲಿ ದಾಖಲಾದ ಕೆಲವು ಮೇಲ್ಮೈ ಸಮೀಪದ ಚಂದ್ರಕಂಪನಗಳು 5.5ರಷ್ಟು ತೀವ್ರತೆಯನ್ನು ಹೊಂದಿದ್ದವು. ಇವು ಸಾಮಾನ್ಯ ಕಂಪನಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದವು. ಚಂದ್ರನ ಒಳಭಾಗ ತಣ್ಣಗಾಗುವುದರಿಂದ ಉಂಟಾಗುವ ಒತ್ತಡ ಮತ್ತು ಬಂಡೆಗಳ ಚಲನೆ ಇಂತಹ ಕಂಪನಗಳಿಗೆ ಕಾರಣವಾಗಬಹುದು ಎಂದು ವಿಜ್ಞಾನಿಗಳು ವಿವರಿಸುತ್ತಾರೆ.
ಚಂದ್ರನ ಭೂಕಂಪಗಳಲ್ಲಿನ ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ ಅವುಗಳ ಅವಧಿ. ಭೂಮಿಯಲ್ಲಿ ಭೂಕಂಪ ಸಂಭವಿಸಿದಾಗ ಕಂಪನಗಳು ಸಾಮಾನ್ಯವಾಗಿ ಕೆಲವೇ ಸೆಕೆಂಡ್ಗಳಿಂದ ನಿಮಿಷಗಳವರೆಗೆ ಇರುತ್ತವೆ. ಆದರೆ ಚಂದ್ರನಲ್ಲಿ ಕೆಲವು ಕಂಪನಗಳು 10 ನಿಮಿಷಕ್ಕೂ ಹೆಚ್ಚು ಕಾಲ ಮುಂದುವರಿಯುತ್ತವೆ. ಇದಕ್ಕೆ ಚಂದ್ರನ ಮೇಲ್ಮೈಯಲ್ಲಿನ ಒಣ, ಬಿರುಕುಗಳಿಂದ ಕೂಡಿದ ಬಂಡೆಗಳ ರಚನೆಯೂ ಒಂದು ಕಾರಣ. ಭೂಮಿಯಲ್ಲಿನ ನೀರು ಮತ್ತು ಹವಾಮಾನದಿಂದ ಉಂಟಾಗುವ ಸವೆತದ ಪ್ರಕ್ರಿಯೆಗಳು ಚಂದ್ರನಲ್ಲಿ ಬಹಳ ಕಡಿಮೆ. ಹೀಗಾಗಿ ಕಂಪನದ ಶಕ್ತಿ ನಿಧಾನವಾಗಿ ಕಡಿಮೆಯಾಗುತ್ತದೆ, (ಏಜೆನ್ಸೀಸ್)