Little Pocket: ನಾವು ಪ್ರತಿದಿನ ಬಳಸುವ ಬಟ್ಟೆಗಳಲ್ಲೂ ನಮಗೇ ಗೊತ್ತಿರದ ಹಲವು ಇಂಟ್ರೆಸ್ಟಿಂಗ್ ಹಾಗೂ ಹುಬ್ಬೇರಿಸುವಂತ ಸ್ಟೋರಿಗಳು ಅಡಗಿರುತ್ತವೆ. ಈ ಸಾಲಿನಲ್ಲಿ ಇಂದಿನ ಯುವಜನತೆ ಹೆಚ್ಚಾಗಿ ಬಳಸುವ ಜೀನ್ಸ್ ಪ್ಯಾಂಟ್ಗಳಲ್ಲಿಯೂ ಒಂದು ಸಖತ್ ಕುತೂಹಲಕಾರಿಯ ಸಂಗತಿ ಅಡಗಿದೆ. ಅದೇನೆಂದರೆ, ಅದರಲ್ಲಿರುವ ಪುಟ್ಟದೊಂದು ಜೇಬು.
ಮುಂಭಾಗದಲ್ಲಿ ದೊಡ್ಡ ಜೇಬಿನ ಹಿಂದೆ ಒಂದು ಪುಟ್ಟ ಜೇಬನ್ನು ಬಹುತೇಕರು ನೋಡೇ ನೋಡಿರುತ್ತೀರಿ. ಕೆಲವರು ಅದರಲ್ಲಿ ನಾಣ್ಯ, ಕೀಲಿ ಅಥವಾ ಸಣ್ಣ ವಸ್ತುಗಳನ್ನು ಇಡುತ್ತಾರೆ. ಆದರೆ, ಈ ಪುಟ್ಟ ಜೇಬನ್ನು ಯಾಕೆ ವಿನ್ಯಾಸಗೊಳಿಸಲಾಯಿತು ಎಂಬ ಪ್ರಶ್ನೆ ಎಂದಾದರೂ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ? ಇದರ ಹಿಂದೆ 19ನೇ ಶತಮಾನದ ಆಸಕ್ತಿದಾಯಕ ಹಿಸ್ಟರಿಯಿದೆ.
ಅದುವೇ, ಒಂದು ಸಣ್ಣ ಚೈನ್ಗೆ ಜೋಡಿಸಲಾದ ಗಡಿಯಾರ. ಇದನ್ನು ಎಲ್ಲಿಯೂ ಬೀಳಿಸಿಕೊಳ್ಳದಂತೆ, ತಮ್ಮ ಜತೆಯಲ್ಲೇ ಕಾಪಾಡಿಕೊಳ್ಳಲು ಅಂದಿನ ಜನರು, ಆ ಪುಟ್ಟ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಇದರಲ್ಲಿ ಹಾಕಿಕೊಂಡರೆ ಅದು ಸುರಕ್ಷಿತವಾಗಿದೆ ಎಂಬುದು ಡಿಸೈನರ್ ಆಲೋಚನೆ ಆಗಿತ್ತು. ಅಂತೆಯೇ, ಇದು ಆ ಕಾಲಕ್ಕೆ ತುಂಬಾ ಉಪಯುಕ್ತವಾಗಿತ್ತು. ಕಾಲಕ್ರಮೇಣ ಜೀನ್ಸ್ ಪ್ಯಾಂಟ್‌ನ ಡಿಸೈನ್ ಬದಲಾದರೂ ಆ ಜೇಬು ಮಾತ್ರ ಇಂದಿಗೂ ಹಾಗೆಯೇ ಮುಂದವರಿದು ಬಂದಿದೆ.
1800ರ ದಶಕದಲ್ಲಿ ಪುರುಷರು ಕೈಗಡಿಯಾರದ ಬದಲಿಗೆ ಸರಪಳಿಗೆ ಜೋಡಿಸಲಾದ ಚಿಕ್ಕ ಗಡಿಯಾರಗಳನ್ನು ಬಳಸುತ್ತಿದ್ದರು. ವಿಶೇಷವಾಗಿ ಗಣಿಗಾರರು, ರೈತರು ಹಾಗೂ ಟಫ್ ಕೆಲಸಗಳಲ್ಲಿ ತೊಡಗಿದ್ದವರು ಈ ರೀತಿಯ ಗಡಿಯಾರಗಳನ್ನು ಇಟ್ಟುಕೊಳ್ಳುತ್ತಿದ್ದರು. ಕೆಲಸ ಮಾಡುವಾಗ ಗಡಿಯಾರ ಕೆಳಗೆ ಬಿದ್ದು ಹಾಳಾಗದಂತೆ ಸುರಕ್ಷಿತವಾಗಿಡಲು ಜೀನ್ಸ್ ಪ್ಯಾಂಟ್‌ನ ಮುಂಭಾಗದಲ್ಲಿ ಈ ಪುಟ್ಟ ಜೇಬನ್ನು ಡಿಸೈನ್ ಮಾಡಲಾಯಿತು ಎಂದು ವಿವರಿಸಲಾಗಿದೆ.
1873ರಲ್ಲಿ ಲೆವಿ ಸ್ಟ್ರಾಸ್ ಮತ್ತು ಜೇಕಬ್ ಡೇವಿಸ್ ಅವರು ಜೀನ್ಸ್ ಪ್ಯಾಂಟ್‌ಗಳ ಜೇಬು ಹಾಗೂ ಹೊಲಿಗೆಗಳು ಸುಲಭವಾಗಿ ಹರಿದುಹೋಗದಂತೆ ತಡೆಯಲು ತಾಮ್ರದ ರಿವೆಟ್‌ಗಳನ್ನು ಬಳಸುವ ವಿಧಾನಕ್ಕೆ ಪೇಟೆಂಟ್ ಪಡೆದರು. ಇದರಿಂದ ಜೀನ್ಸ್ ಹೆಚ್ಚು ಬಾಳಿಕೆ ಬರುವಂತಾಯಿತು. ಬಳಿಕ 1890ರ ದಶಕದಲ್ಲಿ ಈ ಪುಟ್ಟ ಜೇಬು ಜೀನ್ಸ್‌ನ ಸಾಮಾನ್ಯ ಡಿಸೈನ್ನ ಭಾಗವಾಗಿ ಗುರುತಿಸಿಕೊಂಡಿತು.
ಕಾಲಕ್ರಮೇಣ ಸರಪಳಿಗೆ ಜೋಡಿಸಲಾದ ಗಡಿಯಾರಗಳ ಕಣ್ಮರೆಯಾಗಿ, ಕೈಗಡಿಯಾರಗಳು ಹೆಚ್ಚು ಜನಪ್ರಿಯತೆಗೊಂಡಿತು. ಅಂತೆಯೇ, ಜೀನ್ಸ್‌ನ ಪುಟ್ಟ ಜೇಬಿನ ಮೂಲ ಉದ್ದೇಶವೂ ನಿಧಾನವಾಗಿ ಮರೆಯಾಯಿತು. ಆದರೂ, ಸಾಂಪ್ರದಾಯಿಕ ವಿನ್ಯಾಸದ ಭಾಗವಾಗಿ ಈ ಜೇಬು ಇಂದಿಗೂ ಮುಂದುವರಿದಿರುವುದು ನಿಜಕ್ಕೂ ಗಮನಾರ್ಹವೇ ಸರಿ.
ಜೀನ್ಸ್‌ನ ಈ ಪುಟ್ಟ ಜೇಬನ್ನು ಸಾಮಾನ್ಯವಾಗಿ ‘ಫಿಫ್ತ್ ಪಾಕೆಟ್’ ಅಥವಾ ಐದನೇ ಜೇಬು ಎಂದು ಕರೆಯಲಾಗುತ್ತದೆ. ಆದರೆ, ಆರಂಭಿಕ ಜೀನ್ಸ್ ವಿನ್ಯಾಸದಲ್ಲಿ ಮುಂಭಾಗದಲ್ಲಿ ಎರಡು ದೊಡ್ಡ ಜೇಬುಗಳು, ಒಂದು ಪುಟ್ಟ ಜೇಬು ಮತ್ತು ಹಿಂಭಾಗದಲ್ಲಿ ಒಂದು ಜೇಬು ಸೇರಿ ಒಟ್ಟು ನಾಲ್ಕು ಜೇಬುಗಳಿದ್ದವು. 1901ರಲ್ಲಿ ಹಿಂಭಾಗಕ್ಕೆ ಎರಡು ಜೇಬನ್ನು ಸೇರಿಸಲಾಯಿತು. ಹೀಗಾಗಿ, ಇದನ್ನು ಐದನೇ ಜೇಬು ಎಂದು ಪರಿಗಣಿಸಲಾಯಿತು.
ಅಲ್ಲಿಗೆ, ಜೀನ್ಸ್ ಪ್ಯಾಂಟಿನ ಒಂದು ಸಣ್ಣ ಹಾಗೂ ಸಾಮಾನ್ಯ ಜೇಬಿನ ಹಿಂದೆ ಒಂದು ಶತಮಾನಕ್ಕೂ ಹಳೆಯದಾದ ಇತಿಹಾಸವಿದೆ ಎಂಬುದೇ ರೋಚಕ. ಫ್ಯಾಷನ್ ಬದಲಾದರೂ ಕೆಲವು ವಿನ್ಯಾಸಗಳು ತಮ್ಮ ಮೂಲ ಉದ್ದೇಶವನ್ನು ಕಳೆದುಕೊಂಡ ಬಳಿಕವೂ ಹೇಗೆ ಉಳಿದುಕೊಳ್ಳುತ್ತಿವೆ ಎಂಬುದಕ್ಕೆ ಈ ಪುಟ್ಟ ಜೇಬೇ ಒಂದೊಳ್ಳೆ ಉದಾಹರಣೆ,(ಏಜೆನ್ಸೀಸ್).