ಕಡೆಗೂ ಮಾತು ಉಳಿಸಿಕೊಂಡ ಎಲಾನ್​ ಮಸ್ಕ್‌! ಪ್ರತಿ ಮಗುವಿಗೂ ಸ್ಪೇಸ್‌ಎಕ್ಸ್‌ನ 2 ಷೇರು ಫ್ರೀ | Space X Shares

Space X Shares
ಕಡೆಗೂ ಮಾತು ಉಳಿಸಿಕೊಂಡ ಎಲಾನ್​ ಮಸ್ಕ್‌! ಪ್ರತಿ ಮಗುವಿಗೂ ಸ್ಪೇಸ್‌ಎಕ್ಸ್‌ನ 2 ಷೇರು ಫ್ರೀ | Space X Shares
Published on: 

Space X Shares: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಈ ಹಿಂದೆಯೇ ನುಡಿದಂತೆ ಇದೀಗ ಅಮೆರಿಕ ಮಕ್ಕಳಿಗೆ ತಮ್ಮ ಒಡೆತನದ ಸ್ಪೇಸ್​ ಎಕ್ಸ್​ ಷೇರುಗಳನ್ನು ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ. ಈ ಕೊಡುಗೆಯ ಒಟ್ಟು ಮೌಲ್ಯ ಸುಮಾರು 18 ಬಿಲಿಯನ್ ಡಾಲರ್‌ (ಅಂದಾಜು 1.50 ಲಕ್ಷ ಕೋಟಿ ರೂಪಾಯಿ) ಆಗಲಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರತಿ ಮಗುವಿಗೆ 2 ಷೇರು

ಮಸ್ಕ್​ ಪ್ರಕಾರ, ಅಮೆರಿಕದ 18 ವರ್ಷದೊಳಗಿನ ಮಕ್ಕಳಿಗೆ ತಲಾ ಎರಡು ಸ್ಪೇಸ್‌ಎಕ್ಸ್ ಷೇರುಗಳು ಸಿಗಲಿವೆ. ಈ ಪೈಕಿ ಒಂದು ಹೊಸ ‘ಕ್ಲಾಸ್ ಎ’ ಷೇರನ್ನು ಸ್ಪೇಸ್‌ಎಕ್ಸ್ ನೀಡಲಿದ್ದು, ಮತ್ತೊಂದು ಷೇರನ್ನು ಮಸ್ಕ್ ತಮ್ಮ ವೈಯಕ್ತಿಕ ಪಾಲಿನಿಂದ ಕೊಡಲಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೆಸರಿನಡಿ ನಡೆಯುತ್ತಿರುವ 'ಟ್ರಂಪ್​ ಅಕೌಂಟ್'​ನಡಿ ಬರಲಿದೆ.

ಅಮೆರಿಕದ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಷೇರು ಮಾರುಕಟ್ಟೆಯ ಪರಿಚಯಿಸುವುದು ಮತ್ತು ಭವಿಷ್ಯದಲ್ಲಿ ಸಂಪತ್ತು ನಿರ್ಮಿಸಿಕೊಳ್ಳಲು ನೆರವಾಗುವುದು ‘ಟ್ರಂಪ್ ಅಕೌಂಟ್’ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಈಗಾಗಲೇ ಸುಮಾರು 7 ಕೋಟಿ ಖಾತೆಗಳನ್ನು ತೆರೆಯಲಾಗಿದೆ ಎಂದು ಶ್ವೇತಭವನ ತಿಳಿಸಿದೆ.

ಷೇರುಗಳ ವರ್ಗಾವಣೆ ಎಂದು?

ಮಸ್ಕ್ ನೀಡಿರುವ ಮಾಹಿತಿಯ ಪ್ರಕಾರ, ಸ್ಪೇಸ್‌ಎಕ್ಸ್‌ನಿಂದ ನೀಡಲಾಗುವ ಷೇರುಗಳನ್ನು ಮುಂದಿನ ತಿಂಗಳು ವರ್ಗಾಯಿಸಲಾಗುತ್ತದೆ. ಆದರೆ, ಮಸ್ಕ್ ಅವರ ವೈಯಕ್ತಿಕ ಪಾಲಿನಿಂದ ನೀಡಲಾಗುವ ಷೇರುಗಳು ಲಾಕ್‌ಅಪ್ ಅವಧಿ ಮುಗಿದ ಬಳಿಕ ಮುಂದಿನ ವರ್ಷದ ಜೂನ್‌ನಲ್ಲಿ ಮಕ್ಕಳಿಗೆ ತಲುಪಲಿವೆ ಎಂದು ಹೇಳಲಾಗಿದೆ.

Also Read
60 ಗಂಟೆಗಳ 26/11 ಮುಂಬೈ ದಾಳಿ! 18 ವರ್ಷಗಳಾದ್ರೂ ಕಸಬ್​ ಬಾಯ್ಬಿಟ್ಟ ಹೆಸರಿನ ವ್ಯಕ್ತಿ ಮಾತ್ರ ಇಂದಿಗೂ ಮಿಸ್ಸಿಂಗ್​
Space X Shares

ಎಐ ಲಾಭ ಜನರಿಗೆ ಹಂಚುವ ವಿಭಿನ್ನ ತಂತ್ರ!

ಸುಮಾರು 824 ಬಿಲಿಯನ್ ಡಾಲರ್ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ ಎನ್ನಲಾಗಿರುವ ಎಲಾನ್ ಮಸ್ಕ್, ಜೂನ್ ವೇಳೆಗೆ 6.42 ಬಿಲಿಯನ್ ಸ್ಪೇಸ್‌ಎಕ್ಸ್ ಷೇರುಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ. ಇತ್ತೀಚೆಗೆ ಸ್ಪೇಸ್‌ಎಕ್ಸ್ ಅಧ್ಯಕ್ಷೆ ಗ್ವಿನ್ ಶಾಟ್‌ವೆಲ್ ಮತ್ತು ಅವರ ಪತಿ ಕೂಡ 20 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತಲಾ ಒಂದು ಷೇರು ನೀಡುವುದಾಗಿ ಘೋಷಿಸಿದ್ದರು.

ಇನ್ನೊಂದೆಡೆ, ಎಐ ಕ್ಷೇತ್ರದ ಮತ್ತೊಂದು ಪ್ರಮುಖ ಕಂಪನಿಯಾದ ಆ್ಯಂಥ್ರೋಪಿಕ್ ತನ್ನ ಷೇರುಗಳ ಶೇ.5ರಷ್ಟು ಪಾಲನ್ನು ಸಾರ್ವಜನಿಕ ಹಿತಕ್ಕಾಗಿ ಮೀಸಲಿಟ್ಟ ವಿಶೇಷ ನಿಧಿಗೆ ನೀಡುವ ತಂತ್ರ ಅನುಸರಿಸಿದೆ ಎನ್ನಲಾಗಿದೆ. ಆದರೆ, ಮಸ್ಕ್ ನೇರವಾಗಿ ಮಕ್ಕಳಿಗೇ ಷೇರುಗಳನ್ನು ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಒಟ್ಟಾರೆ, ಅಮೆರಿಕದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮತ್ತು ಷೇರು ಮಾರುಕಟ್ಟೆಯ ಪರಿಚಯ ಮಾಡಿಸುವ ಈ ಘೋಷಣೆಯು ಜಾಗತಿಕ ಉದ್ಯಮ ವಲಯದಲ್ಲಿ ಭಾರಿ ಗಮನ ಸೆಳೆದಿದೆ,(ಏಜೆನ್ಸೀಸ್).