60 ಗಂಟೆಗಳ 26/11 ಮುಂಬೈ ದಾಳಿ! 18 ವರ್ಷಗಳಾದ್ರೂ ಕಸಬ್​ ಬಾಯ್ಬಿಟ್ಟ ಹೆಸರಿನ ವ್ಯಕ್ತಿ ಮಾತ್ರ ಇಂದಿಗೂ ಮಿಸ್ಸಿಂಗ್​

 26/11 Mumbai Attack
60 ಗಂಟೆಗಳ 26/11 ಮುಂಬೈ ದಾಳಿ! 18 ವರ್ಷಗಳಾದ್ರೂ ಕಸಬ್​ ಬಾಯ್ಬಿಟ್ಟ ಹೆಸರಿನ ವ್ಯಕ್ತಿ ಮಾತ್ರ ಇಂದಿಗೂ ಮಿಸ್ಸಿಂಗ್​
Published on: 

ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಮುಂಬೈ 2008ರ ನವೆಂಬರ್ 26ರ ರಾತ್ರಿ ತನ್ನ ಇತಿಹಾಸದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ 10 ಶಸ್ತ್ರಸಜ್ಜಿತ ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ, ಸುಮಾರು 60 ಗಂಟೆಗಳ ಕಾಲ ಇಡೀ ನಗರವನ್ನು ಒತ್ತೆಯಾಳಾಗಿಸಿಕೊಂಡಿದ್ದರು. ಈ ಘೋರ ಘಟನೆ ನೆನಪಾದಗಲೆಲ್ಲ ಭಾರತೀಯ ರಕ್ತ ಕುದಿಯುತ್ತೆ. ಆದ್ರೆ, ಅಂದು ಉಗ್ರ ಕಸಬ್ ಬಾಯ್ಬಿಟ್ಟ ಹೆಸರಿನ ಓರ್ವ ಪಾಕ್​ ಅಧಿಕಾರಿ ಮಾತ್ರ ಇಂದಿಗೂ ಮಿಸ್ಟರಿ ಆಗಿಯೇ ಉಳಿದಿದ್ದಾನೆ. ​

‘26/11’ ಎಂದೇ ಕರೆಯಲ್ಪಡುವ ಈ ಘಟನೆ ಕೇವಲ ಮುಂಬೈ ಮೇಲಿನ ದಾಳಿಯಾಗಿರಲಿಲ್ಲ, ಅದು ಭಾರತದ ಸಾರ್ವಭೌಮತ್ವ ಮತ್ತು ಆಂತರಿಕ ಭದ್ರತಾ ವ್ಯವಸ್ಥೆಗೆ ಎದುರಾದ ಬಹುದೊಡ್ಡ ಸವಾಲಾಗಿತ್ತು ಎಂಬುದರಲ್ಲಿ ಅನುಮಾನವೇ ಬೇಡ. ಮುಂಬೈ ಮೇಲೆ ನಡೆದ ಆ ಭೀಕರ ಭಯೋತ್ಪಾದಕ ದಾಳಿಗೆ ಇಂದಿಗೆ 18 ವರ್ಷ ಆಗಿದೆ. 60 ಗಂಟೆಗಳ ಕಾಲ ದೇಶದ ವಾಣಿಜ್ಯ ರಾಜಧಾನಿಯನ್ನು ಬೆಚ್ಚಿಬೀಳಿಸಿದ್ದ ಆ ದಾಳಿಯಲ್ಲಿ 170ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಮಾಯಕರ ಜೀವ ಬಲಿ ಪಡೆದ ಕ್ರೂರಿಗಳ ಹೇಡಿ ಕೃತ್ಯ ಕಳೆದು 18 ವರ್ಷಗಳೇ ಕಳೆದಿದ್ದರೂ ಆ ದಾಳಿಯ ಹಿಂದಿನ ಕೆಲವು ವ್ಯಕ್ತಿಗಳ ಗುರುತು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಅಂಥವರ ಪೈಕಿ ಪ್ರಮುಖ ಹೆಸರು ‘ಮೇಜರ್ ಜನರಲ್ ಸಾಹೇಬ್’!

ಕಸಬ್ ಬಾಯ್ಬಿಟ್ಟಿದ್ದ ಆ ನಿಗೂಢ ಹೆಸರು

ಮುಂಬೈ ದಾಳಿ ಪ್ರಕರಣದಲ್ಲಿ ಸೆರೆಸಿಕ್ಕಿದ್ದ ಏಕೈಕ ಜೀವಂತ ಉಗ್ರ ಅಜ್ಮಲ್ ಕಸಬ್. ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಪಾಕಿಸ್ತಾನದ ಸೇನೆ ಮತ್ತು ಲಷ್ಕರ್-ಎ-ತೊಯ್ಬಾ ನಡುವಿನ ಸಂಪರ್ಕದ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದ. ಆತ ಪದೇ ಪದೇ ಉಲ್ಲೇಖಿಸಿದ್ದ ವ್ಯಕ್ತಿಯೊಬ್ಬನನ್ನು ಕೇವಲ ‘ಮೇಜರ್ ಜನರಲ್ ಸಾಹೇಬ್’ ಎಂದಷ್ಟೇ ಕರೆದಿದ್ದ. ದಾಳಿಯ ಸಂದರ್ಭದಲ್ಲಿ ಉಗ್ರರು ಮತ್ತು ಪಾಕಿಸ್ತಾನದಲ್ಲಿದ್ದ ಅವರ ಹ್ಯಾಂಡ್ಲರ್‌ಗಳ ನಡುವಿನ ಸಂಭಾಷಣೆಯಲ್ಲೂ ಈ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ವರದಿಗಳಲ್ಲಿ ಆ ಅಧಿಕಾರಿ ಬಗ್ಗೆ ಉಲ್ಲೇಖವಿದೆ ಹೊರತು, ಆತ ಯಾರು? ಅವನ ಅಸಲಿ ಹೆಸರು ಏನು? ಎಂಬ ಪ್ರಶ್ನೆಗಳಿಗೆ ಇಂದಿಗೂ ಸ್ಪಷ್ಟ ಉತ್ತರ ಲಭಿಸಿಲ್ಲ ಎಂಬುದೇ ಈ ಪ್ರಕರಣದ ಕುತೂಹಲಕಾರಿ ಅಂಶ.

8 ವಾರಗಳ ತರಬೇತಿ?

ವಿಚಾರಣೆ ವೇಳೆ ಕಸಬ್ ನೀಡಿದ್ದ ಮಾಹಿತಿಯ ಪ್ರಕಾರ, ಪಾಕಿಸ್ತಾನದ ಮುಜಫರಾಬಾದ್‌ನಲ್ಲಿರುವ ಲಷ್ಕರ್-ಎ-ತೊಯ್ಬಾ ತರಬೇತಿ ಕೇಂದ್ರದಲ್ಲಿ ಅವರಿಗೆ ಎಂಟು ವಾರಗಳ ಕಾಲ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ‘ಮೇಜರ್ ಜನರಲ್ ಸಾಹೇಬ್’ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಸಬ್ ಹೇಳಿದ್ದ. ಅಲ್ಲದೆ, ಉಗ್ರ ಸಂಘಟನೆಯ ಪ್ರಮುಖರಾದ ಹಫೀಜ್ ಸಯೀದ್ ಮತ್ತು ಝಕಿ-ಉರ್-ರೆಹಮಾನ್ ಲಖ್ವಿ ಅವರಿಗೂ ಈ ಅಧಿಕಾರಿಯೊಂದಿಗೆ ನಿಕಟ ಸಂಪರ್ಕವಿತ್ತು ಎಂಬ ಮಾಹಿತಿಯನ್ನು ಆತ ನೀಡಿದ್ದ ಎನ್ನಲಾಗಿದೆ.

ಚಾರ್ಜ್‌ಶೀಟ್‌ನಲ್ಲಿ 20ನೇ ಹೆಸರು!

2009ರಲ್ಲಿ ಸಲ್ಲಿಸಲಾದ ಮುಂಬೈ ದಾಳಿ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ 32 ಪಾಕಿಸ್ತಾನಿ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿತ್ತು. ಈ ಪಟ್ಟಿಯಲ್ಲಿ ‘ಮೇಜರ್ ಜನರಲ್ ಸಾಹೇಬ್’ ಎಂಬ ವ್ಯಕ್ತಿಯ ಉಲ್ಲೇಖ 20ನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಆದರೆ, ಉಳಿದವರಿಗಿಂತ ಭಿನ್ನವಾಗಿ ಈ ವ್ಯಕ್ತಿಯ ನಿಜವಾದ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ ಎಂದು ವಿವರಿಸಲಾಗಿದೆ.

Also Read
ರಾಮಾಯಣ ಚಿತ್ರದಲ್ಲಿ ಆ ಪಾತ್ರಕ್ಕೆ... ಬಾಲಿವುಡ್​ ಬೆಡಗಿ ತನಿಷಾ ಶಾಕಿಂಗ್ ಹೇಳಿಕೆ ವೈರಲ್​ | Ramayana
 26/11 Mumbai Attack

ಇನ್ನು, ಕಸಬ್ ಮತ್ತು ಡೇವಿಡ್ ಹೆಡ್ಲಿ ನೀಡಿದ ಮಾಹಿತಿಗಳ ಆಧಾರದಲ್ಲಿ ಪಾಕಿಸ್ತಾನದ ಸೇನೆ ಹಾಗೂ ಇತರ ಸಂಸ್ಥೆಗಳ ಕೆಲವು ಅಧಿಕಾರಿಗಳ ಹೆಸರುಗಳೂ ತನಿಖಾ ದಾಖಲೆಗಳಲ್ಲಿ ಕಾಣಿಸಿಕೊಂಡಿವೆ. ಮೇಜರ್ ಜನರಲ್ ಮೊಹಮ್ಮದ್ ಖಾಲಿದ್ ರಾವ್, ವಿಶೇಷ ಸಂವಹನ ಸಂಸ್ಥೆಯ ಕರ್ನಲ್ ಸಾದತುಲ್ಲಾ, ಮೇಜರ್ ಇಕ್ಬಾಲ್ ಮತ್ತು ಅವರ ಮೇಲಧಿಕಾರಿ ಲೆಫ್ಟಿನೆಂಟ್ ಕರ್ನಲ್ ಹಮ್ಜಾ ಅವರ ಹೆಸರುಗಳು ಅವುಗಳಲ್ಲಿ ಸೇರಿವೆ.

18 ವರ್ಷಗಳಾದ್ರೂ ಉತ್ತರ ಸಿಗದ ಪ್ರಶ್ನೆ!

ಮುಂಬೈ ದಾಳಿಗೆ 18 ವರ್ಷಗಳು ಕಳೆದಿವೆ. ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರರು, ಅವರ ಸಂಪರ್ಕ ಜಾಲ ಮತ್ತು ತರಬೇತಿಯ ಕುರಿತು ಹಲವು ತನಿಖಾ ಮಾಹಿತಿಗಳು ಬಹಿರಂಗವಾಗಿದ್ದರೂ, ಕಸಬ್ ಉಲ್ಲೇಖಿಸಿದ್ದ ‘ಮೇಜರ್ ಜನರಲ್ ಸಾಹೇಬ್’ ಯಾರು ಎಂಬುದು ಮಾತ್ರ ಇನ್ನೂ ಕುತೂಹಲ ಮೂಡಿಸುತ್ತಿದೆ. ಆ ವ್ಯಕ್ತಿಯ ನಿಜವಾದ ಗುರುತು ಬಹಿರಂಗವಾಗುತ್ತಾ? ಮುಂಬೈ ದಾಳಿಯ ಹಿಂದಿನ ಇನ್ನಷ್ಟು ರಹಸ್ಯಗಳು ಹೊರಬರುತ್ತಾ? ಎಂಬ ಪ್ರಶ್ನೆಗಳು ಖಂಡಿತ ಹಲವರಲ್ಲಿ ಕಾಡತೊಡಗಿವೆ,(ಏಜೆನ್ಸೀಸ್).