ಜೇಡಗಳಿಗೂ ಕನಸು ಬೀಳುತ್ತಾ?  AI image WEB
ಲೈಫ್‌ಸ್ಟೈಲ್

ರಾತ್ರಿ ನಿದ್ದೆಯಲ್ಲಿ ಜೇಡಗಳಿಗೂ ಕನಸು ಬೀಳುತ್ತಾ?ವಿಜ್ಞಾನಿಗಳು ಕಂಡುಕೊಂಡ ಆಶ್ಚರ್ಯಕರ ಸತ್ಯವೇನು?Spider Dreams

ಮನುಷ್ಯರು ನಿದ್ರೆಯಲ್ಲಿ ಕನಸು ಕಾಣುವುದು ಸಹಜ. ಆದರೆ ಜೇಡಗಳೂ ಕನಸು ಕಾಣುತ್ತವೆಯೇ? ಕೇಳಲು ವಿಚಿತ್ರ ಎನಿಸಿದರೂ, ವಿಜ್ಞಾನಿಗಳ ಹೊಸ ಸಂಶೋಧನೆಯೊಂದು ಈ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದೆ. ಜಿಗಿಯುವ ಜೇಡಗಳು ನಿದ್ರೆಯಲ್ಲಿರುವಾಗ ಕಣ್ಣುಗಳ ಒಳಭಾಗವನ್ನು ಚಲಿಸುವುದು, ಕಾಲುಗಳನ್ನು ಸೆಳೆದುಕೊಳ್ಳುವುದು ಸೇರಿದಂತೆ ಕೆಲವು ವಿಶೇಷ ವರ್ತನೆಗಳನ್ನು ತೋರಿಸುತ್ತವೆ. ಈ ಚಲನೆಗಳು ಮನುಷ್ಯರ ನಿದ್ರೆಯಲ್ಲಿನ REM ಹಂತವನ್ನು ಹೋಲುತ್ತವೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.....Spider Dreams

Spider Dreams: ಮನುಷ್ಯರು ನಿದ್ರೆಯಲ್ಲಿ ಕನಸು ಕಾಣುವುದು ಸಹಜ. ಆದರೆ ಜೇಡಗಳೂ ಕನಸು ಕಾಣುತ್ತವೆಯೇ? ಕೇಳಲು ವಿಚಿತ್ರ ಎನಿಸಿದರೂ, ವಿಜ್ಞಾನಿಗಳ ಹೊಸ ಸಂಶೋಧನೆಯೊಂದು ಈ ಪ್ರಶ್ನೆಗೆ ಕುತೂಹಲಕಾರಿ ಉತ್ತರ ನೀಡಿದೆ. ಜಿಗಿಯುವ ಜೇಡಗಳು ನಿದ್ರೆಯಲ್ಲಿರುವಾಗ ಕಣ್ಣುಗಳ ಒಳಭಾಗವನ್ನು ಚಲಿಸುವುದು, ಕಾಲುಗಳನ್ನು ಸೆಳೆದುಕೊಳ್ಳುವುದು ಸೇರಿದಂತೆ ಕೆಲವು ವಿಶೇಷ ವರ್ತನೆಗಳನ್ನು ತೋರಿಸುತ್ತವೆ. ಈ ಚಲನೆಗಳು ಮನುಷ್ಯರ ನಿದ್ರೆಯಲ್ಲಿನ REM ಹಂತವನ್ನು ಹೋಲುತ್ತವೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಜೇಡಗಳ ನಿದ್ರೆಯಲ್ಲಿದೆ ಎರಡು ಹಂತ

ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಸಂಶೋಧಕರು ಆಸ್ಟ್ರೇಲಿಯಾದಲ್ಲಿ ಕಂಡುಬರುವ 'ಪೋರ್ಟಿಯಾ ಫಿಂಬ್ರಿಯಾಟಾ' ಎಂಬ ಜಿಗಿಯುವ ಜೇಡದ ನಿದ್ರೆಯ ವರ್ತನೆಯನ್ನು ಅಧ್ಯಯನ ಮಾಡಿದ್ದಾರೆ. ಹಲವು ದಿನಗಳ ಕಾಲ ಇನ್‌ಫ್ರಾರೆಡ್ ಕ್ಯಾಮೆರಾಗಳ ಮೂಲಕ ಅವುಗಳ ಚಲನವಲನಗಳನ್ನು ದಾಖಲಿಸಿದ್ದಾರೆ.ಈ ಅಧ್ಯಯನದಲ್ಲಿ ಜೇಡಗಳು ಎರಡು ವಿಭಿನ್ನ ನಿದ್ರೆಯ ಹಂತಗಳನ್ನು ಹೊಂದಿರುವುದು ಪತ್ತೆಯಾಗಿದೆ. ಮೊದಲ ಹಂತದಲ್ಲಿ ಅವು ಯಾವುದೇ ಚಲನೆಯಿಲ್ಲದೆ ವಿಶ್ರಾಂತಿ ಪಡೆಯುತ್ತವೆ. ಮತ್ತೊಂದು ಹಂತದಲ್ಲಿ ಕಣ್ಣುಗಳ ರೆಟಿನಾಗಳು ವೇಗವಾಗಿ ಚಲಿಸುವುದರ ಜತೆಗೆ ಕಾಲುಗಳು ಸೆಳೆದುಕೊಂಡಂತೆ ಅಲುಗಾಡುತ್ತವೆ. ಈ ವರ್ತನೆ ಮನುಷ್ಯರಲ್ಲಿ ಕಂಡುಬರುವ REM (Rapid Eye Movement) ನಿದ್ರೆಯ ಹಂತವನ್ನು ಹೋಲುತ್ತದೆ.

ಜೇಡಗಳು ನಿಜವಾಗಿಯೂ ನಿದ್ರಿಸುತ್ತವೆಯೇ?

ನಿದ್ರೆಯನ್ನು ಖಚಿತಪಡಿಸಿಕೊಳ್ಳಲು ಸಂಶೋಧಕರು ಜೇಡಗಳ ಬಳಿ ಶಬ್ದವನ್ನು ಉಂಟುಮಾಡಿ ಅವುಗಳ ಪ್ರತಿಕ್ರಿಯೆಯನ್ನು ಪರೀಕ್ಷಿಸಿದ್ದಾರೆ. ಎಚ್ಚರವಾಗಿರುವಾಗ ಶಬ್ದಕ್ಕೆ ತಕ್ಷಣ ಪ್ರತಿಕ್ರಿಯಿಸುತ್ತಿದ್ದ ಜೇಡಗಳು ನಿದ್ರೆಯ ಹಂತದಲ್ಲಿದ್ದಾಗ ಪ್ರತಿಕ್ರಿಯಿಸಲು ಹೆಚ್ಚು ಸಮಯ ತೆಗೆದುಕೊಂಡಿವೆ. ಅಲ್ಲದೆ, ನಿದ್ರೆಗೆ ಅಡ್ಡಿಪಡಿಸಿದ ಬಳಿಕ ಅವು ಹೆಚ್ಚುವರಿ ವಿಶ್ರಾಂತಿ ಪಡೆಯುವ ಲಕ್ಷಣವನ್ನೂ ತೋರಿಸಿವೆ. ಇದರಿಂದ ಜೇಡಗಳು ಕೇವಲ ನಿಶ್ಚಲವಾಗಿರುವುದಲ್ಲ, ನಿಜವಾಗಿಯೂ ನಿದ್ರಿಸುತ್ತವೆ ಎಂಬುದಕ್ಕೆ ಸಂಶೋಧಕರಿಗೆ ಸಾಕ್ಷಿ ದೊರೆತಿದೆ.

ಇದನ್ನೂ ಓದಿ : ಕ್ಯಾನ್ಸರ್‌ ಬರುವ ಮುನ್ನವೇ ತಡೆಯಬಹುದೇ? ಅಗ್ಗದ ವಿಟಮಿನ್‌ ಸಿ ಬಗ್ಗೆ ವಿಜ್ಞಾನಿಗಳ ಹೊಸ ಸಂಶೋಧನೆ!..vitamin c

ಹಾಗಾದರೆ ಜೇಡಗಳು ಕನಸು ಕಾಣುತ್ತವೆಯೇ?

ಇಲ್ಲಿಯೇ ಅಸಲಿ ಕುತೂಹಲ ಅಡಗಿದೆ. ಮನುಷ್ಯರಲ್ಲಿ REM ನಿದ್ರೆಯ ಹಂತದಲ್ಲಿ ಸಾಮಾನ್ಯವಾಗಿ ಕನಸುಗಳು ಕಾಣಿಸಿಕೊಳ್ಳುತ್ತವೆ. ಜೇಡಗಳಲ್ಲಿಯೂ ಇಂತಹದ್ದೇ ನಿದ್ರೆಯ ಹಂತ ಕಂಡುಬಂದಿರುವುದರಿಂದ ಅವು ಕೂಡ ಕನಸು ಕಾಣುತ್ತಿರಬಹುದೇ ಎಂಬ ಪ್ರಶ್ನೆ ವಿಜ್ಞಾನಿಗಳಲ್ಲಿ ಮೂಡಿದೆ. ಆದರೆ ಜೇಡಗಳು ನಿಜವಾಗಿಯೂ ಕನಸು ಕಾಣುತ್ತವೆ ಎಂಬುದನ್ನು ಈ ಸಂಶೋಧನೆ ಸಾಬೀತುಪಡಿಸಿಲ್ಲ. ಅವುಗಳ ಮೆದುಳಿನಲ್ಲಿ ಕನಸುಗಳ ಅನುಭವ ಹೇಗಿರಬಹುದು ಎಂಬುದನ್ನು ತಿಳಿಯಲು ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ.

ಯಾವ ಜರ್ನಲ್‌ನಲ್ಲಿ ಪ್ರಕಟವಾಗಿದೆ?

ಈ ಸಂಶೋಧನೆಯು ಜೇಡಗಳ ಎರಡು ಹಂತದ ನಿದ್ರೆ ಎಂಬ ಶೀರ್ಷಿಕೆಯಲ್ಲಿ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ಪ್ರೋಸಿಡಿಂಗ್​ ನ್ಯಾಷನಲ್​ ಅಕಾಡೆಮಿ ಆಫ್ ಸೈನ್ಸ (PNAS) ನಲ್ಲಿ ಪ್ರಕಟವಾಗಿದೆ. 2026ರ ಅಕ್ಟೋಬರ್ 26ರಂದು ಆನ್‌ಲೈನ್‌ನಲ್ಲಿ ಪ್ರಕಟಗೊಂಡ ಈ ಅಧ್ಯಯನವು ನವೆಂಬರ್ 10ರ ಸಂಚಿಕೆಯಲ್ಲಿಯೂ ಸೇರಿದೆ. ಜೇಡಗಳ ನಿದ್ರೆಯ ಸ್ವರೂಪ ಹಾಗೂ ಪ್ರಾಣಿಗಳಲ್ಲಿ ನಿದ್ರೆ ಹೇಗೆ ವಿಕಾಸಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ಹೊಸ ದಾರಿಯನ್ನು ತೆರೆದಿದೆ.( ಏಜೇನ್ಸಿಸ್​)