ಲಿವರ್ಗೆ ಶತ್ರುಗಳು ಬೇಕಾದಷ್ಟಿವೆ. ನಮ್ಮ ನಾಲಗೆಯ ಚಪಲದಿಂದಾಗಿ ಆ ಶತ್ರುಗಳು ಹೊಟ್ಟೆ ಸೇರಿ ಲಿವರ್ ಅನ್ನು ಬಹುವಿಧದಲ್ಲಿ ಕಾಡುತ್ತವೆ. ಅಂಥ ಸಂದರ್ಭದಲ್ಲಿ ಲಿವರ್ನ ಆಪ್ತರಕ್ಷಕನಾಗಿ ಕೆಲಸ ಮಾಡಬಲ್ಲ ಶಕ್ತಿ ಈ ನೆಲನೆಲ್ಲಿಗಿದೆ. ಮದ್ಯಪಾನ ಬಿಟ್ಟ ನಂತರ ಇದನ್ನು ನಿಯತವಾಗಿ ಸೇವಿಸಿದರೆ ಲಿವರ್ ಮತ್ತೆ ಸುಸ್ಥಿತಿಗೆ ಬರಲು ಸಹಕಾರಿಯಾಗುತ್ತದೆ. ಮದ್ಯಪಾನ ಬಿಡದಿದ್ದರೆ ಅಷ್ಟು ಪ್ರಯೋಜನವಾಗಲಿಕ್ಕಿಲ್ಲ. ಕಾಮಾಲೆಯಿಂದ ಲಿವರ್ ಕ್ಯಾನ್ಸರ್ವರೆಗೆ ಲಿವರ್ಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳಲ್ಲಿ ಇದು ಅತ್ಯಂತ ಸಹಕಾರಿ. ಜಾಂಡೀಸ್, ಲಿವರ್ ಅಥವಾ ಸ್ಪಿ್ಲೕನ್ನ ಬಾವು ಮುಂತಾದ ಸಮಸ್ಯೆಗಳಲ್ಲಿ ಇಡೀ ಗಿಡವನ್ನು ತಂದು ಅತ್ಯಲ್ಪ ನೀರು ಬಳಸಿ 15ರಿಂದ 20 ಮಿ.ಲೀ. ರಸ ತೆಗೆದು ಕೆಲವು ದಿನಗಳ ಕಾಲ ಅದನ್ನು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ತಾಜಾ ಗಿಡ ಸಿಗದೆ ಹೋದರೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಒಣಗಿದ ಗಿಡದ ತುಂಡುಗಳನ್ನು ತಂದು 150 ಮಿ.ಲೀ. ನೀರಿಗೆ 10 ಗ್ರಾಂ ಪುಡಿ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ 40 ಮಿ.ಲೀ.ಗೆ ಇಳಿಸಿ ಸೋಸಿ ಕುಡಿಯಬೇಕು. ಅದರ ನುಣ್ಣನೆಯ ಪುಡಿಯನ್ನು ಬಳಸುವುದಾದರೆ ದಿನಕ್ಕೆ 3ರಿಂದ 6 ಗ್ರಾಂ ಪುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬಹುದು. ಇದಕ್ಕಿಂತ ತಾಜಾ ರಸ ಅಥವಾ ಕಷಾಯ ಬಳಸುವುದು ಸೂಕ್ತ. ಇದರಿಂದ ಲಿವರ್ನ ಕಾರ್ಯಕ್ಷಮತೆ ಹೆಚ್ಚಿ ಚೆನ್ನಾಗಿ ಹಸಿವುಂಟಾಗುತ್ತದೆ. ಚಿಕ್ಕ ಮಕ್ಕಳಿಗೂ ಕಡಿಮೆ ಪ್ರಮಾಣದಲ್ಲಿ ಕೊಡಬಹುದು. ಇದರಿಂದ ಮಕ್ಕಳಿಗೆ ಪದೇಪದೆ ಕಾಡುವ ನೆಗಡಿ, ಜ್ವರ, ಕೆಮ್ಮು ಹತೋಟಿಗೆ ಬರುತ್ತವೆ. ಜತೆಗೆ ಅವರ ಬಾಯಿರುಚಿ ಹೆಚ್ಚಿ ಆಹಾರಸೇವನೆಯ ಪ್ರಮಾಣ ವೃದ್ಧಿಸುತ್ತದೆ. ನಿತ್ಯ ಕುಡಿಯುವ ಹರ್ಬಲ್ ಟೀಗಳಲ್ಲೂ ಇದನ್ನು ಬಳಸಬಹುದು. ಹೀಗೆ ಬಳಸುವುದರಿಂದ ಮೇಲೆ ಹೇಳಿದ ಸಮಸ್ಯೆಗಳು ಕಡಿಮೆಯಾಗುವುದಷ್ಟೇ ಅಲ್ಲ, ಮುಂದೆ ಅವು ಬರದಂತೆಯೂ ತಡೆಯುತ್ತದೆ. ಮನೆಯ ಮುಂದೆ ಅಥವಾ ಟೆರೇಸ್ನಲ್ಲಿ ಸ್ವಲ್ಪ ಜಾಗದಲ್ಲಿ ಬೆಳೆಸಿದರೆ ವರ್ಷಪೂರ್ತಿ ಬಳಸಬಹುದು.