ಶ್ವಾಸಕೋಶಕ್ಕೆ ಶಕ್ತಿ ನೀಡಿ ಕಫವನ್ನು ಹೊರಹಾಕುವ ಗುಣವಿರುವುದರಿಂದ ಶ್ವಾಸಾಂಗವ್ಯೂಹದ ಕೆಮ್ಮು, ಅಸ್ತಮಾ, ನ್ಯೂಮೋನಿಯಾದಂತಹ ಸಮಸ್ಯೆಗಳಲ್ಲಿ ಅರ್ಧ ಚಮಚದಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಜೇನುತುಪ್ಪ ಅಥವಾ ಬೆಲ್ಲದ ಜೊತೆ ತೆಗೆದುಕೊಳ್ಳಬೇಕು. ಆಯುರ್ವೆದ ಗ್ರಂಥಗಳ ಪ್ರಕಾರ ಕ್ಷಯರೋಗದಲ್ಲಿಯೂ ಇದು ಪ್ರಯೋಜನಕಾರಿ.
ದೇಹದಲ್ಲಿ ವಿಷ ಸೇರಿಕೊಂಡಿದ್ದರೆ, ಗುಣವಾಗದ ಗಾಯವಿದ್ದರೆ, ಪದೇಪದೆ ವಾಂತಿಯಾಗುತ್ತಿದ್ದರೆ ಅವನ್ನು ತಡೆಯಲು ಇದರಿಂದ ಪ್ರಯೋಜನವಾಗುತ್ತದೆ. ಆಸಿಡಿಟಿ, ಎಚ್ ಪೈಲೋರಿಯ ಸಮಸ್ಯೆಗಳಲ್ಲಿ ಇದು ಎಷ್ಟು ಅದ್ಭುತ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹಿಂದೆಯೇ ಹೇಳಲಾಗಿದೆ. ಸಂಜೆ ಹಾಲಿನ ಜೊತೆ ಅರ್ಧ ಚಮಚ ಇದರ ಪುಡಿಯನ್ನು ಹಾಕಿ ಕುಡಿದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಮಲಬದ್ಧತೆ ಪರಿಹಾರವಾಗುತ್ತದೆ. ಮೂತ್ರ ಸಲೀಸಾಗಿ ಆಗದಿದ್ದರೆ, ಉರಿಮೂತ್ರವಿದ್ದರೆ ಇದನ್ನು ಬಳಸಬಹುದು. ತಾಯಿಹಾಲು ಹೆಚ್ಚಿಸುವ, ಲೈಂಗಿಕಶಕ್ತಿ ವೃದ್ಧಿಸುವ ಗುಣ ಇದಕ್ಕಿದೆ.
ಮಧುಮೇಹದಲ್ಲಿ ಇದು ಸಹಕಾರಿ. ಬಾಯಿಗೂ ಉದರಕ್ಕೂ ಸಿಹಿ ನೀಡುತ್ತದೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಸಾಬೀತಾಗಿದೆ. ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ಮತ್ತು ಏಡ್ಸ್ ವೈರಸ್ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಹಾಗಾಗಿ ಇದರ ಪುಡಿಯನ್ನು ಆರೋಗ್ಯವಂತರು ಕೊತ್ತಂಬರಿ, ಜೀರಿಗೆ, ಶುಂಠಿ, ಅರಿಶಿಣ, ಕಾಳುಮೆಣಸುಗಳ ಜೊತೆ ಸೇರಿಸಿಟ್ಟುಕೊಂಡು ಕಷಾಯ ಅಥವಾ ಹರ್ಬಲ್ ಟೀ ಮಾಡಿಕೊಂಡು ಕುಡಿಯಬಹುದು. ಇದು ಸುಲಭವಾಗಿ ಪಚನವಾಗದಿದ್ದರೂ ಮೇಲಿನ ಸಾಂಬಾರಪದಾರ್ಥಗಳ ಜೊತೆ ಬಳಸಿದಾಗ ಸುಲಭವಾಗಿ ಪಚನವಾಗುತ್ತದೆ. ಜ್ಯೇಷ್ಠಮಧುವನ್ನು ದಿನಕ್ಕೆ ಮೂರರಿಂದ ನಾಲ್ಕು ಗ್ರಾಂನಷ್ಟು ಬಳಸಬಹುದು. ದೀರ್ಘಕಾಲ ಬಳಸುವುದಿದ್ದರೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ. ಏಕೆಂದರೆ ಇದರ ಅತಿ ಬಳಕೆಯಿಂದ ದೇಹದಲ್ಲಿ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.