ಲೈಫ್‌ಸ್ಟೈಲ್

ಕರೊನಾ ನಿಯಂತ್ರಣಕ್ಕೆ ಆಯುರ್ವೇದ ಔಷಧ?: ಕ್ಲಿನಿಕಲ್ ಟ್ರಯಲ್ ಗೆ ಅನುಮತಿ

ರಾಜ್​ಕೋಟ್: ಕರೊನಾಗೆ ಆಯುರ್ವೆದ ಔಷಧದ ಪ್ರಾಯೋಗಿಕ ಪರೀಕ್ಷೆ ನಡೆಸಲು ಜಾಮ್ನಗರದಲ್ಲಿರುವ ಗುಜರಾತ್ ಆಯುರ್ವೆದ ವಿಶ್ವವಿದ್ಯಾಲಯದ ಸಂಶೋಧಕರಿಗೆ ಅನುಮತಿ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಸೋಂಕಿತರ ಮೇಲೆ ಕ್ಲಿನಿಕಲ್ ಟ್ರಯಲ್ ಆರಂಭಿಸುವುದಾಗಿ ವಿವಿ ತಿಳಿಸಿದೆ.

ಎಂ.ಪಿ ಷಾ ಮೆಡಿಕಲ್ ಕಾಲೇಜಿನ ಇನ್​ಸ್ಟಿಟ್ಯೂಷನ್ ಎಥಿಕ್ಸ್ ಕಮಿಟಿ (ಐಇಸಿ) ಆಯುರ್ವೆದಿಕ್ ಔಷಧದ ಕ್ಲಿನಿಕಲ್ ಟ್ರಯಲ್​ಗೆ ಅನುಮತಿ ನೀಡಿದೆ. ಭಾರತದ ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿಯಲ್ಲೂ ಹೆಸರು ನೋಂದಾಯಿಸಿಕೊಂಡಿರುವುದಾಗಿ ವಿವಿ ತಿಳಿಸಿದೆ. ನಗರದ ಜಿಜಿ ಆಸ್ಪತ್ರೆಯಲ್ಲಿ ದಾಖಲಾಗಿರುವ 60 ಸೋಂಕಿತರ ಮೇಲೆ ಆಯುರ್ವೆದ ಔಷಧ ಪ್ರಯೋಗಿಸಲಾಗುವುದು.

30 ಜನರಿಗೆ ‘ಆಯುಷ್ 64 ಔಷಧ’ ನೀಡಲಾಗುವುದು. ಇನ್ನು 30 ಜನರಿಗೆ ಮಾಮೂಲಿ ಚಿಕಿತ್ಸೆ ನೀಡಲಾಗುವುದು. ಎಲ್ಲರ ಅಧ್ಯಯನ ನಡೆಸಿ ವರದಿ ಸಿದ್ಧ ಪಡಿಸಲಾಗುವುದು. ಎರಡು ತಿಂಗಳ ಕಾಲ ಈ ಪ್ರಯೋಗ ನಡೆಯಲಿದೆ ಎಂದು ವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಅನೂಪ್ ಠಾಕರ್ ತಿಳಿಸಿದ್ದಾರೆ.