ಲೈಫ್‌ಸ್ಟೈಲ್

ಗರ್ಭದಲ್ಲಿರುವ ಮಗುವಿನಲ್ಲೂ ಪತ್ತೆ ಆಯಿತಾ COVID19?

ನವದೆಹಲಿ: ಕೋವಿಡ್ 19 ನೋವೆಲ್ ಕರೊನಾ ವೈರಸ್ ಸೋಂಕಿಗೆ ಸಂಬಂಧ ಪಟ್ಟಂತೆ ಅನೇಕ ಗುಣಲಕ್ಷಣಗಳು ಬದಲಾಗುತ್ತ ಸಾಗಿದೆ. ವೈರಸ್​ ಸೋಂಕಿಗೆ ಸಂಬಂಧಿಸಿ ಹೊಸ ಹೊಸ ಅಂಶಗಳು ಬೆಳಕಿಗೆ ಬಂದಿವೆ ಕೂಡ. ಆರಂಭದ ದಿನಗಳ ಮಾಹಿತಿ ಪ್ರಕಾರ, ಸೋಂಕಿತರು ಸೀನುವಾಗ, ಕೆಮ್ಮುವಾಗ ಹೊರಬೀಳುವ ಹನಿಗಳು ಸೋಂಕನ್ನು ಹರಡಬಲ್ಲದು ಎಂದು ತಿಳಿಯಲಾಗಿತ್ತು. ಅಲ್ಲದೆ, ವಾಯುವಿನ ಮೂಲಕ ಸೋಂಕು ಹರಡಬಹುದು ಎಂದೂ ಹೇಳಲಾಗಿತ್ತಲ್ಲದೆ, ಹೆಚ್ಚಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಈ ನಡುವೆ, ಹತ್ತು ವರ್ಷದೊಳಗಿನ ಮಕ್ಕಳು ಮತ್ತು ಅರವತ್ತು ವರ್ಷ ಮೇಲ್ಪಟ್ಟವರು ಈ ಸೋಂಕಿಗೆ ಬೇಗನೆ ಒಳಗಾಗುತ್ತಾರೆ. ಹೀಗಾಗಿ ಅವರು ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂಬ ನಿರ್ದೇಶನವನ್ನೂ ಸರ್ಕಾರ ನೀಡಿತು. ಇವೆಲ್ಲ ನಿರ್ದೇಶನಗಳೂ ಜಾಗತಿಕ ಆರೋಗ್ಯ ನಿಗಾ ಸಂಸ್ಥೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್​ಒ) ನಿರ್ದೇಶನದ ಮೇರೆಗೇ ನೀಡಲ್ಪಡುತ್ತಿದ್ದವು.

ಈ ನಡುವೆ, ತಾಯಿಯ ಗರ್ಭದಲ್ಲಿದ್ದ ಮಗುವಿಗೂ ಕೋವಿಡ್ 19 ಸೋಂಕು ತಗುಲಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಗರ್ಭಿಣಿಯರನ್ನೂ ಹತ್ತು ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರ ಸಾಲಿಗೆ ಸೇರಿ ಹೈ ರಿಸ್ಕ್ ಇರುವಂಥವರು ಎಂದು ಗುರುತಿಸಲಾಗಿದೆ. ಜರ್ನಲ್ ನೇಚರ್ ಕಮ್ಯೂನಿಕೇಷನ್ಸ್ ಎಂಬುದರಲ್ಲಿ ಪ್ರಕಟವಾದ "Transplacental transmission of SARS-CoV-2 infection" ಎಂಬ ಅಧ್ಯಯನ ವರದಿ ಪ್ರಕಾರ, ಗರ್ಭಿಣಿಯರಿಗೆ ಸೋಂಕು ತಗುಲಿದರೆ ಗರ್ಭದಲ್ಲಿರುವ ಮಗುವಿಗೂ ಸೋಂಕು ಬಾಧಿಸುವ ಅಪಾಯ ಹೆಚ್ಚಾಗಿದೆ. ಇದನ್ನು ಪುಷ್ಟೀಕರಿಸುವ ಪ್ರಕರಣ ಫ್ರಾನ್ಸ್​ನಲ್ಲಿ ಆಗಿದ್ದು, ಅದನ್ನು ಅಲ್ಲಿಯ ಡಾಕ್ಟರ್​ಗಳು ದೃಢೀಕರಿಸಿದ್ದಾರೆ.

ಈ ವರದಿಯ ಉಲ್ಲೇಖ ಪ್ರಕಾರ, 23 ವರ್ಷ ವಯೋಮಾನದ ಗರ್ಭಿಣಿಯನ್ನು ಆಕೆಯ 35ನೇ ವಾರದ ಗರ್ಭದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಆಕೆ ಜ್ವರ ಮತ್ತು ತೀವ್ರ ಪ್ರಮಾಣದ ಕೆಮ್ಮು ಮತ್ತು ಕಫದ ತೊಂದರೆಯನ್ನು ಹೇಳಿಕೊಂಡಿದ್ದರು. ಕೆಲವು ದಿನಗಳ ಬಳಿಕ ಆಕೆಗೆ ಪ್ರಸವವಾಗಿ ಗಂಡು ಮಗು ಜನಿಸಿತ್ತು. ಆ ಮಗುವಿನಲ್ಲಿ ಸ್ನಾಯು ಸೆಳೆತ, ನರ ಸಂಬಂಧಿ ಕಾಯಿಲೆಗಳ ಗುಣಲಕ್ಷಣ ಗೋಚಿರಿಸಿತು. ನವಜಾತ ಶಿಶು ಕಿರಿಕಿರಿ ಅನುಭವಿಸುವುದೂ ಪತ್ತೆಯಾಯಿತು. ಪರಿಶೀಲಿಸಿ ಕೋವಿಡ್ 19 ಟೆಸ್ಟ್ ಮಾಡಿಸಿದಾಗ ಅದಕ್ಕೆ ಪಾಸಿಟಿವ್ ಇರುವುದು ದೃಢಪಟ್ಟಿತು. ಆದರೆ ಮಗುವಿಗೆ ಸೂಕ್ತ ಚಿಕಿತ್ಸೆ ನೀಡಿದ್ದರ ಪರಿಣಾಮ ಮುಂದಿನ 18 ದಿನದಲ್ಲಿ ಮಗು ಸಹಜ ಸ್ಥಿತಿಗೆ ಮರಳಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. (ಏಜೆನ್ಸೀಸ್)