ಲೈಫ್‌ಸ್ಟೈಲ್

ವಿದ್ಯಾರ್ಥಿಗಳೇ ಗಮನಿಸಿ: ಬಿಎಂಟಿಸಿ ಬಸ್ ಪಾಸ್ ವಿತರಣೆ..ಎಲ್ಲಿ? ಯಾವಾಗ? ವಿವರ ಇಲ್ಲಿದೆ ನೋಡಿ..

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 2024-25ನೇ ಸಾಲಿನ ವಿದ್ಯಾರ್ಥಿ ಪಾಸ್‌‍ಗಾಗಿ ಬುಧವಾರ(ಮೇ29) ದಿಂದ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸುತ್ತಿದ್ದು, ಜೂನ್‌ ಒಂದರಿಂದ ಬೆಂಗಳೂರು ಒನ್‌ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುತ್ತದೆ.

ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿನ ಅರ್ಜಿಯು ಸೇವಾಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳು ಬೆಂಗಳೂರು ಒನ್‌ ಕೇಂದ್ರಗಳ ಮೂಲಕ ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪಾಸುಗಳನ್ನು ಬೆಳಗ್ಗೆ 8 ರಿಂದ ಸಂಜೆ 6.30 ಗಂಟೆಯವರೆಗೆ ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಹಾಗೂ ಬಿಎಂಟಿಸಿಯ ಕೆಂಪೇಗೌಡ ಬಸ್‌‍ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್‌ ಸಿಟಿ ಘಟಕ-19, ಶಾಂತಿನಗರ ಟಿಟಿಎಂಸಿ, ಕೆಎಸ್‌‍ಆರ್‌ಟಿಸಿಯ ಆನೇಕಲ್‌ ಬಸ್‌‍ ನಿಲ್ದಾಣದಲ್ಲಿ ವಿತರಿಸುವುದಾಗಿ ಹೇಳಿದೆ.

ಶಕ್ತಿ ಯೋಜನೆಯಡಿ ರಾಜ್ಯದ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದ್ದು, ವಿದ್ಯಾರ್ಥಿನಿಯರು ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 08022483777 ಮೂಲಕ ಸಂಪರ್ಕಿಸಬಹುದಾಗಿದೆ.