ಲೈಫ್‌ಸ್ಟೈಲ್

ಅಸ್ತಮಾ ಗುಣಮುಖವಾಗದಿದ್ರೂ ನಿಯಂತ್ರಣ ಸಾಧ್ಯ

ಮೋಹನ್​ ಶೆಟ್ಟಿ

1993ರಲ್ಲಿ ಸ್ಥಾಪನೆಯಾದ ಗ್ಲೋಬಲ್ ಇನಿಶಿಯೇಟಿವ್ ಫಾರ್ ಅಸ್ತಮಾ (ಜಿಐಎನ್​ಎ) ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ)ಸಹಯೋಗದಲ್ಲಿ ಪ್ರತಿ ವರ್ಷ ಮೇ ತಿಂಗಳ ಮೊದಲ ಮಂಗಳವಾರ ‘ವಿಶ್ವ ಅಸ್ತಮಾ ದಿನ’ ಆಚರಿಸುವ ಮೂಲಕ ಜಾಗೃತಿ ಮೂಡಿಸುತ್ತಿದೆ. ‘ಎಲ್ಲರಿಗೂ ಇನ್ಹೇಲ್ಡ್ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು’ ಈ ವರ್ಷದ ಘೋಷವಾಕ್ಯವಾಗಿದೆ.

| ಪಂಕಜ ಕೆ.ಎಂ.

ಜಗತ್ತಿನಾದ್ಯಂತ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿರುವ ದೀರ್ಘಕಾಲದ ಉಸಿರಾಟದ ಕಾಯಿಲೆ ಅಸ್ತಮಾ. ಜಾಗತಿಕವಾಗಿ 339 ದಶಲಕ್ಷಕ್ಕೂ ಹೆಚ್ಚು ಜನರು ಅಸ್ತಮಾ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. 2016ರಲ್ಲಿ ಜಾಗತಿಕವಾಗಿ 4,17,918 ಮಂದಿ ಅಸ್ತಮಾಗೆ ಬಲಿಯಾಗಿದ್ದಾರೆ. ನಂತರದಲ್ಲಿ ಈ ಕುರಿತು ಯಾವುದೇ ಸಂಶೋಧನಾ ವರದಿಗಳು ಪ್ರಕಟಗೊಂಡಿಲ್ಲ. ಉಸಿರಾಟದ ಮೂಲಕ ಮನುಷ್ಯನ ದೇಹ ಸೇರುವ ಗಾಳಿಯಲ್ಲಿನ ಅತ್ಯಂತ ಸಣ್ಣ ಧೂಳಿನ ಕಣಗಳು ಶ್ವಾಸನಾಳದ ಒಳಪದರಗಳನ್ನು ಊದಿಕೊಳ್ಳುವಂತೆ ಮಾಡುತ್ತವೆ.

ಇದರಿಂದ ನೆಗಡಿ, ಉಸಿರಾಟದ ತೊಂದರೆ ಉಂಟಾಗಿ ಕೆಮ್ಮು, ದಮ್ಮು ಕಾಣಿಸಿಕೊಳ್ಳುವ ಮೂಲಕ ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಇದರ ಹರಡುವಿಕೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಈ ಕಾಯಿಲೆಗೆ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಹಾಗೆಯೇ ಆಸ್ತಮಾವನ್ನು ಸರಿಯಾಗಿ ನಿರ್ವಹಿಸಲು ರೋಗಿಗಳು ಔಷಧಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ತಜ್ಞರು.

ಯಾರಲ್ಲಿ ಕಾಣಿಸಿಕೊಳ್ಳುತ್ತದೆ?

ಮಕ್ಕಳು, ಹದಿಹರೆಯದವರು, ವಯಸ್ಕರು ಮತ್ತು ವೃದ್ಧರು ಸೇರಿದಂತೆ ಯಾವುದೇ ವಯಸ್ಸಿನವರಲ್ಲಿಯೂ ಅಸ್ತಮಾ ಕಾಣಿಸಿಕೊಳ್ಳಬಹುದು. ಇದು ಸಾಂಕ್ರಾಮಿಕವಲ್ಲ. ಬದಲಿಗೆ ಉಸಿರಾಟದ ಸೋಂಕುಗಳು (ನೆಗಡಿ ಮತ್ತು ಜ್ವರ ಮುಂತಾದವು) ಅಸ್ತಮಾ ಹರಡಲು ಕಾರಣವಾಗಬಹುದು. ಮಕ್ಕಳು ಸೇರಿದಂತೆ ಕೆಲವರಲ್ಲಿ ಇದು ಅಲರ್ಜಿಯಿಂದಾಗಿ ಕಾಣಿಸಿಕೊಳ್ಳುತ್ತದೆ. ಇತ್ತೀಚಿನ ಕಲುಷಿತ ವಾತಾವರಣದಲ್ಲಿ ಜನರನ್ನು ತೀವ್ರವಾಗಿ ಬಾಧಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಅಸ್ತಮಾ ಕೂಡ ಒಂದು. ನಗರ ಪ್ರದೇಶಗಳಲ್ಲಿ, ಅಂದರೆ ಹೆಚ್ಚು ವಾಹನ ಮತ್ತು ಕೈಗಾರಿಕೆಗಳನ್ನು ಹೊಂದಿರುವ ಸ್ಥಳಗಳಲ್ಲಿ ಹೆಚ್ಚು ಓಡಾಡುವವರು, ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವವರು ತಮಗೇ ಅರಿವಿಲ್ಲದಂತೆ ಇದರ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಇತ್ತೀಚೆಗೆ ಯುವಜನರಲ್ಲಿ ಅಸ್ತಮಾ ಹೆಚ್ಚಾಗುತ್ತಿದೆ. ಧೂಳಿನಲ್ಲಿ ಹೆಚ್ಚು ಸಮಯ ಗರ್ಭಿಣಿಯರು ಓಡಾಡಿದರೆ ಅವರಿಂದ ಹುಟ್ಟುವ ಮಗುವಿಗೆ ಅಸ್ತಮಾ ಸಮಸ್ಯೆ ಬಾಧಿಸುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

ಅಸ್ತಮಾಗೆ ಕಾರಣಗಳು

ಯಾವುದೇ ಒಂದು ಅಂಶದಿಂದ ಅಸ್ತಮಾ ಕಾಣಿಸಿಕೊಳ್ಳುವುದಿಲ್ಲ. ಇದು ಜೀನ್​ಗಳು ಮತ್ತು ಪರಿಸರ ಎರಡರಿಂದಲೂ ಪ್ರಭಾವಿತವಾಗಿರುವ ಬಹುಮುಖಿ ಸ್ಥಿತಿ. ಕುಟುಂಬದಲ್ಲಿ ಅಸ್ತಮಾ ಇತಿಹಾಸ ಹೊಂದಿರುವವರು ಇದರಿಂದ ಬಳಲುವ ಸಾಧ್ಯತೆ ಹೆಚ್ಚು. ತಂಬಾಕು ಹೊಗೆ, ವಾಯು ಮಾಲಿನ್ಯ, ಧೂಳಿನ ಕಣಗಳು ಮತ್ತು ಪರಾಗದಂತಹ ಅಲರ್ಜಿಗಳಿಗೆ ಒಡ್ಡಿಕೊಳ್ಳುವುದರಿಂದಲೂ ಕೆಲವರಲ್ಲಿ ಅಸ್ತಮಾ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳೇನು?

ಸಣ್ಣ ಸಣ್ಣ ಧೂಳಿನ ಕಣಗಳು ನೇರವಾಗಿ ಮನುಷ್ಯನ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಉಸಿರಾಡುವ ಸ್ಥಳದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಇದರ ಪ್ರಭಾವದಿಂದ ಮೂಗು ಸೋರುವಿಕೆ, ಹೆಚ್ಚಾದ ಸೀನು, ಮೂಗಿನ ಹೊಳ್ಳೆಗಳು ಊದಿಕೊಳ್ಳುವುದು ಎದೆ ಕಟ್ಟಿಕೊಳ್ಳುವಿಕೆ, ನೀರು ತುಂಬಿದ ಕಣ್ಣುಗಳು ಮತ್ತು ಗಂಟಲು ಕೆರೆತ ಹೆಚ್ಚಾಗುತ್ತದೆ. ಇಂತಹವರು ದೇಹಕ್ಕೆ ಹೆಚ್ಚು ಆಯಾಸ ಆಗದಂತೆ ನೋಡಿಕೊಳ್ಳಬೇಕು. ವೈದ್ಯರನ್ನು ಸಂರ್ಪಸಿ ಅವರ ಸಲಹೆಗಳನ್ನು ಪಾಲಿಸುವ ಮೂಲಕ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು.

ಇನ್ಹೇಲರ್

ಅಸ್ತಮಾ ಚಿಕಿತ್ಸೆಗೆ ಹೆಚ್ಚಾಗಿ ಇನ್ಹೇಲರ್​ಗಳನ್ನು ವೈದ್ಯರು ಸೂಚಿಸುತ್ತಾರೆ. ಇದು ನೇರವಾಗಿ ಶ್ವಾಸಕೋಶಕ್ಕೆ ಔಷಧವನ್ನು ತಲುಪಿಸುತ್ತದೆ. ಇನ್ಹೇಲರ್​ಗಳಲ್ಲಿ ಎರಡು ವಿಧ- ಅಸ್ತಮಾ ದಾಳಿ ಸಮಯದಲ್ಲಿ ತ್ವರಿತ ಪರಿಹಾರಕ್ಕಾಗಿ ಮತ್ತು ನಿಯಮಿತವಾಗಿ ರೋಗಿಗಳು ತೆಗೆದುಕೊಳ್ಳುವುದಕ್ಕಾಗಿ. ಜತೆಗೆ ಅಸ್ತಮಾ ರೋಗಿಗಳಿಗೆ ಉರಿಯೂತ ಕಡಿಮೆ ಮಾಡಲು ಮತ್ತು ವಾಯುಮಾರ್ಗಗಳನ್ನು ವಿಸ್ತರಿಸಲು ಔಷಧ ಹಾಗೂ ಅಲರ್ಜಿ ತಡೆಗಟ್ಟಲು ಮಾತ್ರೆಗಳನ್ನು ನೀಡಲಾಗುತ್ತದೆ. ಈ ಎಲ್ಲದರ ನಡುವೆ ರೋಗಿಗಳು ವ್ಯಾಯಾಮ ಮತ್ತು ಸಮತೋಲಿತ ಆಹಾರದ ಮೂಲಕ ಜೀವನಶೈಲಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಶ್ವಾಸಕೋಶ ತಜ್ಞ ಡಾ. ನಾಗರಾಜ್.

ಅಸ್ತಮಾ ಪ್ರಕರಣಗಳು ಹೆಚ್ಚಾಗಲು ವಾಯುಮಾಲಿನ್ಯ ಪ್ರಮುಖ ಕಾರಣವಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಮತ್ತು ಈಗಾಗಲೇ ಅಸ್ತಮಾ ಹೊಂದಿರುವವರ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ. ರೋಗ ಲಕ್ಷಣ ಅರಿತು ಆರಂಭದಲ್ಲೇ ಚಿಕಿತ್ಸೆ ಪಡೆದರೆ ಸಮಸ್ಯೆ ಉಲ್ಬಣಿಸುವುದನ್ನು ತಡೆಯಬಹುದು. ಇನ್​ಹೇಲರ್​ಗಳು ವ್ಯಸನಕಾರಿ ಅಲ್ಲ. ಅಸ್ತಮಾ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಜನರಲ್ಲಿ ಅಸ್ತಮಾಗೆ ಕಾರಣ ಮತ್ತು ಚಿಕಿತ್ಸೆ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. | ಡಾ. ಕೆ.ಎಸ್. ಸುದರ್ಶನ್ ಶ್ವಾಸಕೋಶ ತಜ್ಞ

ಚಿಕಿತ್ಸೆಯ ವಿಧಾನಗಳು

ಅಸ್ತಮಾವನ್ನು ಗುಣಪಡಿಸಲಾಗದಿದ್ದರೂ, ಪರಿಣಾಮಕಾರಿ ಚಿಕಿತ್ಸೆ ಮೂಲಕ ನಿಯಂತ್ರಿಸಬಹುದು. ಚಿಕಿತ್ಸೆಯ ಮುಖ್ಯ ಉದ್ದೇಶವೆಂದರೆ ರೋಗಲಕ್ಷಣಗಳನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು, ಶ್ವಾಸಕೋಶದ ಕಾರ್ಯವನ್ನು ಹೆಚ್ಚಿಸುವುದು ಮತ್ತು ಅಸ್ತಮಾ ತೀವ್ರಗೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡುವುದು.