ಚಳಿಗಾಲದಲ್ಲಿ ನಮ್ಮ ಜೀರ್ಣ ಶಕ್ತಿ ಬೇರೆಲ್ಲ ಕಾಲಗಳಿಗಿಂತಲೂ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಜೀರ್ಣಕ್ರಿಯೆಗೆ ಸ್ವಲ್ಪ ಕಷ್ಟಕರವಾದ ಆಹಾರ ಪದಾರ್ಥಗಳನ್ನು ಸೇವಿಸಲು ಇದು ಸರಿಯಾದ ಕಾಲ. ಹಾಗಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ಈ ಕಾಲದಲ್ಲಿ ಹೆಚ್ಚು ಹಬ್ಬಗಳನ್ನು ನಾವು ಆಚರಿಸುವುದು. ಆದ್ದರಿಂದ ಸಿಹಿ ಪ್ರಧಾನವಾದ, ಜಿಡ್ಡಿನ ಅಂಶ ಹೆಚ್ಚಿರುವ ಆಹಾರಗಳನ್ನು ಈ ಕಾಲದಲ್ಲಿ ಹೆಚ್ಚಾಗಿ ಸೇವಿಸಬಹುದು. ಚಳಿಗಾಲದಲ್ಲಿ ತೇವಾಂಶದ ಕೊರತೆಯಿಂದ ದೇಹ ಒಣಗುವುದನ್ನು ತಪ್ಪಿಸಲು ಹಾಲು, ತುಪ್ಪ, ಬೆಣ್ಣೆ, ಎಣ್ಣೆಗಳನ್ನು ಹೆಚ್ಚಾಗಿ ಸೇವಿಸಬೇಕು. ನಿತ್ಯವೂ ಕೊತ್ತಂಬರಿ ಬೀಜ, ಶುಂಠಿ, ಕಾಳುಮೆಣಸು, ಎರಡು ಎಲೆ ತುಳಸಿ, ಹಿಪ್ಪಲಿ, ಸೊಗದೇಬೇರು ಮುಂತಾದವುಗಳನ್ನು ಹಾಕಿ ಕುದಿಸಿದ ನೀರನ್ನು ಸೇವಿಸುವುದು ಒಳ್ಳೆಯದು. ಇದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಅಲರ್ಜಿ, ಅಸ್ತಮಾ, ಸೈನಸೈಟಿಸ್ನಂತಹ ತೊಂದರೆಗಳನ್ನು ತಡೆಯಬಹುದು.
ಈ ಕಾಲದಲ್ಲಿ ಅಭ್ಯಂಗ ಸ್ನಾನ ಮಾಡಲೇಬೇಕು ಎಂದು ಆಯುರ್ವೆದ ಹೇಳುತ್ತದೆ. ಇದರಿಂದ ವಾತವ್ಯಾಧಿಗಳನ್ನು ತಪ್ಪಿಸಬಹುದು ಮತ್ತು ಚಳಿಗಾಲದಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ ಮಂಡಿ ನೋವು, ಸೊಂಟ ನೋವು, ಮೈಕೈ ನೋವುಗಳನ್ನು ಬರದಂತೆ ತಡೆಯಬಹುದು. ಈ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ನಿತ್ಯವೂ ಅಭ್ಯಂಗ ಮಾಡುವುದರಿಂದ ಈ ಸಮಸ್ಯೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ಗಾಣದಲ್ಲಿ ತೆಗೆದಂತಹ ಎಳ್ಳೆಣ್ಣೆಯನ್ನು ಬಳಸುವುದು ಹೆಚ್ಚು ಸೂಕ್ತ. ಸ್ವಲ್ಪ ಪ್ರಮಾಣದಲ್ಲಿ ಸಾಸಿವೆ ಎಣ್ಣೆಯನ್ನು ಸೇರಿಸಿದರೆ ಇನ್ನೂ ಒಳ್ಳೆಯದು. ಅಭ್ಯಂಗದ ನಂತರ ಹೆಚ್ಚು ವ್ಯಾಯಾಮವನ್ನು ಮಾಡಲು ಕೂಡ ಇದು ಸಕಾಲ. ಹಾಗಾಗಿ ಯೋಗಾಸನಗಳು, ನಡಿಗೆ ಅಥವಾ ಜಿಮ್ಮಿಂಗ್ಗಳನ್ನು ತಪ್ಪದೇ ಅಭ್ಯಾಸ ಮಾಡಬೇಕು. ಅಭ್ಯಂಗದ ನಂತರ ಸ್ವಲ್ಪ ಹೊತ್ತು ಎಳೆ ಬಿಸಿಲಿಗೆ ಮೈಯೊಡ್ಡುವುದು ಒಳ್ಳೆಯದು.
ಚಳಿಗಾಲದಲ್ಲಿ ಸ್ನಾನದ ಸಂದರ್ಭದಲ್ಲಿ ದೇಹದ ಮೇಲಿನ ಜಿಡ್ಡನ್ನು ಸಂಪೂರ್ಣವಾಗಿ ತೆಗೆಯುವ ತೀಕ್ಷ್ಣವಾದ ಸಾಬೂನುಗಳನ್ನು ಬಳಸುವ ಬದಲು ಕಡಲೆ ಹಿಟ್ಟು, ಹೆಸರು ಕಾಳಿನ ಹಿಟ್ಟುಗಳನ್ನು ಸ್ನಾನದ ಸಂದರ್ಭದಲ್ಲಿ ಬಳಸುವುದು ಹೆಚ್ಚು ಸೂಕ್ತ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಗಳನ್ನು ಬಳಸಿ ಚರ್ಮವನ್ನು ನುಣುಪಾಗಿ ಇಟ್ಟುಕೊಳ್ಳುವ ಬದಲು 100 ಗ್ರಾಂನಷ್ಟು ಕೊಬ್ಬರಿ ಎಣ್ಣೆಗೆ 15 ರಿಂದ 20 ಗ್ರಾಂ ನಷ್ಟು ಉತ್ತಮ ಗುಣಮಟ್ಟದ ಜೇನುಮೇಣವನ್ನು ಸೇರಿಸಿ ಸ್ವಲ್ಪ ಹೊತ್ತು ಬೆಂಕಿಯಲ್ಲಿ ಕಾಯಿಸಿ ತಯಾರಿಸಿದ ನೈಸರ್ಗಿಕ ಕ್ರೀಮನ್ನು ಬಳಕೆ ಮಾಡುವುದು ಅತ್ಯಂತ ಉಪಯುಕ್ತ. ಇದನ್ನು ಕಾಲು ಒಡಕಿನ ಸಮಸ್ಯೆಯಲ್ಲಿಯೂ ಬಳಸಬಹುದು.
ಜೀರ್ಣಕ್ರಿಯೆ ಚೆನ್ನಾಗಿದ್ದರೂ ಕರಿದ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದು ಸರಿಯಲ್ಲ. ಅದರಲ್ಲೂ ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಮೊಸರು, ಹಾಲು, ತುಪ್ಪ, ಕರಿದ ಪದಾರ್ಥಗಳು ಮತ್ತು ಮಾಂಸಾಹಾರಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಹಗಲು ನಿದ್ದೆ ಮಾಡಬಾರದು. ಬೇಕರಿ ತಿನಿಸುಗಳು, ತಂಪು ಪಾನೀಯಗಳು, ರೆಫ್ರಿಜರೇಟರ್ನಲ್ಲಿ ಇಟ್ಟ ತಂಪು ಪದಾರ್ಥಗಳನ್ನು ಸೇವಿಸಬಾರದು. ಪಂಚಕರ್ಮ ಚಿಕಿತ್ಸೆಗಳು, ಮಣ್ಣಿನ ಸ್ನಾನ (ಮಡ್ಬಾತ್), ಉದ್ವರ್ತನ, ಹೈಡ್ರೋಥೆರಪಿಗಳಂತಹ ಚಿಕಿತ್ಸೆಗಳನ್ನು ತೆಗೆದುಕೊಳ್ಳಲು ಇದು ಒಳ್ಳೆಯ ಕಾಲ.