Smartphones : ಮೂರು ದಿನಗಳ ಕಾಲ ನಿಮ್ಮ ಸ್ಮಾರ್ಟ್‌ಫೋನ್ ಬಳಸದೆ ಇರಲು ನೀವು ರೆಡಿ ಇದ್ದೀರಾ? ಈ ಸವಾಲನ್ನು ನೀವು ಸ್ವೀಕರಿಸುವಿರಾ? ಮೊಬೈಲ್ ಬಳಸುವುದನ್ನು ಬಿಟ್ಟರೆ ಅಂಥದ್ದೇನಾಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಹೊಸ ಅಧ್ಯಯನವೊಂದರ ಪ್ರಕಾರ, ನೀವು ಕೇವಲ 3 ದಿನ ಮೊಬೈಲ್ ಬಳಸುವುದನ್ನು ಬಿಟ್ಟರೆ ನಿಮ್ಮ ಜೀವನದಲ್ಲಿ ಪವಾಡವೇ ನಡೆಯಲಿದೆ ಎಂದು ಹೇಳಿದೆ.
ಅಂದಹಾಗೆ ಹೈಡೆಲ್‌ಬರ್ಗ್ ವಿಶ್ವವಿದ್ಯಾಲಯ ಮತ್ತು ಜರ್ಮನಿಯ ಕಲೋನ್ ವಿಶ್ವವಿದ್ಯಾಲಯದ ಸಂಶೋಧಕರು ಈ ಹೊಸ ಅಧ್ಯಯನವನ್ನು ನಡೆಸಿದ್ದಾರೆ. ಇದರಲ್ಲಿ 18 ರಿಂದ 30 ವರ್ಷ ವಯಸ್ಸಿನ 25 ಯುವಕರು ಭಾಗಿಯಾಗಿದ್ದರು. ಈ ಅಧ್ಯಯನದ ಕೊನೆಯಲ್ಲಿ ಗೊತ್ತಾಗಿದ್ದೇನೆಂದರೆ, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ಮಾನವ ಮೆದುಳಿನ ಕಾರ್ಯನಿರ್ವಹಣೆಗೆ ಭಾರಿ ಅಪಾಯವನ್ನು ಉಂಟು ಮಾಡುತ್ತದೆ ಎಂಬುದು.
ಸ್ಮಾರ್ಟ್‌ಫೋನ್ ಬಳಕೆಯನ್ನು ಮೂರು ದಿನಗಳವರೆಗೆ (72 ಗಂಟೆಗಳು) ಕಡಿಮೆ ಮಾಡುವಂತೆ ಅಧ್ಯಯನದಲ್ಲಿ ಭಾಗವಹಿಸಿದವರನ್ನು ಸಂಶೋಧಕರು ಕೇಳಿಕೊಂಡರು. ಕೇವಲ ಅಗತ್ಯ ಉದ್ದೇಶಗಳಿಗಾಗಿ ಮಾತ್ರ ಮೊಬೈಲ್ ಬಳಸುವಂತೆ ಸೂಚಿಸಲಾಯಿತು. ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡುವ ಮೊದಲೇ ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನ್‌ಗಳು ಮತ್ತು ಮಾನಸಿಕ ಪರೀಕ್ಷೆಗಳನ್ನು ಮಾಡಲಾಗಿತ್ತು. ಅಧ್ಯಯನದ ನಂತರವೂ ಮತ್ತೊಮ್ಮೆ ಎರಡೂ ಪರೀಕ್ಷೆಗಳನ್ನು ಸಂಶೋಧಕರು ಮಾಡಿದರು.
ಎರಡು ಪರೀಕ್ಷೆಗಳ ಫಲಿತಾಂಶಗಳನ್ನು ಹೋಲಿಸಿ ನೋಡಿದಾಗ ಮೊದಲ ಪರೀಕ್ಷೆಯಲ್ಲಿ ಮೆದುಳಿನ ಚಟುವಟಿಕೆ ತುಂಬಾ ನಿಧಾನವಾಗಿತ್ತು ಮತ್ತು ಎರಡನೇ ಪರೀಕ್ಷೆಯಲ್ಲಿ, ಮೊದಲ ಬಾರಿಗೆ ಹೋಲಿಸಿದರೆ ಮೆದುಳಿನ ಚಟುವಟಿಕೆ ಸುಧಾರಿಸಿರುವುದು ಕಂಡು ಬಂದಿದೆ. ಪ್ರತಿದಿನ ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಮೆದುಳಿನ ಕಾರ್ಯವು ವೇಗಗೊಳ್ಳುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಈ ಡಿಜಿಟಲ್ ಯುಗದಲ್ಲಿ, ಸ್ಮಾರ್ಟ್‌ಫೋನ್‌ಗಳ ಬಳಕೆಯನ್ನು ನಿಲ್ಲಿಸುವುದು ಅಸಾಧ್ಯ. ಆದಾಗ್ಯೂ, ನೀವು ನಿಮ್ಮ ಬಳಕೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದರೆ, ನೀವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸುಧಾರಿಸಬಹುದು ಎಂದು ಸಂಶೋಧಕರು ಅಧ್ಯಯನದ ಮೂಲಕ ಗಮನಸೆಳೆದಿದ್ದಾರೆ. (ಏಜೆನ್ಸೀಸ್)