ಒಂದು ದಿನ ವರ್ಧಮಾನ ಮಹಾವೀರ ಮತ್ತು ಗೋಸಾಲ ಒಂದು ಹಳ್ಳಿ ಕಡೆ ಪ್ರಯಾಣಿಸುತ್ತಿದ್ದರು. ಹೋಗುವ ದಾರಿಯಲ್ಲಿ ಗೋಸಾಲ ಒಂದು ಎಳೆಯ ಸಸಿಯನ್ನು ನೋಡಿದ. ಅವನು ಮಹಾವೀರನಲ್ಲಿ ‘ಈ ಚಿಕ್ಕ ಸಸಿ ದೊಡ್ಡದಾಗಿ ಹೂವು ಬಿಡಬಲ್ಲದೇ? ನಿನಗೆ ಏನನ್ನಿಸುತ್ತದೆ?’ ಎಂದು ಕೇಳಿದ. ಮಹಾವೀರ ಆ ಸಸಿಯ ಪಕ್ಕ ನಿಂತು ಸ್ವಲ್ಪ ಹೊತ್ತು ಅದನ್ನು ಕೂಲಂಕಷವಾಗಿ ಪರೀಶೀಲಿಸಿದ ಬಳಿಕ ‘ಈ ಸಸಿ ಖಂಡಿತ ಹೂವು ಬಿಡುತ್ತದೆ. ಆ ಹಂತವನ್ನು ಇದು ತಲುಪುತ್ತದೆ. ಅದನ್ನು ಯಾರೂ ತಡೆಯಲಾರರು’ ಎಂದ.
ಆಗ ತಕ್ಷಣ ಗೋಸಾಲ ಆ ಸಸಿಯನ್ನು ತನ್ನ ಕೈಯಿಂದ ಎಳೆದು ಹೊರತೆಗೆದು, ‘ಈಗಲೂ ಈ ಗಿಡ ಹೂ ಕೊಡಬಲ್ಲದೆಂದು ಹೇಳುತ್ತಿಯಾ?’ ಎಂದು ಕುಹಕವಾಗಿ ನಗುತ್ತಾ ಕೇಳಿದ. ಅವನ ಉದ್ದೇಶವನ್ನು ಅರಿತ ಮಹಾವೀರ ಸುಮ್ಮನೆ ನಸುನಕ್ಕ. ಆದರೆ, ಏನೂ ಹೇಳಲಿಲ್ಲ. ಮುಂದೆ ಅವರಿಬ್ಬರು ಮತ್ತೆ ಪ್ರಯಾಣ ಮುಂದುವರಿಸಿ ಗಮ್ಯಸ್ಥಾನ ಸೇರಿದರು. ಆ ರಾತ್ರಿ ಅಲ್ಲಿ ಮಳೆ ಬೀಳಲು ಪ್ರಾರಂಭವಾಗಿ ಅದು ಮುಂದೆ 10 ದಿನಗಳ ಕಾಲ ಮುಂದುವರಿಯಿತು. ಹಾಗಾಗಿ ಮಹಾವೀರ ಮತ್ತು ಗೋಸಾಲ ಅಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಬಂತು. ಮಳೆ ನಿಂತ ಮೇಲೆ ಅವರಿಬ್ಬರು ಮತ್ತೆ ತಮ್ಮೂರಿಗೆ ಹೊರಟರು. ಈಗ ಮತ್ತೆ ಅವರು ಬಂದಿದ್ದ ದಾರಿಯಲ್ಲೇ ಪಯಣಿಸುತ್ತಿದ್ದರು. ಗೋಸಾಲ ಅಂದು ಕೈಯಾರೆ ಗಿಡವನ್ನು ಕಿತ್ತು ಬಿಸುಟಿದ್ದ ಅದೇ ಜಾಗಕ್ಕೆ ಬಂದರು.
ಏನಾಶ್ಚರ್ಯ! ಅವನು ಕಿತ್ತೆಸೆದಿದ್ದ ಗಿಡದಲ್ಲಿ ಹೂವು ಅರಳಿತ್ತು. ಗೋಸಾಲನಿಗೆ ನಂಬಲಸಾಧ್ಯವಾಯಿತು. ಅವನು ಮಹಾವೀರನಲ್ಲಿ, ‘ಇದು ಹೇಗೆ ಸಾಧ್ಯ? ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಕೈಯಾರೆ ಕಿತ್ತೆಸೆದಿದ್ದ ಗಿಡದಲ್ಲಿ ಹೂವು ಬೆಳೆಯಲು ಹೇಗೆ ಸಾಧ್ಯವಾಯಿತು? ನಿನಗೆ ಅದು ಮೊದಲೆ ಹೇಗೆ ತಿಳಿಯಿತು ವಿವರಿಸುವೆಯಾ?’ ಎಂದ.
ಮಹಾವೀರ ಮುಗುಳ್ನಗುತ್ತ, ‘ನಾನು ಗಿಡವನ್ನು ಅಂದು ಬಹಳ ಜಾಗರೂಕತೆಯಿಂದ ಪರಿಶೀಲಿಸಿದ್ದೆ. ಅಗ ನಾನು ಆ ಗಿಡದಲ್ಲಿ ಅಪಾರವಾದ ಸಂಕಲ್ಪ ಶಕ್ತಿಯನ್ನು ಕಂಡಿದ್ದೆ. ಯಾವುದೇ ಕಷ್ಟಕರವಾದ ಪರಿಸ್ಥಿತಿಯಲ್ಲೂ ಎದ್ದು ನಿಲ್ಲುವ ಶಕ್ತಿ ಕಾಣಿಸಿತ್ತು. ಅದಕ್ಕೆ ನಾನು ಹಾಗಂದಿದ್ದೆ. ಮಳೆಯಿಂದಾಗಿ ಗಿಡದ ಬೇರಿನಲ್ಲಿ ಮಣ್ಣು ಮೆತ್ತಿಕೊಂಡಿತು. ಬೇರು ಈ ಮಣ್ಣಿನ ಒಳಗಡೆ ಹೋಯಿತು. ಅದರ ಸಹಾಯದಿಂದ ಗಿಡ ಮತ್ತೆ ಎದ್ದು ನಿಂತಿತು. ಇದಕ್ಕೆ ಆ ಗಿಡದಲ್ಲಿದ್ದ ಸಂಕಲ್ಪಶಕ್ತಿಯೇ ಕಾರಣ. ನಾನು ಸಾಯುತ್ತೇನೆ ಅಂದುಕೊಂಡಿದ್ದರೆ ಆ ಗಿಡ ಬದುಕುತ್ತಕಲೇ ಇರಲಿಲ’ ಎಂದ.
ನಿಜ ಈ ಚಿಕ್ಕ ಗಿಡದಲ್ಲಿದ್ದ ಮನೋಬಲ ಅದನ್ನು ಸಾವಿನಂಚಿನಿಂದ ಹೊರತಂದು ಹೂವಾಗುವ ಹಂತಕ್ಕೆ ತಲುಪಿಸಿತು. ಯಾವುದೇ ಗೆಲುವಿಗೆ ದೃಢವಾದ ಮನೋಬಲದ ಅಗತ್ಯವಿದೆ. ಪ್ರಪಂಚದ ಎಲ್ಲಾ ದೊಡ್ಡ ಸಾಧನೆಯ ಹಿಂದೆ ಕೂಡ ಒಂದು ಸಾಮಾನ್ಯ ಅಂಶವನ್ನು ಗಮನಿಸಬಹುದು, ಅದುವೇ ಮನೋಬಲ.