- ಉತ್ತಮ ಆರೋಗ್ಯಕ್ಕೆ ಸ್ನಾನ ಬಹಳ ಮುಖ್ಯ ಎಂದು ಎಲ್ಲರೂ ನಂಬುತ್ತಾರೆ
- ಸ್ನಾನ ಮಾಡುವುದರಿಂದ ದೇಹವು ಹಗುರವಾಗಿರುತ್ತದೆ ಮತ್ತು ಮನಸ್ಸು ತಾಜಾವಾಗಿರುತ್ತದೆ
- ಚಳಿಗಾಲ ಬಂದಾಗ ಅನೇಕ ಮಂದಿ ಸ್ನಾನ ಮಾಡುವ ಉತ್ಸಾಹವನ್ನೇ ಕಳೆದುಕೊಳ್ಳುತ್ತಾರೆ
- ಆದ್ದರಂದ ಅನೇಕ ಮಂದಿ ಚಳಿಗಾಲದಲ್ಲಿ ಬಿಸಿನೀರನ್ನು ಆಶ್ರಯಿಸುತ್ತಾರೆ
Winter Bathing : ಉತ್ತಮ ಆರೋಗ್ಯಕ್ಕೆ ಸ್ನಾನ ಬಹಳ ಮುಖ್ಯ ಎಂದು ಎಲ್ಲರೂ ನಂಬುತ್ತಾರೆ. ಸ್ನಾನ ಮಾಡುವುದರಿಂದ ದೇಹವು ಹಗುರವಾಗಿರುತ್ತದೆ ಮತ್ತು ಮನಸ್ಸು ತಾಜಾವಾಗಿರುತ್ತದೆ. ಇದು ಸಾರ್ವಕಾಲಿ ಸತ್ಯ ಕೂಡ ಹೌದು. ಏಕೆಂದರೆ, ಸ್ನಾನ ಮಾಡದಿದ್ದರೆ ಮಾನಸಿಕ ಕಿರಿಕಿರಿ ಉಂಟಾಗುತ್ತದೆ.
ಕೆಲವರು ಪ್ರತಿದಿನ ಸ್ನಾನ ಮಾಡಿದರೆ, ಇನ್ನು ಕೆಲವರು ದಿನ ಬಿಟ್ಟು ದಿನ ಸ್ನಾನ ಮಾಡುತ್ತಾರೆ. ಕೆಲವರಂತೂ ಎರಡ್ಮೂರು ದಿನಗಳಿಗೆ ಒಮ್ಮೆ ಸ್ನಾನ ಮಾಡುತ್ತಾರೆ. ಇದೆಲ್ಲ ಅವರವರ ಇಷ್ಟ. ಆದರೆ, ಚಳಿಗಾಲ ಬಂದಾಗ, ಅನೇಕ ಮಂದಿ ಸ್ನಾನ ಮಾಡುವ ಉತ್ಸಾಹವನ್ನೇ ಕಳೆದುಕೊಳ್ಳುತ್ತಾರೆ. ತಣ್ಣನೆಯ ಗಾಳಿ ಮತ್ತು ತಣ್ಣೀರು ಮನುಷ್ಯನ ದೇಹವನ್ನೇ ಗಢಗಢ ನಡುಗಿಸುತ್ತದೆ. ಆದ್ದರಿಂದ, ಅನೇಕ ಮಂದಿ ಬಿಸಿನೀರನ್ನು ಆಶ್ರಯಿಸುತ್ತಾರೆ ಮತ್ತು ತಣ್ಣೀರು ಮುಟ್ಟುವುದಕ್ಕೂ ಹೆದರುತ್ತಾರೆ.
ಅಂದಹಾಗೆ, ಯಾವುದೇ ನೀರಿನಿಂದ ಸ್ನಾನ ಮಾಡುವುದು ಮತ್ತು ನೀರಿನಲ್ಲಿ ದೀರ್ಘಕಾಲ ಇರುವುದು ನೈಸರ್ಗಿಕವಾಗಿ ಚರ್ಮದ ನೈಸರ್ಗಿಕ ರಕ್ಷಣಾತ್ಮಕ ಪದರವನ್ನು ದುರ್ಬಲಗೊಳಿಸುತ್ತದೆ. ವಿಶೇಷವಾಗಿ, ದೇಹವನ್ನು ಆಗಾಗ್ಗೆ ತೊಳೆಯುವುದು ಹೊರಗಿನಿಂದ ಬರುವ ಸೂಕ್ಷ್ಮಜೀವಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯನಿರ್ವಹಿಸುವಂತಹ ನೈಸರ್ಗಿಕ ಎಣ್ಣೆ ಅಥವಾ ತೈಲವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಚಳಿಗಾಲದಲ್ಲಿ ಚರ್ಮವು ಒಣಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದರ ನಡುವೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಚಳಿಗಾಲದಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸುವುದರಿಂದ ಶೇ.34 ರಷ್ಟು ಜೀವಿತಾವಧಿ ಹೆಚ್ಚಾಗುತ್ತದೆಯಂತೆ! ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗೆ ಇಡಲು ನಮ್ಮ ರೋಗನಿರೋಧಕ ಶಕ್ತಿ ತಂಬಾ ಕಷ್ಟಪಡುತ್ತದೆ. ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಕಡಿಮೆ ಆಗುತ್ತದೆ ಮತ್ತು ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ. ಇದರಿಂದ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ, ನಿತ್ಯವೂ ಸ್ನಾನ ಮಾಡುವುದರಿಂದ ನೈಸರ್ಗಿಕ ತೈಲ ಕಡಿಮೆಯಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಹೆಚ್ಚಾಗಿ ಸ್ನಾನ ಮಾಡಬೇಡಿ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಆದರೆ, ತಜ್ಞರು ಈ ಮಾಹಿತಿ ನಿಜವಲ್ಲ ಎಂದು ಹೇಳುತ್ತಾರೆ. ಈ ಎಲ್ಲಾ ಅಧ್ಯಯನಗಳು ಪ್ರಾಣಿಗಳ ಮೇಲಿನ ಅಧ್ಯಯನಗಳು ಮಾತ್ರ. ಮಾನವರಲ್ಲಿಯೂ ಇದೇ ಪರಿಣಾಮ ಕಂಡುಬರುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಳಿಗಾಲದಲ್ಲಿ ಸ್ನಾನ ಮಾಡದಿರುವುದು ಜೀವಿತಾವಧಿಯನ್ನು ಹೆಚ್ಚಿಸುತ್ತದೆ ಎಂಬ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ಬೆಂಬಲವಿಲ್ಲ ಎಂದಿದ್ದಾರೆ.
ಅದೇ ಸಮಯದಲ್ಲಿ, ಪ್ರತಿದಿನ ಸ್ನಾನ ಮಾಡುವುದು ಅನಿವಾರ್ಯವಲ್ಲ ಎಂಬ ಅಭಿಪ್ರಾಯವೂ ಹೆಚ್ಚಾಗಿದೆ. ಹೌದು, ಸ್ನಾನ ಮಾಡಲು ಭಯಪಡುವ ಅಗತ್ಯವಿಲ್ಲ ಮತ್ತು ಅತಿಯಾದ ಕಾಳಜಿ ವಹಿಸುವ ಅಗತ್ಯವಿಲ್ಲ. ದಿನವಿಡೀ ಹೊರಾಂಗಣದಲ್ಲಿ ಇರುವವರು, ಹೆಚ್ಚು ಬೆವರು ಸುರಿಸುವವರು ಮತ್ತು ದೈಹಿಕ ಕೆಲಸ ಮಾಡುವವರು ಆಗಾಗ ಸ್ನಾನ ಮಾಡಬಹುದು. ಆದರೆ, ಮನೆಯಲ್ಲಿಯೇ ಇರುವವರು ಅಥವಾ ಶುಷ್ಕ ವಾತಾವರಣದಲ್ಲಿ ವಾಸಿಸುವವರು ಪ್ರತಿದಿನ ತಮ್ಮ ದೇಹವನ್ನು ಸೋಪಿನಿಂದ ಸ್ಕ್ರಬ್ ಮಾಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಅಂದಹಾಗೆ, ಸ್ನಾನ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದೇನೆಂದರೆ, ಪ್ರತಿದಿನ ದೇಹವನ್ನು ಚೆನ್ನಾಗಿ ಉಜ್ಜುವುದು ಮತ್ತು ತೊಳೆಯುವುದರಿಂದ ಚರ್ಮದ ಮೇಲಿನ ಒಳ್ಳೆಯ ಬ್ಯಾಕ್ಟೀರಿಯಾ ಕಡಿಮೆಯಾಗುತ್ತದೆ. ಈ ಸೂಕ್ಷ್ಮಜೀವಿಗಳು ಚರ್ಮವನ್ನು ರಕ್ಷಿಸುವುದಲ್ಲದೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ತುಂಬಾ ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ಚರ್ಮವು ಬಿರುಕು ಬಿಡಬಹುದು, ಕೆಂಪು ಬಣ್ಣಕ್ಕೆ ತಿರುಗಬಹುದು ಮತ್ತು ಸೋಂಕುಗಳಿಗೆ ಗುರಿಯಾಗಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.