- ಇತ್ತೀಚಿನ ದಿನಮಾನದಲ್ಲಿ ಆರೋಗ್ಯ ವಲಯಗಳಲ್ಲಿ ಬ್ಲ್ಯಾಕ್ ಕಾಫಿ ಬಹುತೇಕ ಖ್ಯಾತಿಯನ್ನು ಗಳಿಸಿದೆ
- ಯಕೃತ್ತನ್ನು ನಿರ್ವಿಷಗೊಳಿಸುವ ಟಾನಿಕ್ ಎಂದೇ ಬ್ಲ್ಯಾಕ್ ಕಾಫಿಯನ್ನು ಪ್ರಚಾರ ಮಾಡಲಾಗಿದೆ
- ಹಾಗಾದರೆ ಕಾಫಿ ಮತ್ತು ಯಕೃತ್ತಿನ ಕಾಯಿಲೆಯ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
Black Coffee : ಇತ್ತೀಚಿನ ದಿನಮಾನದಲ್ಲಿ ಆರೋಗ್ಯ ವಲಯಗಳಲ್ಲಿ ಬ್ಲ್ಯಾಕ್ ಕಾಫಿ ಬಹುತೇಕ ಖ್ಯಾತಿಯನ್ನು ಗಳಿಸಿದೆ. ಇದನ್ನು ಕೊಬ್ಬು ಸುಡುವ ಪಾನೀಯ ಎಂಬ ಮಾತಿನಿಂದಿಡಿದು ಯಕೃತ್ತನ್ನು ನಿರ್ವಿಷಗೊಳಿಸುವ ಟಾನಿಕ್ವರೆಗೂ ಪ್ರಚಾರ ಮಾಡಲಾಗಿದೆ. ಸಾಮಾಜಿಕ ಜಾಲತಾಣ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಬ್ಲ್ಯಾಕ್ ಕಾಫಿಯನ್ನು ಯಕೃತ್ತಿನ ಸಮಸ್ಯೆಗೆ "ರಾಮಬಾಣ" ಎಂದು ಕರೆದಿದೆ ಮತ್ತು ರೋಗ ತಡೆಗಟ್ಟುವಿಕೆಗಾಗಿ ಜನರು ದಿನಕ್ಕೆ ಹಲವಾರು ಕಪ್ ಬ್ಲ್ಯಾಕ್ ಕಾಫಿಗಳನ್ನು ಕುಡಿಯಲು ಪ್ರೋತ್ಸಾಹಿಸುತ್ತಿದೆ.
ಕಾಫಿ ಮತ್ತು ಯಕೃತ್ತಿನ ಕಾಯಿಲೆಯ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
ಕಳೆದ ದಶಕದಲ್ಲಿ ನಡೆಸಿದ ಸಂಶೋಧನೆಯು, ವಿಶೇಷವಾಗಿ ಸಕ್ಕರೆ ಇಲ್ಲದೆ ಬ್ಲ್ಯಾಕ್ ಕಾಫಿ ಸೇವನೆಯು ಉತ್ತಮ ಯಕೃತ್ತಿನ ಆರೋಗ್ಯ ಮತ್ತು ದೀರ್ಘಕಾಲದ ಯಕೃತ್ತಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ. ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು, ಕ್ಲೋರೊಜೆನಿಕ್ ಆಮ್ಲಗಳು ಮತ್ತು ಸಂಯುಕ್ತಗಳಿವೆ. ಅದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತಿನ ಕೋಶಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತದೆ ಎನ್ನುವುದನ್ನು ಸಂಶೋಧನೆ ಕಂಡುಕೊಂಡಿದೆ.
ಆದರೆ, ಕಾಫಿಯು ಯಕೃತ್ತಿನ ಆರೋಗ್ಯಕ್ಕೆ ಬೆಂಬಲ ನೀಡುತ್ತದೆಯೇ ಹೊರತು ಯಾವುದೇ ರೀತಿಯ ಚಿಕಿತ್ಸಕವಲ್ಲ ಎಂದು ವೈದ್ಯಕೀಯ ಸಂಶೋಧನೆಗಳಲ್ಲಿ ಕಂಡುಬಂದಿದೆ. ಈಗಾಗಲೇ ಯಕೃತ್ತಿನ ಕಾಯಿಲೆ ಇರುವ ಜನರನ್ನು ಗುಣಪಡಿಸಲು ಬ್ಲ್ಯಾಕ್ ಕಾಫಿಗೆ ಸಾಧ್ಯವಿಲ್ಲ ಎಂದು ಸಂಶೋಧನೆ ಹೇಳಿದೆ.
ಬ್ಲ್ಯಾಕ್ ಕಾಫಿ ನಿಜವಾಗಿಯೂ ಯಕೃತ್ತಿಗೆ ಎಷ್ಟು ಪ್ರಯೋಜನಕಾರಿ?
ದಿನಕ್ಕೆ 2 ರಿಂದ 3 ಕಪ್ ಬ್ಲ್ಯಾಕ್ ಕಾಫಿ ಕುಡಿಯುವುದು ಉತ್ತಮ. ಆದರೆ, ಇದರ ಪ್ರಮಾಣ ಹೆಚ್ಚಾದರೆ ಅಸಿಡಿಟಿ, ಆತಂಕ, ಹೃದಯ ಬಡಿತ ಹೆಚ್ಚಳ, ನಿದ್ರಾಹೀನತೆ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಾಫಿಯಿಂದ ಯಕೃತ್ತಿನಲ್ಲಿ ಉರಿಯೂತ ಕಡಿಮೆಯಾಗುತ್ತದೆ ಮತ್ತು ಯಕೃತ್ತಿನಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸುತ್ತದೆ.
ಆದರೆ, ಕೊಬ್ಬು ಕರಗಿಸಲು ಬ್ಲ್ಯಾಕ್ ಕಾಫಿಯೇ ಮೂಲವಲ್ಲ. ಜೀವನಶೈಲಿಯ ಬದಲಾವಣೆಗಳೂ ಕೂಡ ತುಂಬಾ ಮುಖ್ಯವಾಗಿದೆ. ನಿಯಮಿತ ವ್ಯಾಯಾಮ, ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡುವುದು, ಮದ್ಯಪಾನವನ್ನು ಮಿತಿಗೊಳಿಸುವುದರಿಂದ ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಬಹುದು, (ಏಜನ್ಸೀಸ್).